
ಜೇವರ್ಗಿ: ಪಟ್ಟಣದಲ್ಲಿ ಬಿ.ಎಸ್‌ಸಿ ನರ್ಸಿಂಗ್ ಕಾಲೇಜ್ ಪ್ರಾರಂಭಿಸಲು ಸರ್ಕಾರ ತಾತ್ವಿಕ ಅನುಮೋದನೆ ನೀಡಿದ್ದು, ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕಿನ ವಿದ್ಯಾರ್ಥಿಗಳು ಸ್ಥಳೀಯವಾಗಿಯೇ ಬಿ.ಎಸ್‌ಸಿ ನರ್ಸಿಂಗ್ ಶಿಕ್ಷಣ ಪಡೆಯಬಹುದಾಗಿದೆ.
ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯಸಿಂಗ್ ಅವರು ಜೇವರ್ಗಿ ಪಟ್ಟಣಕ್ಕೆ ನರ್ಸಿಂಗ್ ಕಾಲೇಜು ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅವರ ಪ್ರಸ್ತಾವನೆ ಮೇರೆಗೆ ಸರ್ಕಾರ ₹9.85 ಕೋಟಿ ವೆಚ್ಚದಲ್ಲಿ ಕಾಲೇಜು ಮಂಜೂರು ಮಾಡಿ, ಕೆಕೆಆರ್‌ಡಿಬಿ ಅನುದಾನದಲ್ಲಿ ಆರಂಭಿಸಲು ಘೋಷಿಸಿದೆ.
ಕಾಲೇಜನ್ನು ತಾತ್ಕಾಲಿಕವಾಗಿ ಜೇವರ್ಗಿ ಪಟ್ಟಣದ ಹೊರವಲಯದ ಕಟ್ಟಿಸಂಗಾವಿ ಹತ್ತಿರ ನಿರ್ಮಿಸಲಾಗಿರುವ ತಾಯಿ-ಮಕ್ಕಳ ಆಸ್ಪತ್ರೆಯ ಕಟ್ಟಡದಲ್ಲಿ ಆರಂಭಿಸಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಾಲಿಯಿರುವ ಆಸ್ಪತ್ರೆಯ ಕಟ್ಟಡವನ್ನು ನರ್ಸಿಂಗ್ ಕಾಲೇಜು ಪ್ರಾರಂಭಿಸಲು ಅನುಮೋದನೆ ಸಹ ನೀಡಿದೆ.
ಬಿ.ಎಸ್‌ಸಿ ನರ್ಸಿಂಗ್ ಕಾಲೇಜು ಕಟ್ಟಡಕ್ಕೆ ಕಟ್ಟಿಸಂಗಾವಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಬಳಿಯ ಧರ್ಮಸಿಂಗ್ ಕಲ್ಯಾಣ ಮಂಟಪ ಹತ್ತಿರವಿರುವ 2 ಎಕರೆ ಜಮೀನಿನಲ್ಲಿ, ಮುಂದಿನ ದಿನದಲ್ಲಿ ಕಟ್ಟಡ ನಿರ್ಮಿಸಲು ಸಂಪೂರ್ಣ ಅನುದಾನ ಮಂಜೂರಾತಿ ಪಡೆದು ಕಟ್ಟಡ ನಿರ್ಮಿಸುವ ಯೋಜನೆ ಶಾಸಕ ಡಾ.ಅಜಯಸಿಂಗ್ ಅವರದ್ದಾಗಿದೆ.
ವಿದ್ಯಾರ್ಥಿನಿಲಯ ಕಟ್ಟಲು ಹಾಗೂ 2025-26, 2026-27 ಮತ್ತು 2027-28ನೇ ಸಾಲಿನ 3 ವರ್ಷಗಳ ಅವಧಿಗೆ ಕಾಲೇಜಿನ ಸಿಬ್ಬಂದಿ ವೇತನ ಮತ್ತು ಮೂಲ ಸೌಕರ್ಯಗಳಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಬಳಕೆ ಮಾಡಲಾಗುತ್ತಿದೆ. ಕಾಲೇಜು ಪ್ರಾರಂಭಿಸಲು ತಾತ್ವಿಕ ಅನುಮೋದನೆ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಮಾನ್ಯತೆ ವರದಿ ಪಡೆಯಲಾಗಿದ್ದು, ಅಗತ್ಯವಾದ ಹುದ್ದೆಗಳಿಗೆ ಮಂಜೂರಾತಿಗಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಸಹ ಪಡೆಯಲಾಗಿದೆ.
ಪಟ್ಟಣದಲ್ಲಿ ಆರಂಭವಾಗುತ್ತಿರುವ ಬಿ.ಎಸ್‌ಸಿ ನರ್ಸಿಂಗ್ ಕಾಲೇಜ್ ಜಿಲ್ಲೆಯಲ್ಲಿಯೇ ಮೂರನೇ ಸರ್ಕಾರಿ ಬಿ.ಎಸ್‌ಸಿ ನರ್ಸಿಂಗ್ ಕಾಲೇಜ್ ಆಗಿದ್ದು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಪಟ್ಟಣಕ್ಕೆ ಸರ್ಕಾರಿ ಬಿ.ಎಸ್‌ಸಿ ನರ್ಸೀಂಗ್ ಕಾಲೇಜು ಅವಶ್ಯವಿದ್ದು, 2025-26ರ ಬಜೆಟ್‌ನಲ್ಲಿ ಘೋಷಿಸಿದ್ದಂತೆ ಸರ್ಕಾರ ಕಾಲೇಜು ಆರಂಭಕ್ಕೆ ತಾತ್ವಿಕ ಅನುಮೋದನೆ ನೀಡಿದೆ. ಇದರಿಂದ ಜೇವರ್ಗಿ, ಯಡ್ರಾಮಿ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.
ಧರ್ಮಸಿಂಗ್ ಫೌಂಡೇಶನ್ ವತಿಯಿಂದ ಕಾಲೇಜು ನಿರ್ಮಾಣಕ್ಕೆ 2 ಎಕರೆ ಜಮೀನು ದಾನವಾಗಿ ನೀಡಲಾಗುತ್ತಿದ್ದು ಕೆಕೆಆರ್‌ಡಿಬಿ ವತಿಯಿಂದ ಕಟ್ಟಡ ನಿರ್ಮಾಣಕ್ಕೆ ₹9.58 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದುಡಾ.ಅಜಯಸಿಂಗ್ ಅಧ್ಯಕ್ಷ ಕೆಕೆಆರ್‌ಡಿಬಿ ಶಾಸಕರು ಜೇವರ್ಗಿ
2025-26ನೇ ಸಾಲಿನ ಪ್ರವೇಶ ಪ್ರಾರಂಭವಾಗಿದ್ದು ಈಗಾಗಲೇ 20 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಬರುವ ಅ.30 ರಂದು ನೇರ ಸಂದರ್ಶನ ಕರೆಯಲಾಗಿದೆ. ಜೇವರ್ಗಿ ಹಾಗೂ ಯಡ್ರಾಮಿ ಭಾಗದ ವಿದ್ಯಾರ್ಥಿಗಳು ಸರ್ಕಾರಿ ನರ್ಸಿಂಗ್ ಕಾಲೇಜಿನ ಸದುಪಯೋಗ ಪಡೆದುಕೊಳ್ಳಬೇಕುಸ್ವಾತಿ ಪೌಲ್ ಪ್ರಾಂಶುಪಾಲೆ ಬಿ.ಎಸ್‌ಸಿ ನರ್ಸಿಂಗ್ ಕಾಲೇಜು ಜೇವರ್ಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.