ADVERTISEMENT

‌ಮೂರನೇ ದಿನವೂ ಮುಷ್ಕರ: ತಪ್ಪದ ಪರದಾಟ

179 ಬಸ್‌ ಸಂಚಾರ, 79 ಮಂದಿ ಕೆಲಸಕ್ಕೆ ಹಾಜರು, 34 ನಿವೃತ್ತರಿಂದಲೂ ಸೇವೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 3:00 IST
Last Updated 10 ಏಪ್ರಿಲ್ 2021, 3:00 IST
ಕಲಬುರ್ಗಿ ಬಸ್‌ ನಿಲ್ದಾಣದಲ್ಲಿ ಮಗುವಿನೊಂದಿಗೆ ಬಸ್‌ಗಾಗಿ ಕಾಯುತ್ತ ಕುಳಿತ ಮಹಿಳೆ
ಕಲಬುರ್ಗಿ ಬಸ್‌ ನಿಲ್ದಾಣದಲ್ಲಿ ಮಗುವಿನೊಂದಿಗೆ ಬಸ್‌ಗಾಗಿ ಕಾಯುತ್ತ ಕುಳಿತ ಮಹಿಳೆ   

ಕಲಬುರ್ಗಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರ ಶುಕ್ರವಾರ ಮೂರನೇ ದಿನವೂ ಮುಂದುವರಿಯಿತು. ಕಳೆದೆರಡು ದಿನಗಳಂತೆಯೇ ಪ್ರಯಾಣಿಕರು ಪರದಾಡುವಂತಾಯಿತು.

ಏತನ್ಮಧ್ಯೆ, ಕಲಬುರ್ಗಿ ವಿಭಾಗದಲ್ಲಿ ಸುಮಾರು 179 ನೌಕರರು ಶುಕ್ರವಾರ ಸ್ವಯಂ ಪ್ರೇರಣೆಯಿಂದ ಕೆಲಸಕ್ಕೆ ಹಾಜರಾಗಿದ್ದಾರೆ. 79ಕ್ಕೂ ಹೆಚ್ಚು ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸಿವೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶುಕ್ರವಾರ ಕೂಡ ಖಾಸಗಿ ಬಸ್‌ ಹಾಗೂ ಟೆಂಪೊಗಳನ್ನು ಬಳಸಿಕೊಂಡೇ ಸಾರಿಗೆ ವ್ಯವಸ್ಥೆ ಮಾಡಲಾಯಿತು.

ನಗರದಿಂದ ಎಲ್ಲಡೆ ಖಾಸಗಿ ಬಸ್‍ಗಳು, ಜೀಪ್‍ಗಳು, ಶಾಲಾ ವಾಹನಗಳು ಸೇರಿದಂತೆ ಪರ್ಯಾಯವಾಗಿ ಸಾರಿಗೆ ಅಧಿಕಾರಿಗಳು ಸಾಕಷ್ಟು ವ್ಯವಸ್ಥೆ ಮಾಡಿದ್ದಾರೆ. ಹೆಚ್ಚಿನ ದರ ಪಡೆಯುತ್ತಿರುವ ಕಾರಣ ಜನರು ಇವುಗಳಲ್ಲಿ ಹತ್ತಲು ಹಿಂಜರಿಯುತ್ತಿದ್ದಾರೆ.

ADVERTISEMENT

₹ 13.5 ಕೋಟಿ ಆದಾಯ ಕಡಿತ:ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ಗಳ ಓಡಾಟವಿದ್ದರೆ ಪ್ರತಿ ದಿನ ₹ 4.5 ಕೋಟಿ ಆದಾಯ ಬರುತ್ತಿತ್ತು. ಅಂದರೆ ಮೂರು ದಿನಗಳಲ್ಲಿ ಒಟ್ಟು 13.5 ಕೋಟಿ ಆದಾಯ ಕೈ ತಪ್ಪಿದೆ ಎಂದು ಸಂಸ್ಥೆಯ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮಾರಾವ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಶುಕ್ರವಾರ ಸಂಜೆಯವರೆಗೆ ಈಶಾನ್ಯ ಸಾರಿಗೆ ಸಂಸ್ಥೆಯ 179 ಬಸ್‍ಗಳು ಆರು ಜಿಲ್ಲೆಗಳಲ್ಲಿ ಸಂಚರಿಸಿವೆ. ಉಳಿದಂತೆ 352 ಖಾಸಗಿ ಬಸ್‍ಗಳು, ನೆರೆಯ ತೆಲಂಗಾಣ, ಆಂಧ್ರದ ಸಾರಿಗೆ ಸಂಸ್ಥೆಯ 182 ಬಸ್‍ಗಳು ಹಾಗೂ ಇನ್ನಿತರ ಖಾಸಗಿ ವಾಹನಗಳು 2437 ಬಳಸಿಕೊಂಡು ಜನರಿಗೆ ಅನುವು ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕರ್ತವ್ಯಕ್ಕೆ ಹಾಜರಾಗಲು ನೋಟಿಸ್

ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಎನ್‌ಇಕೆಆರ್‌ಟಿಸಿಯ ಕಲಬುರ್ಗಿ ವಿಭಾಗದ ಅಧಿಕಾರಿಗಳು, ನೌಕರರಿಗೆ ಎರಡು ದಿನಗಳ ಹಿಂದೆಯೇ ನೋಟಿಸ್‌ ಜಾರಿ ಮಾಡಿದ್ದಾರೆ.

‘ನಿಮಗೆ ಸಾರಿಗೆ ಸಂಸ್ಥೆಯಲ್ಲಿ ಎಲ್ಲ ಅಗತ್ಯ ಸೌಲಭ್ಯ ನೀಡಲಾಗಿದೆ. ಈಗ ಕೊರೊನಾ ವೈರಾಣು ಹಾವಳಿ ಹೆಚ್ಚಿದ್ದರಿಂದ ಜನರೂ ಸಂಕಷ್ಟದಲ್ಲಿದ್ದಾರೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಕೆಲಸಕ್ಕೆ ಗೈರಾಗಿ, ಮುಷ್ಕರ ನಡೆಸುವುದು ಸರಿಯಾದ ಮಾರ್ಗವಲ್ಲ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

‘ಅಲ್ಲದೇ ಮುಂದಿನ ದಿನಗಳಲ್ಲಿ ಸಾಲು ಸಾಲು ರಜೆಗಳು ಇವೆ. ಜನರು ತಮ್ಮ ತಮ್ಮ ಊರುಗಳಿಗೆ ಹೋಗಬೇಕಾಗಿದೆ. ಅವರನ್ನು ಸುರಕ್ಷಿತವಾಗಿ ಸರಿಯಾದ ಸಮಯಕ್ಕೆ ತಲುಪಿಸುವುದು ನಮ್ಮ ಜವಾಬ್ದಾರಿ. ಹಾಗಾಗಿ, ನೋಟಿಸ್‌ ಮುಟ್ಟಿದ ತಕ್ಷಣವೇ ಕೆಲಸಕ್ಕೆ ಹಾಜರಾಗಬೇಕು. ನೀವು ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗಬೇಕು ಎಂಬ ಕಾರಣಕ್ಕೆ ವಸತಿ ಸೌಕರ್ಯ ನೀಡಲಾಗಿದೆ. ಆದರೂ ವಸತಿ ಸೌಕರ್ಯ ಪಡೆದ ನೌಕರರು ಮನೆಯಲ್ಲಿ ಇರುವುದು ಸೂಕ್ತವಲ್ಲ’ ಎಂದೂ ವಿಭಾಗೀಯ ನಿಯಂತ್ರಣಾಧಿಕಾರಿ ನೋಟಿಸ್‌ನಲ್ಲಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.