ADVERTISEMENT

ಕಲಬುರಗಿ: ‘ಕಟ್ಟಡ ಕಾರ್ಮಿಕರ ವೇತನ ಹೆಚ್ಚಳಕ್ಕೆ ಒತ್ತಾಯ: 23ರಂದು ಕೆಲಸ ಬಂದ್’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 13:57 IST
Last Updated 21 ಡಿಸೆಂಬರ್ 2021, 13:57 IST
ಭೀಮರಾಯ
ಭೀಮರಾಯ   

ಕಲಬುರಗಿ: ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡುತ್ತಿಲ್ಲ. ಕಟ್ಟಡದ ಗುತ್ತಿಗೆ ಹಿಡಿದ ಕಾರ್ಮಿಕರು ವರ್ಷಾನುಗಟ್ಟಲೇ ಕಟ್ಟಡ ಕಟ್ಟಿ ಲಕ್ಷಾಂತರ ರೂಪಾಯಿ ನಷ್ಟ ಮಾಡಿಕೊಳ್ಳುವಂತಾಗಿದೆ. ಇದನ್ನು ಖಂಡಿಸಿ ಇದೇ 23ರಂದು ಕೆಲಸ ಸ್ಥಗಿತಗೊಳಿಸಿ ನಗರದಲ್ಲಿ ವಾಹನ ಜಾಥಾ ಮಾಡಲಾಗುವುದು ಎಂದು ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ತಿಳಿಸಿದೆ.

ಈ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಭೀಮರಾಯ ಎಂ.ಕಂದಳ್ಳಿ, ‘ಸುಮಾರು 5 ಲಕ್ಷ ಕಟ್ಟಡ ಕಾರ್ಮಿಕರನ್ನು ಹೊಂದಿರುವ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸರ್ಕಾರದ ಯೋಜನೆಗಳು ಸೇರಿದಂತೆ ಕಟ್ಟಡ ಕಾರ್ಮಿಕರಿಗೆ ನಿಗದಿತ ವೇತನ ಸಿಗುತ್ತಿಲ್ಲ. ಕಲಬುರಗಿ ಜಿಲ್ಲೆಯಲ್ಲಿ 1.25 ಲಕ್ಷ ಕಟ್ಟಡ ಕಾರ್ಮಿಕರಿದ್ದಾರೆ. ಕಲಬುರಗಿ ನಗರದಲ್ಲಿಯೇ 50 ಸಾವಿರ ಜನರು ಅತ್ಯಂತ ಕನಿಷ್ಠ ವೇತನ ಪಡೆದು ಜೀವ ಒತ್ತೆಯಿಟ್ಟು ಕೆಲಸ ಮಾಡುತ್ತಿದ್ದಾರೆ. ಗೌಂಡಿಗಳು, ಗೌಂಡಿ ಕಾರ್ಮಿಕರು, ಕಾರ್ಪೆಂಟರ್ ಕೆಲಸಗಾರರು, ಫರ್ನಿಚರ್ ಕೆಲಸಗಾರರು, ಡೆಕೊರೇಶನ್ ಕಾರ್ಮಿಕರು, ಗ್ರಾನೈಟ್ ಫರ್ಸಿ ಹಾಕುವ ಕಾರ್ಮಿಕರು, ಸೆಂಟ್ರಿಂಗ್ ಕೆಲಸಗಾರರು, ಪ್ಲಂಬಿಂಗ್‌ನವರು, ಪೇಂಟಿಂಗ್ ಕೆಲಸದವರು, ವೆಲ್ಡಿಂಗ್ ಮಾಡುವವರು, ಕಲ್ಲು ಕಟೆಯುವ, ಇಟ್ಟಿಗೆ ಭಟ್ಟಿ ಕಾರ್ಮಿಕರು, ಪಿಒಪಿ ಕೆಲಸಗಾರರು, ಗಾಜು ಜೋಡಿಸುವವರು, ಪಾಯಾ ತೋಡುವವರು, ಎಲೆಕ್ಟ್ರಿಷಿಯನ್‌ಗಳು, ಗಾರ್ಡನ್ ಕೆಲಸಗಾರರು ಸೇರಿದಂತೆ ಒಟ್ಟಾರೆ ಎಲ್ಲ ಬಗೆಯ ಕಾರ್ಮಿಕರಿಗೆ ಹಲವು ವರ್ಷಗಳಿಂದ ದುಡಿತಕ್ಕೆ ತಕ್ಕ ವೇತನ ದೊರೆಯುತ್ತಿಲ್ಲ’ ಎಂದರು.

‘ಕಟ್ಟಡ ಕಾರ್ಮಿಕರಿಗೆ ಅವರ ಶ್ರಮಕ್ಕೆ ತಕ್ಕಂತೆ ಎಲ್ಲ ದರಗಳಿಗೆ ತುಲನಾತ್ಮಕವಾಗಿ ನೋಡಿ ಕಟ್ಟಡ ಕಾರ್ಮಿಕರ ದರ ಹೆಚ್ಚಿಸಲು ಗುತ್ತಿಗೆದಾರರೊಂದಿಗೆ ಮತ್ತು ಎಂಜಿನಿಯರ್ ಸಂಘಗಳೊಂದಿಗೆ ಅನೇಕ ಸಮಾಲೋಚನೆ ಸಭೆಗಳನ್ನು ನಡೆಸಿ ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ 23ರಂದು ಕೆಲಸ ಸ್ಥಗಿತಗೊಳಿಸಿ ಅಂದು ಬೆಳಿಗ್ಗೆ 10.30ಕ್ಕೆ ನೆಹರು ಗಂಜ್‌ನ ನಗರೇಶ್ವರ ಶಾಲೆಯ ಎದುರುಗಡೆ ಸಮಾವೇಶಗೊಂಡ ಅಲ್ಲಿಂದ 11ಕ್ಕೆ ವಾಹನ ಜಾಥಾ ಮೂಲಕ ಹುಮನಾಬಾದ್ ಬೇಸ್, ಕಿರಾಣಾ ಬಜಾರ್, ಕಪಡಾ ಬಜಾರ್, ಸೂಪರ್ ಮಾರ್ಕೆಟ್, ಜಗತ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ADVERTISEMENT

ಪ್ರಧಾನ ಕಾರ್ಯದರ್ಶಿ ಮರೆಪ್ಪ ಎಚ್. ರೊಟ್ಟನಡಗಿ, ಮುಖಂಡರಾದ ಶರಣಪ್ಪ ಎಂ. ಬಳಿಚಕ್ರ, ರಮೇಶ ಡಿ.ಎಚ್‌. ಮಾವನಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.