ಬಸವಕಲ್ಯಾಣದ ಹೊರ ವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ
ಬಸವಕಲ್ಯಾಣ: ನಗರದಿಂದ 6 ಕಿ.ಮೀ ನಷ್ಟು ದೂರವಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೋಗಿ ಬರಲು ವಾಹನ ಸೌಕರ್ಯವಿಲ್ಲದ ಕಾರಣ ಅರ್ಧದಷ್ಟು ದಾರಿಯನ್ನು ನಡೆದುಕೊಂಡು ಕ್ರಮಿಸಬೇಕಾಗಿದ್ದು, ಈ ಕಾರಣ ಕಾಲೇಜಿನಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಹಿಂದೇಟು ಹಾಕುವಂತಹ ವಾತಾವರಣ ನಿರ್ಮಾಣವಾಗಿದೆ.
ನಗರ ಹಾಗೂ ಗ್ರಾಮೀಣ ಭಾಗಗಳಿಂದ ಬರುವರರಿಗೆ ಮಿನಿ ವಿಧಾನಸೌಧದವರೆಗೆ ಮಾತ್ರ ಬಸ್ ಸೌಕರ್ಯವಿದೆ. ಅಲ್ಲಿಂದ ಅನುಭವ ಮಂಟಪದ ಪಕ್ಕದ ಮಾರ್ಗದಿಂದ ತ್ರಿಪುರಾಂತ ಕೆರೆಯೊಳಗಿನ ಮುಳ್ಳುಕಂಟೆಗಳಿರುವ ದಾರಿಯಿಂದ ನಡೆದುಕೊಂಡು ಹೋಗುವುದು ಅನಿವಾರ್ಯವಾಗಿದೆ. ಬೆಳಿಗ್ಗೆ ಮತ್ತು ಸಂಜೆ ಕೆಲಸಲ ಮಾತ್ರ ಬಸ್ ಸಂಚರಿಸುತ್ತದೆ. ಆದ್ದರಿಂದ ವಿದ್ಯಾರ್ಥಿನಿಯರು ಒಳಗೊಂಡು ಅನೇಕರು ಬಿಸಿಲು, ಮಳೆ, ಗಾಳಿ, ಚಳಿಯಲ್ಲಿ ನಡೆದುಕೊಂಡೇ ಹೋಗಿ ಬರುತ್ತಾರೆ.
ನಗರದ ಮಧ್ಯದಲ್ಲಿನ ತ್ರಿಪುರಾಂತದ ಸರ್ಕಾರಿ ಕಲ್ಯಾಣ ಮಂಟಪದಲ್ಲಿ ತರಗತಿಗಳು ನಡೆಯುತ್ತಿದ್ದಾಗ 700ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದರು. ಆದರೆ, ಹೋಗಿ ಬರುವುದಕ್ಕೆ ಅನಾನುಕೂಲ ಇರುವುದರಿಂದ ಈಗ ಈ ಸಂಖ್ಯೆ ಅರ್ಧಕ್ಕೆ ಇಳಿದಿದೆ. ಈ ಕಾರಣ ತರಗತಿಗಳನ್ನು ಮೊದಲಿನಂತೆ ನಗರದಲ್ಲಿಯೇ ತೆಗೆದುಕೊಳ್ಳುವುದಕ್ಕೆ ಸಂಬಂಧಿತರಿಗೆ ಒತ್ತಾಯಿಸಲು ಕಾರ್ಯಕರ್ತರು ಮತ್ತು ಪೋಷಕರನ್ನು ಒಳಗೊಂಡ ಹೋರಾಟಕ್ಕೆ ಸಿದ್ಧತೆ ನಡೆಯುತ್ತಿದೆ.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ಸಂಘ ಸಂಸ್ಥೆಯವರು ಇಲ್ಲಿನ ಕಾಲೇಜು ಸ್ಥಳಾಂತರಕ್ಕಾಗಿ ಆಗ್ರಹಿಸಿ ಅನೇಕ ಸಲ ಧರಣಿ, ರಸ್ತೆ ತಡೆ ನಡೆಸಿದ್ದಾರೆ. ಎರಡು ಗಂಟೆಗೊಮ್ಮೆ ಬಸ್ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದೂ ಮನವಿಪತ್ರ ಸಲ್ಲಿಸಿದ್ದಾರೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಎನ್ನುವುದು ಪೋಷಕರ ಆಕ್ರೋಶ. ‘ಸ್ವಂತ ವಾಹನ ಇದ್ದವರು ಓಡಾಡಬಹುದು. ಆದರೆ, ಬಡ ಕುಟುಂಬದವರಿಗೆ ತೊಂದರೆಯಾಗುತ್ತಿದೆ. ಕಾಲೇಜಿನ ಪ್ರವೇಶಾತಿಯೂ ಕಡಿಮೆಯಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೂ ಹಿನ್ನಡೆಯಾಗುತ್ತಿದೆ’ ಎಂದು ವಿದ್ಯಾರ್ಥಿಗಳಾದ ರಾಜಪ್ಪ, ನೂರ್ ಮಹಮ್ಮದ್ ತಿಳಿಸಿದರು.
`ಸ್ವಂತ ವಾಹನ ಇಲ್ಲ, ಬಸ್ಸು ಬರಲ್ಲ. ಆಟೊಗೆ ಹೋಗಬೇಕೆಂದರೆ ನೂರಾರು ರೂಪಾಯಿ ಬಾಡಿಗೆ ಕೊಡಲಾಗುವುದಿಲ್ಲ. ಕೆರೆ ಅಂಗಳದಲ್ಲಿ ಕಚ್ಚಾ ರಸ್ತೆಯಿದೆ. ಆದರೆ, ಕೆಸರಿರುತ್ತದೆ, ಕಲ್ಲು, ಮುಳ್ಳುಕಂಟೆಗಳು ಸಹ ಇವೆ. ಭೀತಿಯ ನಡುವೆಯೂ ಇದೇ ದಾರಿ ಅನಿವಾರ್ಯವಾಗಿದೆ' ಎಂದು ವಿದ್ಯಾರ್ಥಿಗಳಾದ ಶಿವಕುಮಾರ ಮತ್ತು ಶಾರದಾ ಅಳಲು ತೋಡಿಕೊಂಡರು.
ಬಡ ಕುಟುಂಬದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ. ಸ್ವಂತ ವಾಹನದಲ್ಲಿ ಓಡಾಡುವುದು ಕಷ್ಟ. ಆದ್ದರಿಂದ ಕಾಲೇಜಿಗೆ ಹೋಗಿ ಬರಲು ಬಸ್ ವ್ಯವಸ್ಥೆ ಕಲ್ಪಿಸಬೇಕುಗುರುನಾಥ ಗಡ್ಡೆ, ತಾಲ್ಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ
ಬಸ್ ವ್ಯವಸ್ಥೆ ಆಗುತ್ತಿಲ್ಲ. ನಗರದಲ್ಲಿಯೇ ಕಾಲೇಜು ಆರಂಭಿಸಬೇಕು. ವಿದ್ಯಾರ್ಥಿಗಳಿಗೆ ಅನಾನುಕೂಲವಾದರೆ ಹೋರಾಟ ಮಾಡಲಾಗುಗುವುದುತಹಶೀನಅಲಿ ಜಮಾದಾರ, ನಗರಸಭೆ ಮಾಜಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.