ಕಲಬುರಗಿ: ತನ್ನ ಸಹೋದರನ ಮದುವೆಗಾಗಿ ಪತ್ನಿಯನ್ನು ಕರೆಯಲು ಆಕೆಯ ತವರು ಮನೆಗೆ ಹೋದ ಗಂಡನನ್ನು ಕೊಲೆ ಮಾಡಿದ ಆರೋಪದಲ್ಲಿ ಪತ್ನಿಯ ಅಣ್ಣ (ಬಾಮೈದ) ಸೇರಿ 10 ಮಂದಿ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಗಾಜಿಪುರದ ನಿವಾಸಿ ಆನಂದಕುಮಾರ ಶಾಮರಾವ (28) ಕೊಲೆಯಾದ ಯುವಕ. ಕೊಲೆ ಆರೋಪದಲ್ಲಿ ಕುವೆಂಪು ನಗರದ ನಿವಾಸಿ ಟೋನಿ ನಾಟೀಕರ್‌ನನ್ನು (24) ಬಂಧಿಸಲಾಗಿದೆ. ಆನಂದ ಪತ್ನಿ ಸ್ನೇಹಾ (20) ಅವರ ಕುಮ್ಮಕ್ಕಿನಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿಸಿ ಮೃತರ ತಾಯಿ ದೇವಮ್ಮ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ನೇಹಾ, ಆಕೆಯ ಅಣ್ಣ ಟೋನಿ, ಸುಲೋಚನಾ ಅರುಣಕುಮಾರ, ಯಶೋಧಾ, ಶರಣ, ಬಸವರಾಜ ಈರಪ್ಪ, ರಘು ಈರಪ್ಪ, ರುಕ್ಕಪ್ಪ ಈರಪ್ಪ, ಲಕ್ಷ್ಮಿ ಈರಪ್ಪ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಚಾಕುವಿನಿಂದ ಹಲ್ಲೆಗೆ ಒಳಗಾಗಿದ್ದ ಆನಂದ ಜಿಮ್ಸ್‌ಗೆ ದಾಖಲಾಗಿದ್ದ. ಚಿಕಿತ್ಸೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ. ಕೊಲೆ ಯತ್ನ ಪ್ರಕರಣವು ಕೊಲೆಯ ಕೇಸ್ ಆಗಿ ಮಾರ್ಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.
‘ಆನಂದ– ಸ್ನೇಹಾ ಅವರು ಪ್ರೀತಿಸಿ ಮದುವೆ ಆಗಿದ್ದು, ಆಗಾಗ ಜಗಳ ಆಗುತ್ತಿತ್ತು. ಎರಡು ತಿಂಗಳ ಹಿಂದೆ ಮನಸ್ತಾಪವು ವಿಕೋಪಕ್ಕೆ ತಿರುಗಿ, ಸ್ನೇಹಾ ಅವರು ತವರು ಮನೆಗೆ ಹೋದರು. ಆನಂದ ಸಹೋದರ ಸುರೇಶ ಅವರ ಮದುವೆ ನಿಶ್ಚಯವಾಗಿತ್ತು. ಸಹೋದರನ ಮದುವೆಗೆ ಪತ್ನಿಯನ್ನು ಕರೆದುಕೊಂಡು ಬರಲು ಸ್ನೇಹಾ ಅವರ ತವರು ಮನೆಗೆ ಹೋಗಿದ್ದರು’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಅವರು ಮಾಧ್ಯಮಗಳಿಗೆ ತಿಳಿಸಿದರು.
‘ಸ್ನೇಹಾ ಅವರನ್ನು ಗಂಡನೊಂದಿಗೆ ಕಳುಹಿಸಲು ಟೋನಿ ಹಾಗೂ ಆತನ ಜತೆಗೆ ಇದ್ದವರು ನಿರಾಕರಿಸಿದ್ದರು. ಈ ವೇಳೆಯ ಜಗಳ ವಿಕೋಪಕ್ಕೆ ತಿರುಗಿ ಟೋನಿ ಚಾಕುವಿನಿಂದ ಆನಂದ ಅವರ ಎಡಗಾಲಿಗೆ ಬಲವಾಗಿ ಇರಿದರು. ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಬದುಕಿ ಉಳಿಯಲಿಲ್ಲ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆನಂದನೇ ಚಾಕು ತಂದು ಹಲ್ಲೆಗೆ ಯತ್ನಿಸಿದ್ದ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ. ಎಲ್ಲ ಆಯಾಮಗಳಿಂದ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.