ADVERTISEMENT

‘ಬುದ್ಧಗಯಾ ಮಹಾವಿಹಾರ ಪಡೆಯಲು ಸಂಕಲ್ಪ ಮಾಡಿ’

ಬೌದ್ಧ ಸಮ್ಮೇಳನದಲ್ಲಿ ಮಹಾವಿಹಾರ ಮುಕ್ತಿ ಆಂದೋಲನ ಯೋಧ ಭಂತೆ ವಿನಾಚಾರ ಕರೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:39 IST
Last Updated 26 ಅಕ್ಟೋಬರ್ 2025, 7:39 IST
ಕಲಬುರಗಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೌದ್ಧ ಸಮ್ಮೇಳನ ಮತ್ತು ವಿಚಾರ ಸಂಕಿರಣದಲ್ಲಿ ಗೌತಮ ಬುದ್ಧ ಮೂರ್ತಿ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರಕ್ಕೆ ಭಂತೇಜಿಗಳು ಪುಷ್ಪಾರ್ಚನೆ ಮಾಡಿದರು
ಕಲಬುರಗಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೌದ್ಧ ಸಮ್ಮೇಳನ ಮತ್ತು ವಿಚಾರ ಸಂಕಿರಣದಲ್ಲಿ ಗೌತಮ ಬುದ್ಧ ಮೂರ್ತಿ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರಕ್ಕೆ ಭಂತೇಜಿಗಳು ಪುಷ್ಪಾರ್ಚನೆ ಮಾಡಿದರು   

ಕಲಬುರಗಿ: ‘ ಬೌದ್ಧರ ಅಸ್ಮಿತೆಯಾದ ಬಿಹಾರ ರಾಜ್ಯದಲ್ಲಿರುವ ಬುದ್ಧಗಯಾ ಮಹಾಬೋಧಿ ಮಹಾವಿಹಾರವನ್ನು ಪಡೆದೇ ತೀರುತ್ತೇವೆ ಎಂದು ನಾವು ಸಂಕಲ್ಪ ಮಾಡಬೇಕಿದೆ’ ಎಂದು ಬುದ್ಧಗಯಾ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನ ಯೋಧ ಭಂತೆ ವಿನಾಚಾರ ಹೇಳಿದರು.

ಬುದ್ಧಗಯಾ ಮಹಾಬೋಧಿ ಮಹಾವಿಹಾರ ಬಿಟಿ ಆ್ಯಕ್ಟ್ 1949ನಿಂದ ಮುಕ್ತಿಗಾಗಿ ಧಮ್ಮ-ಧ್ವಜ ಪಂಚಶೀಲ ಧಮ್ಮಯಾತ್ರೆಯ ಅಂಗವಾಗಿ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶನಿವಾರ ಬೌದ್ಧ ಸಮ್ಮೇಳನ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬೌದ್ಧ ಸಮ್ಮೇಳನ ಮತ್ತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಈ ದೇಶದಲ್ಲಿ ಹಿಂದೂ, ಮುಸ್ಲಿಂ ಹಾಗೂ ಇಸಾಯಿಗಳಿಗೆ ಅವರದ್ದೇ ಆದ ಸಂಸ್ಕೃತಿ ಇದೆ. ಮಂದಿರ, ಮಸೀದಿ ಮತ್ತು ಚರ್ಚ್‌ ತಮ್ಮದೆಂದು ಗರ್ವದಿಂದ ಹೇಳುತ್ತಾರೆ. ಆದರೆ, ಬೌದ್ಧರು ಬಿಹಾರದಲ್ಲಿನ ಬುದ್ಧಗಯಾ ಮಹಾಬೋಧಿ ಮಹಾವಿಹಾರ ನಮ್ಮ ಹತ್ತಿರ ಇದೆ ಎಂದು ತಲೆ ಎತ್ತಿ ಹೇಳುವ ಪರಿಸ್ಥಿತಿಯಲ್ಲಿ ಇಲ್ಲದಂತಾಗಿದೆ’ ಎಂದರು.

ADVERTISEMENT

‘ಬುದ್ಧಗಯಾ ಮಹಾಬೋಧಿ ಮಹಾವಿಹಾರ ಅಸ್ತಿತ್ವದ ಹೋರಾಟ ಹೊಸದೇನಲ್ಲ. ಅನಾಗರಿಕ ಧಮ್ಮಪಾಲ ಅವರು ಶ್ರೀಲಂಕಾದಿಂದ ಭಾರತಕ್ಕೆ ಬಂದು ಇಡೀ ವಿಶ್ವಕ್ಕೆ ಬೌದ್ಧಧರ್ಮ ಪಸರಿಸುವ ಕೆಲಸ ಮಾಡಿದರು. ಆ ಸಮಯದಲ್ಲಿ ಮಹಾರಾಷ್ಟ್ರ, ಉತ್ತರಪ್ರದೇಶ, ಬಿಹಾರದಲ್ಲಿ ಬೌದ್ಧರಿರಲಿಲ್ಲ. ಪಶ್ಚಿಮ ಬಂಗಾಳ, ಓಡಿಸ್ಸಾ ಮತ್ತು ಕರ್ನಾಟಕದಲ್ಲಿ ಮಾತ್ರ ಬೌದ್ಧರಿದ್ದರು. ಅವರೆಲ್ಲ ಅನಾಗರಿಕ ಧಮ್ಮಪಾಲ ಅವರಿಗೆ ಸಾಥ್‌ ನೀಡಿದ್ದರು’ ಎಂದು ತಿಳಿಸಿದರು.

‘ಡಾ.ಬಿ.ಆರ್. ಅಂಬೇಡ್ಕರ್‌ ಅವರು ಸಾವಿರಾರು ವರ್ಷಗಳ ಇತಿಹಾಸ ಬದಲಿಸಿದರು. ನಾವು ಇಂದು ಗಳಿಸಿರುವ ಸ್ವಾಭಿಮಾನ, ಆತ್ಮಸಮ್ಮಾನ ಅಂಬೇಡ್ಕರ್‌ ಅವರ ಕೊಡುಗೆಯಾಗಿದೆ. 1956ರಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಜನರೊಂದಿಗೆ ಬಾಬಾಸಾಹೇಬರು ಬೌದ್ಧ ಧಮ್ಮದ ದೀಕ್ಷೆ ಪಡೆದರು. ಇಷ್ಟೆಲ್ಲ ಸಮ್ಮಾನ, ಧಮ್ಮ ದೀಕ್ಷೆ, ಸ್ವಾತಂತ್ರ್ಯ ನೀಡಿದ ಅಂಬೇಡ್ಕರ್‌ ಅವರಿಗೆ ನಿಮ್ಮ ಮಕ್ಕಳಾದ ನಾವು ಬುದ್ಧಗಯಾ ಮಹಾಬೋಧಿ ಮಹಾವಿಹಾರ ಸಂಪೂರ್ಣವಾಗಿ ಪಡೆಯುವ ಮೂಲಕ ನಿಮ್ಮ ಗೌರವ ಹೆಚ್ಚಿಸುತ್ತೇವೆ ಎಂದು ಹೇಳಬೇಕಿದೆ’ ಎಂದರು.

‘ವಿಶ್ವದಲ್ಲಿ ಬೌದ್ಧ ಧರ್ಮದ ಜನಸಂಖ್ಯೆ ಮೂರನೇ ಸ್ಥಾನದಲ್ಲಿದೆ. ಬುದ್ಧನ ಸಮಯದಲ್ಲಿ ನಾವೆಲ್ಲ ಇಲ್ಲದಿದ್ದರೂ ಅವರ ಜ್ಞಾನೋದಯದ ಸ್ಥಳವನ್ನು ಮುಕ್ತಿ ಮಾಡುವ ಮೂಲಕ ಬುದ್ಧನ ಜೊತೆಗೆ ಸೇರಿಕೊಳ್ಳಲು ಇದೊಂದು ದೊಡ್ಡ ಅವಕಾಶವಾಗಿದೆ’ ಎಂದು ಹೇಳಿದರು.

ಲಾತೂರನ ಭಂತೆ ಪಯ್ಯಾನಂದ ಸಾನ್ನಿಧ್ಯ ವಹಿಸಿದ್ದರು. ಕಲಬುರಗಿ ಸಿದ್ಧಾರ್ಥ ಬುದ್ಧವಿಹಾರದ ಭಂತೆ ಸಂಗಾನಂದ ಅಧ್ಯಕ್ಷತೆ ವಹಿಸಿದ್ದರು. ಬೆಳಮಗಿಯ ಭಂತೆ ಅಮರಜ್ಯೋತಿ, ಅಣದೂರನ ಭಂತೆ ವರಜ್ಯೋತಿ, ಬೀದರ್‌ನ ಭಂತೆ ಸಂಘರಕ್ಷಿತ, ಭಂತೆ ಧಮ್ಮದೀಪ, ಸೋಲ್ಲಾಪುರದ ಭಂತೆ ಯಶ, ಮೇಯರ್ ವರ್ಷಾ ಆರ್.ಜಾನೆ, ಉಪಮೇಯರ್ ತೃಪ್ತಿ ಎಸ್.ಲಾಖೆ, ಫಾದರ್ ಸಂತೋಷ ಉಪಸ್ಥಿತರಿದ್ದರು.

ಬೌದ್ಧ ಸಮ್ಮೇಳನ ಆಚರಣಾ ಸಮಿತಿ ಗೌರವಾಧ್ಯಕ್ಷ ದಿಗಂಬರ ಬೆಳಮಗಿ, ಅಧ್ಯಕ್ಷ ರಮೇಶ ಪಟ್ಟೇದಾರ, ಸ್ವಾಗತ ಸಮಿತಿ ಅಧ್ಯಕ್ಷ ನಾಗಮೂರ್ತಿ ಶೀಲವಂತ, ಶಿಸ್ತು ಆಚರಣಾ ಸಮಿತಿ ಅಧ್ಯಕ್ಷ ಪ್ರಕಾಶ ಮೂಲಭಾರತಿ, ವಿದ್ಯಾಧರ ಕಾಂಬಳೆ, ರಮೇಶ ಲೋಹಾರ, ಎಸ್.ಎಸ್.ತವಡೆ, ದಿನೇಶ ದೊಡ್ಡಮನಿ, ದೇವೇಂದ್ರ ಸಿನ್ನೂರ್, ಸುರೇಶ ಹಾದಿಮನಿ ಇತರರಿದ್ದರು.

ಪ್ರಚಾರ ಸಮಿತಿ ಅಧ್ಯಕ್ಷ ಎ.ಬಿ.ಹೊಸಮನಿ ಸ್ವಾಗತಿಸಿದರು. ಗಾಯತ್ರಿ ಸಂಗೋಳಗಿ ನಿರೂಪಿಸಿದರು.

ಕಲಬುರಗಿಯಲ್ಲಿ ಶನಿವಾರ ಧಮ್ಮ-ಧ್ವಜ ಪಂಚಶೀಲ ಧಮ್ಮಯಾತ್ರೆಯ ಅಂಗವಾಗಿ ಬೌದ್ಧ ಸಮ್ಮೇಳನ ಪ್ರಯುಕ್ತ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಬೌದ್ಧ ಉಪಾಸಕಿಯರು ಪಾಲ್ಗೊಂಡಿದ್ದರು

‘ಫೆ.12ಕ್ಕೆ ಮೋದಿ ಅವರ ನಿದ್ದೆಗೆಡಿಸೋಣ’

‘ಮಹಾವಿಹಾರ ಮುಕ್ತಿ ಆಂದೋಲನ 2025ರ ಫೆ.12ರಂದು ಶುರುವಾಗಿದೆ. 90 ದಿನ ಆಂದೋಲನ ನಡೆಯಿತು. ಇದನ್ನು ಹತ್ತಿಕ್ಕಲು ಮುಗಿಸಲು ಸರ್ಕಾರ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾದವು. ನಮ್ಮನ್ನು ಖರೀದಿಸಲು ಹೆದರಿಸಲು ಆಗಲಿಲ್ಲ. ಸುಳ್ಳು ಪ್ರಕರಣಗಳನ್ನು ದಾಖಲಿಸಿ 68 ದಿನ ನನ್ನನ್ನು ಜೈಲಿಗೆ ಕಳುಹಿಸಿದರು. ಆದರೆ ಬುದ್ಧ ಮಾರ್ಗದಲ್ಲಿ ನಡೆಯುವ ನಾವು ಯಾವುದಕ್ಕೂ ಬಗ್ಗುವುದಿಲ್ಲ ಮತ್ತು ಹೆದರುವುದಿಲ್ಲ’ ಎಂದು ಭಂತೆ ವಿನಾಚಾರ ಹೇಳಿದರು. ‘ಆಂದೋಲನ 2026ರ ಫೆಬ್ರುವರಿ 12ಕ್ಕೆ ಒಂದು ವರ್ಷ ಪೂರೈಸುತ್ತದೆ. ಕಲಬುರಗಿ ಸೇರಿದಂತೆ ಇಡೀ ದೇಶದ ಬೌದ್ಧ ಧರ್ಮೀಯರು ದೆಹಲಿಯಲ್ಲಿ ಸೇರಿ ಪ್ರಧಾನಿ ಮೋದಿ ಅವರ ನಿದ್ದೆಗೆಡಿಸೋಣ. ಮೋದಿ ಅವರ ನಿದ್ದೆಗೆಡಿಸಿದರೆ ಪಂಡಿತ ಪುರೋಹಿತರ ನಿದ್ದೆಗೆಡುತ್ತದೆ. ಆ ದಿನ ನಮ್ಮ ಅಸ್ತಿತ್ವದ ಮಹಾಬೋಧಿ ಮಹಾವಿಹಾರ ಮುಕ್ತ ಆಗುತ್ತದೆ’ ಎಂದರು.

ಪಂಚಶೀಲ ಧ್ವಜದೊಂದಿಗೆ ಪಾದಯಾತ್ರೆ

ಸಮ್ಮೇಳನಕ್ಕೂ ಮುನ್ನ ಜಗತ್‌ ವೃತ್ತದಿಂದ ಎಸ್‌.ಎಂ. ಪಂಡಿತ ರಂಗಮಂದಿರದ ವರೆಗೆ ಪಂಚಶೀಲ ಧ್ವಜದೊಂದಿಗೆ ಪಾದಯಾತ್ರೆ ನಡೆಯಿತು. ಈ ವೇಳೆ ಭಂತೆ ವಿನಾಚಾರ ಅವರು ಡಾ.ಬಿ.ಆರ್‌. ಅಂಬೇಡ್ಕರ್‌ ಮತ್ತು ಮಹಾತ್ಮ ಬಸವೇಶ್ವರ ಮೂರ್ತಿಗಳಿಗೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸಿದರು. ಪಾದಯಾತ್ರೆಯಲ್ಲಿ ಬೌದ್ಧ ಉಪಾಸಕರು ಉಪಾಸಕಿಯರು ‘ಜೈ ಜೈ ಜೈ ಜೈಭೀಮ’ ‘1949ರ ಬಿಟಿ ಆ್ಯಕ್ಟ್‌ ಹಟಾವೋ’ ‘ಬ್ರಾಹ್ಮಣ ಹಟಾವೋ ಮಹಾಬೋಧಿ ಮಹಾವಿಹಾರ ಬಚಾವೋ’ ಘೋಷಣೆಗಳನ್ನು ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.