ಕಮಲಾಪುರ (ಕಲಬುರಗಿ ಜಿಲ್ಲೆ): ಕಾರು-ಬೈಕ್ ನಡುವೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಶನಿವಾರ ರಾತ್ರಿ ತಾಲ್ಲೂಕಿನ ಮಹಾಗಾಂವ ಕ್ರಾಸ್ ರಾಜ ಧಾಬಾ ಬಳಿ ನಡೆದಿದೆ.
ಕಮಲಾಪುರ ತಾಲ್ಲೂಕಿನ ಸಿರಗಾಪುರ ಗ್ರಾಮದ ಆಕಾಶ ಚಂದ್ರಕಾಂತ ಧನವಂತ (19), ಭೂಸಣಗಿ ಗ್ರಾಮದ ಸುಶೀಲ್ ಮಲ್ಲಿಕಾರ್ಜುನ (28) ಮೃತ ಯುವಕರಾಗಿದ್ದಾರೆ.
ಡಿಕ್ಕಿ ರಭಸಕ್ಕೆ ಬೈಕ್ ಗೆ ಬೆಂಕಿ ಹೊತ್ತಿಕೊಂಡಿದ್ದು ಈ ಇಬ್ಬರು ಬೆಂಕಿಯಲ್ಲಿ ಬೆಂದಿದ್ದಾರೆ. ಆಕಾಶ ಸ್ಥಳದಲ್ಲೇ ಮೃತಪಟ್ಟಿದ್ದು, ಸುಶೀಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾನೆ.
ಆಕಾಶ ಹಾಗೂ ಸುಶೀಲ್ ಇಬ್ಬರು ಬಜಾಜ್ ಎನ್ ಎಸ್ ಬೈಕ್ ಮೇಲೆ ಸಿರಗಾಪುರದಿಂದ ಮಹಾಗಾಂವ ಕ್ರಾಸ್ ಗೆ ತೆರಳುತ್ತಿದ್ದರು.
ಹೈದರಾಬಾದ್ ನಿಂದ ಕಲಬುರಗಿಗೆ ಕಾರು ತೆರಳುತ್ತಿತ್ತು. ಎರಡರ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಗೆ ಬೆಂಕಿ ಹೊತ್ತಿಕೊಂಡಿದೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಸುಶೀಲನನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದು ಫಲ ನೀಡಲಿಲ್ಲ.
ಪಿಎಸ್ಐ ಬಸವರಾಜ ಚಿತ್ತಕೋಟಿ, ಸಿಬ್ಬಂದಿ ಕಿಶನ್ ಜಾಧವ, ರಾಜಶೇಖರ, ಭೀಮಾಶಂಕರ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.