ADVERTISEMENT

ಕಸಾಪ ನಿವೃತ್ತರ ಗಂಜಿಕೇಂದ್ರವಲ್ಲ: ಸಿ.ಕೆ. ರಾಮೇಗೌಡ

ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸಿ.ಕೆ. ರಾಮೇಗೌಡ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 14:21 IST
Last Updated 20 ಏಪ್ರಿಲ್ 2021, 14:21 IST
ಸಿ.ಕೆ.ರಾಮೇಗೌಡ
ಸಿ.ಕೆ.ರಾಮೇಗೌಡ   

ಕಲಬುರ್ಗಿ: ಕನ್ನಡ ಸಾಹಿತ್ಯ ಪರಿಷತ್ತು ಎಂಬುದು ನಿವೃತ್ತ ಅಧಿಕಾರಿಗಳ ಗಂಜಿಕೇಂದ್ರವಲ್ಲ, ನಿರಾಶ್ರಿತರ ಕೇಂದ್ರವೂ ಅಲ್ಲ. ಕನ್ನಡಕ್ಕಾಗಿಯೇ ತಮ್ಮ ಜೀವಿತಾವಧಿಯನ್ನು ಕಳೆದವರು ಇದರ ಅಧ್ಯಕ್ಷರಾಗಬೇಕು. ಅಂದಾಗ ಮಾತ್ರ ಕಸಾಪ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಬಲ್ಲುದು ಎಂದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸಿ.ಕೆ. ರಾಮೇಗೌಡ ಅಭಿಪ್ರಾಯಪಟ್ಟರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಾಭಿಮಾನಿಗಳಿಂದ ದೂರ ಹೋಗಿದೆ ಎಂಬ ಭಾವನೆ ಬಹುತೇಕರಲ್ಲಿದೆ. ಕನ್ನಡಕ್ಕಾಗಿ ಇಡೀ ಜೀವನವನ್ನು ಮೀಸಲಿಟ್ಟಿರುವ ನಾನು ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಈ ಬಾರಿ ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಗೆಲುವಿನ ವಿಶ್ವಾಸವಿದೆ’ ಎಂದರು.

‘ಅಧ್ಯಕ್ಷನಾಗಿ ಚುನಾಯಿತನಾದರೆ ರಾಜ್ಯದ ಗಡಿ ಭಾಗದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುತ್ತೇನೆ. ಐದು ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನದ ಅವಧಿಯಲ್ಲಿ ಎರಡು ಬಾರಿ ಮಹಿಳಾ ಸಾಹಿತಿಗಳನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತೇನೆ. ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಪುಸ್ತಕ ಮಹಾಮೇಳ ಆಯೋಜನೆ ಮಾಡುತ್ತೇನೆ. ಕಸಾಪದಿಂದಲೇ ಸಾಹಿತಿಗಳ ಕೃತಿಗಳ ಮಾರಾಟ ಮಾಡುವ ವ್ಯವಸ್ಥೆ ಮಾಡುವ ಯೋಜನೆ ಇದೆ’ ಎಂದರು.

ADVERTISEMENT

2008ರಲ್ಲಿ ಪುಂಡಲೀಕ ಹಾಲಂಬಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಸಾಪ ರಾಜ್ಯ ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವ ನನಗಿದೆ. ಅಧ್ಯಕ್ಷನಾಗಿ ಆಯ್ಕೆಯಾದರೆ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯ, ಮಹಿಳಾ ನ್ಯಾಯ, ಪ್ರತಿಭಾ ನ್ಯಾಯಗಳಿಗೆ ಅನುಗುಣವಾಗಿ ಕಟಿಬದ್ಧತೆಯಿಂದ ದುಡಿಯುತ್ತೇನೆ ಎಂದು ಭರವಸೆ ನೀಡಿದರು.

‘ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸಾಹಿತ್ಯ ಭವನಗಳನ್ನು ನಿರ್ಮಿಸಿ ನಿರಂತರ ಸಾಹಿತ್ಯಿಕ ಚಟುವಟಿಕೆಗಳು ನಡೆಯುವಂತೆ ಯೋಜನೆ ರೂಪಿಸಿದ್ದೇನೆ’ ಎಂದು ರಾಮೇಗೌಡ ತಿಳಿಸಿದರು.

ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರ ಸಂಘದ ಅಧ್ಯಕ್ಷ ಅಮೃತರಾಜ್ ಮಾತನಾಡಿ, ‘ರಾಜ್ಯದಲ್ಲಿ 10 ಮಹಾನಗರ ಪಾಲಿಕೆಗಳಿದ್ದು, ಈ ಬಾರಿ ರಾಮೇಗೌಡ ಅವರನ್ನು ಬೆಂಬಲಿಸಲು ತೀರ್ಮಾನಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.