ಆಳಂದ: ತಾಲ್ಲೂಕಿನ ಶುಕ್ರವಾಡಿ ಗ್ರಾಮದ ಮುಖ್ಯ ಸಂಪರ್ಕ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು, ಬಸ್ ಸಂಚಾರವೂ ಸಂಪೂರ್ಣವಾಗಿ ಸ್ಥಗಿತವಾಗಿದೆ. ರಸ್ತೆ ವಿವಾದವು ಕಳೆದ 12 ವರ್ಷದಿಂದ ಕೋರ್ಟ್ ಮೆಟ್ಟಿಲು ಹತ್ತಿದ ಪರಿಣಾಮ ಗ್ರಾಮಸ್ಥರು ಸಂಚಾರಕ್ಕೆ ನಿತ್ಯ ಸಂಕಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈಚೆಗೆ ತಹಶೀಲ್ದಾರ್ ಅಣ್ಣಾರಾವ ಪಾಟೀಲ ಅವರು ಹೊನ್ನಳ್ಳಿ-ಶುಕ್ರವಾಡಿ ಸಂಪರ್ಕ ರಸ್ತೆ ಪರಿಶೀಲನೆ ನಡೆಸಿದರು. ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಸಂಪರ್ಕ ರಸ್ತೆ ಅನುಕೂಲ ಕಲ್ಪಿಸಲು ತಹಶೀಲ್ದಾರ್ ಅವರಿಗೆ ಒತ್ತಾಯಿಸಿದರೆ, ರೈತರು ತಮ್ಮ ಜಮೀನಿನಲ್ಲಿ ಯಾವುದೇ ರಸ್ತೆ ಇಲ್ಲ. ಈಗಾಗಲೇ ಕೋರ್ಟ್ ಮೂಲಕ ತಡೆಯಾಜ್ಞೆ ತರಲಾಗಿದೆ. ರಸ್ತೆ ಸಂಚಾರಕ್ಕೆ ಅವಕಾಶ ನೀಡುವದಿಲ್ಲ ಎಂದು ವಾದ ಮಾಡಿದರು. ಇದರಿಂದ ಗ್ರಾಮಸ್ಥರ ನಡುವೆ ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.
‘ಕಳೆದ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಿಗಳು ಚುನಾವಣೆ ನಂತರ ಸಂಪರ್ಕ ರಸ್ತೆ ಸಮಸ್ಯೆ ಬಗೆಹರಿಸುವ ವಾಗ್ದಾನ ಮಾಡಿದ್ದಾರೆ. ಅಂದು ಬಸ್ ಸಂಚಾರವನ್ನೂ ಆರಂಭಿಸಲಾಯಿತು. ಆದರೆ ರಸ್ತೆ ದುರಸ್ತಿಯಾಗಲೇ ಇಲ್ಲ. ಬಸ್ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ನಾವೂ ಹೇಗೆ ಸಂಚರಿಸಬೇಕು? ಎಂದು ಗ್ರಾಮದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
‘ಶುಕ್ರವಾಡಿ ಗ್ರಾಮದ ರಸ್ತೆ ಸಮಸ್ಯೆಯಿಂದ ಬಸ್, ಲಾರಿ, ಕ್ರೂಸರ್ ಸೇರಿದಂತೆ ಎತ್ತಿನ ಬಂಡಿ ಸಂಚರಿಸಲು ಕಷ್ಟವಾಗಿದೆ. ಕಳೆದ 15 ವರ್ಷದಿಂದ ಹದಗೆಟ್ಟ ರಸ್ತೆ ಮೇಲೆ ಓಡಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಕೃಷಿ ಚಟುವಟಿಕೆ, ವ್ಯಾಪಾರ, ಖರೀದಿ, ಆಸ್ಪತ್ರೆ ಹಾಗೂ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು, ಗ್ರಾಮಸ್ಥರು ಸಂಚರಿಸಲು ನಿರಂತರವಾಗಿ ಪರದಾಡುತ್ತಿದ್ದಾರೆ’ ಎಂದು ಕಾಶಿನಾಥ ಜಮದಾರ ದೂರಿದರು.
ಗ್ರಾಮಸ್ಥರ ಸಮಸ್ಯೆ ಆಲಿಸಿದ ನಂತರ ಕಂದಾಯ, ಭೂಮಾಪನ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ತಹಶೀಲ್ದಾರ್ ಅಣ್ಣಾರಾಯ ಪಾಟೀಲ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದರು. ಗ್ರಾ.ಪಂ.ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ಹಾವಳಪ್ಪ ರಂಜೇರಿ, ಮಲ್ಲಯ್ಯ ಗುತ್ತೇದಾರ, ಕಾಶಿನಾಥ ಜಮಾದಾರ, ಮೋಘರಾಜ ದಳಪತಿ, ಕಲ್ಯಾಣಿ ಭೂಸನೂರೆ, ಹುಸೇನ ಸುತಾರ, ಇಸ್ಮಾಯಿಲ್ ಪಟೇಲ, ದೇವೀಂದ್ರ ಲಾಡವಂತಿ, ರವಿ ಜಾನೆ ಹಾಗೂ ರೈತರಾದ ಮೋಹನ ರಾಠೋಡ, ನಾಗಣ್ಣಾ ಕೋರೆ ಉಪಸ್ಥಿತರಿದ್ದರು.
ಬರಗಾಲದಲ್ಲಿ ನಿರ್ಮಾಣವಾದ ರಸ್ತೆ ಕೋರ್ಟ್ ಮೆಟ್ಟಿಲು ಹತ್ತಿದ ರೈತರು ಹದಗೆಟ್ಟ ರಸ್ತೆ ಗ್ರಾಮಸ್ಥರ ಆಕ್ರೋಶ
ಶುಕ್ರವಾಡಿ ರಸ್ತೆ ವಿವಾದ ಕೋರ್ಟ್ ಮೆಟ್ಟಿಲೇರಿದ ಕಾರಣ ರಸ್ತೆ ದುರಸ್ತಿ ಬಹುದಿನಗಳಿಂದ ನನೆಗುದಿಗೆ ಬಿದ್ದಿದೆ. ಎಡಿಎಲ್‌ಆರ್ ವರದಿ ಪಡೆದುಕೊಂಡು ನಂತರ ಸಮಸ್ಯೆ ಇತ್ಯರ್ಥ ಪಡೆಸಲು ಕ್ರಮ ಕೈಗೊಳ್ಳಲಾಗುವುದುಅಣ್ಣಾರಾಯ ಪಾಟೀಲ ತಹಶೀಲ್ದಾರ್ ಆಳಂದ
ಜಿಲ್ಲಾಧಿಕಾರಿಗೆ ಸತತ 10 ವರ್ಷದಿಂದ ಗ್ರಾಮದ ಸಂಪರ್ಕ ರಸ್ತೆಯ ಸಮಸ್ಯೆ ಬಗೆಹರಿಸಲು ಮನವಿ ಮಾಡಲಾಗುತ್ತಿದೆ. ಸಮಸ್ಯೆಗೆ ಸ್ಪಂದಿಸದೆ ಇದ್ದರೆ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೈಗೊಳ್ಳುತ್ತೇವೆಬಾಬುಗೌಡ ಪಾಟೀಲ ಮಾಜಿ ಅಧ್ಯಕ್ಷ ಗ್ರಾ.ಪಂ. ತಡಕಲ
ಸಂಪರ್ಕ ರಸ್ತೆ ಹದೆಗೆಟ್ಟ ಪರಿಣಾಮ ವೃದ್ಧರು ಗರ್ಭಿಣಿಯರು ಬಾಣಂತಿಯರಿಗೆ ತುರ್ತು ಸಂದರ್ಭದಲ್ಲಿ ಹೆಚ್ಚಿನ ಸಮಸ್ಯೆ ಆಗುತ್ತಿದೆ. ಕ್ರೂಸರ್ ಶಾಲಾ ವಾಹನಗಳು ಉರುಳಿ ಬಿದ್ದು ಜನರಿಗೆ ಅಪಾಯಗಳು ಸಂಭವಿಸುತ್ತಿವೆ.ಸುನೀತಾ ಬಾಲ್ಕೆ ನಿವಾಸಿ ಶುಕ್ರವಾಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.