ADVERTISEMENT

ಕಾಳಜಿ ಕೇಂದ್ರಗಳು ಬಹುತೇಕ ಸ್ಥಗಿತ

ಬೆಳೆ ಸಮೀಕ್ಷೆ ಕಾರ್ಯ ಚುರುಕು, ಮೂರು ಗ್ರಾಮಗಳಲ್ಲಿ ಇನ್ನೂ ಬರಬೇಕಿದೆ ವಿದ್ಯುತ್

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 2:37 IST
Last Updated 23 ಅಕ್ಟೋಬರ್ 2020, 2:37 IST

ಕಲಬುರ್ಗಿ: ಭೀಮಾ ನದಿ ಪ್ರವಾಹದಿಂದಾಗಿ ಸಂತ್ರಸ್ತರಾದವರಿಗಾಗಿ ಜಿಲ್ಲಾಡಳಿತ ಒಂದು ವಾರದ ಹಿಂದೆ ಆರಂಭಿಸಿದ್ದ ಬಹುತೇಕ ಕಾಳಜಿ ಕೇಂದ್ರಗಳನ್ನು ಗುರುವಾರ ಮುಚ್ಚಲಾಗಿದ್ದು, ಇನ್ನುಳಿದ ಕೇಂದ್ರಗಳನ್ನು ಶುಕ್ರವಾರ ಸ್ಥಗಿತಗೊಳಿಸಲಾಗುತ್ತದೆ.

ಪ್ರವಾಹ ಇಳಿದ ಬಳಿಕ ಸಂತ್ರಸ್ತರು ಮನೆಗಳನ್ನು ತೆರಳಿದ್ದರಿಂದ ಆಯಾ ತಾಲ್ಲೂಕು ಆಡಳಿತಗಳು ಕಾಳಜಿ ಕೇಂದ್ರಗಳನ್ನು ಮುಚ್ಚಲಾರಂಭಿಸಿವೆ. ಆದರೆ, ಬಹುತೇಕ ನಾಶವಾದ ಮನೆಗಳ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವವರೆಗೂ ಕಾಳಜಿ ಕೇಂದ್ರಗಳನ್ನು ಮುಚ್ಚಬಾರದು ಎಂಬ ಬೇಡಿಕೆಯೂ ವ್ಯಕ್ತವಾಗಿದೆ.

ಪ್ರವಾಹದಿಂದ ಅತಿ ಹೆಚ್ಚು ಬಾಧಿತವಾದ ಜೇವರ್ಗಿ ತಾಲ್ಲೂಕಿನಲ್ಲಿ ಆರಂಭಿಸಲಾಗಿದ್ದ 28 ಕಾಳಜಿ ಕೇಂದ್ರಗಳ ಪೈಕಿ 25ನ್ನು ಮುಚ್ಚಲಾಗಿದೆ. ಇನ್ನುಳಿದ ನರಿಬೋಳ, ಇಟಗಾ ಹಾಗೂ ಹರವಾಳ ಗ್ರಾಮದಲ್ಲಿನ ಕೇಂದ್ರಗಳನ್ನು ಶುಕ್ರವಾರ ಸ್ಥಗಿತಗೊಳಿಸಲಾಗುತ್ತಿದೆ. ಅಫಜಲಪುರ, ಚಿತ್ತಾಪುರ ಹಾಗೂ ಶಹಾಬಾದ್‌ನಲ್ಲಿನ ಕಾಳಜಿ ಕೇಂದ್ರಗಳನ್ನೂ ಬಹುತೇಕ ಸ್ಥಗಿತಗೊಳಿಸಲಾಗಿದೆ.

ADVERTISEMENT

ಬುಧವಾರ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಕ್ಷಣ ಮನೆಗಳು ಹಾಳಾದ ಬಗ್ಗೆ ಸಮೀಕ್ಷೆ ನಡೆಸಿ ವಾರದಲ್ಲಿ ಪರಿಹಾರ ವಿತರಿಸುವಂತೆ ಸೂಚಿಸಿದ್ದಾರೆ. ಬೆಳೆ ಸಮೀಕ್ಷೆ ನಡೆಸಿ ವರದಿ ನೀಡುವಂತೆಯೂ ತಿಳಿಸಿದ್ದಾರೆ. ಹೀಗಾಗಿ, ಪರಿಹಾರ ಕಾರ್ಯದ ಜೊತೆಗೆ ಅಧಿಕಾರಿಗಳು ಇದೀಗ ಸಮೀಕ್ಷೆಯನ್ನೂ ನಡೆಸಬೇಕಿದೆ.

ಜೆಸ್ಕಾಂಗೆ ಕೋಟ್ಯಂತರ ರೂಪಾಯಿ ಹಾನಿ

ಭಾರಿ ಪ್ರವಾಹದಿಂದ ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್ ಹಾಗೂ ಕಂಬಗಳು ನೆಲಕ್ಕುರುಳಿದ್ದು, ಅವುಗಳನ್ನು ದುರಸ್ತಿಪಡಿಸುವ ಸವಾಲು ಜೆಸ್ಕಾಂ ಎದುರಿಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ 2154 ವಿದ್ಯುತ್ ಕಂಬಗಳು ಹಾಳಾಗಿದ್ದು, 1093 ಟಿ.ಸಿ.ಗಳಿಗೆ ಹಾನಿಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 325 ಕಂಬಗಳು, 267 ಟಿ.ಸಿ.ಗಳಿಗೆ ಹಾನಿಯಾಗಿದೆ. ಇದರಿಂದಾಗಿ ಕೋಟ್ಯಂತರ ರೂಪಾಯಿ ಹಾನಿಯಾಗಿದೆ. ಹಾನಿಯ ನಿಖರ ಅಂದಾಜು ಇನ್ನಷ್ಟೇ ಗೊತ್ತಾಗಬೇಕಿದೆ.

ಕಲಬುರ್ಗಿ ಜಿಲ್ಲೆಯಲ್ಲಿ 105 ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿತ್ತು. ಅವುಗಳ ಪೈಕಿ 102 ಗ್ರಾಮಗಳಲ್ಲಿ ಸಂಪರ್ಕ ಮರುಸ್ಥಾಪಿಸಲಾಗಿದ್ದು, ಇನ್ನೂ ಮೂರು ಗ್ರಾಮಗಳಲ್ಲಿ ನೀರು ನಿಂತಿರುವುದರಿಂದ ಸಂಪರ್ಕ ಸಾಧ್ಯವಾಗಿಲ್ಲ ಎಂದು ಜೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.