ADVERTISEMENT

ಕಲಬುರಗಿ: ಸನ್ನತಿಯಲ್ಲಿ 14ರಂದು ಧಮ್ಮ ಉತ್ಸವ

ಬುದ್ಧನ ಮೂರ್ತಿ ಪ್ರತಿಷ್ಠಾಪನೆ; ದಲಿತ ಮುಖಂಡ ವಿಠ್ಠಲ ದೊಡ್ಡಮನಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 16:05 IST
Last Updated 11 ನವೆಂಬರ್ 2021, 16:05 IST
ಡಾ.ವಿಠ್ಠಲ ದೊಡ್ಡಮನಿ
ಡಾ.ವಿಠ್ಠಲ ದೊಡ್ಡಮನಿ   

ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ಸನ್ನತಿಯಲ್ಲಿ (ಕನಗನಹಳ್ಳಿ) ಇದೇ 14ರಂದು ಧಮ್ಮ ಉತ್ಸವ ಹಾಗೂ ಬುದ್ಧ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬುದ್ಧ ಧಮ್ಮ ಸಂಘದ ಅಧ್ಯಕ್ಷ ಡಾ.ವಿಠ್ಠಲ ದೊಡ್ಡಮನಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರಿವಿನ ನಡಿಗೆ ಬೌದ್ಧ ಧಮ್ಮದ ಕಡೆಗೆ ಎಂಬ ಘೋಷಣೆಯೊಂದಿಗೆ ಸನ್ನತಿಯಲ್ಲಿರುವ ಶಾಕ್ಯ ಮಹಾಚೈತ್ಯ ಬುದ್ಧ ವಿಹಾರದಲ್ಲಿ ನಡೆಯಲಿರುವ ಉತ್ಸವದ ಸಾನ್ನಿಧ್ಯವನ್ನು ನಾಗಪುರದ ದೀಕ್ಷಾ ಭೂಮಿ ಅಧ್ಯಕ್ಷರಾದ ಭಂತೆ ನಾಗಾರ್ಜುನ ಸುರಾಯಿ ಸಸಾಯಿ, ಹತ್ಯಾಳದ ಭಂತೆ ಧಮ್ಮನಾಗ, ವಿಜಯಪುರದ ಭಂತೆ ಬೋಧಿ ಪ್ರಜ್ಞೆ ವಹಿಸುವರು. ಭಂತೆ ಧಮ್ಮನಂದ, ಭಂತೆ ವರಜ್ಯೋತಿ, ಭಂತೆ ಜ್ಞಾನಸಾಗರ, ಭಂತೆ ರೇವತ್, ಭಂತೆ ಧರ್ಮಪಾಲ, ಭಂತೆ ಸಂಘಪಾಲ, ಭಂತೆ ಸಾರಿಪುತ್ರ ವಹಿಸುವರು‘ ಎಂದು ಹೇಳಿದರು.

‌‘ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಉತ್ಸವಕ್ಕೆ ಚಾಲನೆ ನೀಡುವರು. ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಕೆಬಿಜೆಎನ್‌ಎಲ್ ತಾಂತ್ರಿಕ ನಿರ್ದೇಶಕ ಕೆ.ಜಿ.ಮಹೇಶ, ಬುದ್ಧ ಧಮ್ಮ ಸಂಘದ ಗೌರವಾಧ್ಯಕ್ಷ ಟೋಪಣ್ಣ ಕೊಮಟೆ, ಸುರೇಶ ವರ್ಮಾ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸಮಾರಂಭದಲ್ಲಿ ಡಾ.ಎಸ್.ಎಚ್.ಕಟ್ಟಿ ಮತ್ತು ರವಿಕಿರಣ ಒಂಟಿ ಅವರನ್ನು ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ಅನೇಕರು ಬೌದ್ಧ ಧರ್ಮ ಸ್ವೀಕಾರ ಮಾಡಲಿದ್ದಾರೆ’ ಎಂದು ದೊಡ್ಡಮನಿ ವಿವರಿಸಿದರು.

ADVERTISEMENT

‘ಬೌದ್ಧ ಧರ್ಮ ಹಿಂದು ಧರ್ಮದ ಭಾಗವಲ್ಲ. ಭಗವಾನ್‌ ಬುದ್ಧರು ಎಲ್ಲರಿಗೂ ಸಮಾನತೆ ನೀಡುವ ಉದ್ದೇಶದಿಂದ ಈ ಧರ್ಮದ ಹುಟ್ಟಿಗೆ ಕಾರಣರಾದರು. ಆದರೆ, ಶೃಂಗೇರಿ ಹಾಗೂ ಇತರ ಪೀಠಗಳ ಸ್ವಾಮೀಜಿಗಳು ಸಲ್ಲದ ಹೇಳಿಕೆ ನೀಡಿ ಗೊಂದಲ ಮೂಡಿಸುವುದು ನಿಲ್ಲಿಸಬೇಕು’ ಎಂದರು.

ಯತ್ನಾಳಗೆ ಮುತ್ತಿಗೆ: ಬೌದ್ಧ ಧರ್ಮ ಮತ್ತು ದಲಿತರ ಕುರಿತು ಹಗುರವಾಗಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಕಂಡಲ್ಲಿ ಮುತ್ತಿಗೆ ಹಾಕಲಾಗುವುದು. ಕಲಬುರಗಿ ನಗರಕ್ಕೆ ಬಂದರೆ ಘೇರಾವ್ ಹಾಕುತ್ತೇವೆ ಎಂದು ವಿಠ್ಠಲ ದೊಡ್ಡಮನಿ ಸ್ಪಷ್ಟಪಡಿಸಿದರು.

ಬಿಜೆಪಿಯವರು ಅಸ್ಪೃಶ್ಯರಂತೆ ಸಂವಿಧಾನದವನ್ನು ನೋಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಸಂವಿಧಾನ ಮತ್ತು ಡಾ.ಅಂಬೇಡ್ಕರ್ ಬಗ್ಗೆ ಮಾತನಾಡುವಾಗ ಜಾಗೃತೆಯಿಂದ ಮಾತನಾಡಲಿ. ಬಿಜೆಪಿ ಪಕ್ಷದಲ್ಲಿ ಏನಾದರೂ ಮಾಡಿಕೊಳ್ಳಲಿ. ಆದರೆ, ನಮ್ಮ ತಂಟೆಗೆ ಬಂದರೆ ಮಾತ್ರ ನಾವು ಬಿಡಲ್ಲ ಎಂದು ತಾಕೀತು ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸುರೇಶ ಮೆಂಗನ್, ಲಕ್ಷ್ಮಿಕಾಂತ ಹುಬ್ಬಳ್ಳಿ, ಬಾಬು ಬಗದಳ್ಳಿ, ಸಾಯಬಣ್ಣ ಬನ್ನೆಟ್ಟಿ, ಭರತ ಧನ್ನಾ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.