ADVERTISEMENT

ಘರ್ಷಣೆಗೆ ತಿರುಗಿದ ಜಾನುವಾರು ಅಕ್ರಮ ಸಾಗಣೆ

ಎರಡು ಕೋಮಿನ ಯುವಕರ ಮಧ್ಯೆ ಹೊಡೆದಾಟ, ಪೊಲೀಸರ ಮೇಲೆ ಕಲ್ಲು ತೂರಿ ಓಡಿಸಿದ ಉದ್ರಿಕ್ತರು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 20:09 IST
Last Updated 12 ಆಗಸ್ಟ್ 2019, 20:09 IST
ಚಿತ್ತಾಪುರ ಪಟ್ಟಣದಲ್ಲಿ ಭಾನುವಾರ ರಾತ್ರಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಜಾನುವಾರು ಪೊಲೀಸರು ಜಪ್ತಿ ಮಾಡಿದ್ದಾರೆ
ಚಿತ್ತಾಪುರ ಪಟ್ಟಣದಲ್ಲಿ ಭಾನುವಾರ ರಾತ್ರಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಜಾನುವಾರು ಪೊಲೀಸರು ಜಪ್ತಿ ಮಾಡಿದ್ದಾರೆ   

ಚಿತ್ತಾಪುರ (ಕಲಬುರ್ಗಿ ಜಿಲ್ಲೆ): ಜಾನುವಾರು ಅಕ್ರಮ ಸಾಗಣೆ ಸಂಬಂಧ ಪಟ್ಟಣದಲ್ಲಿ ಭಾನುವಾರ ತಡರಾತ್ರಿ ಗುಂಪು ಘರ್ಷಣೆ ನಡೆದಿದ್ದು, ಪೊಲೀಸರ ಮೇಲೆಯೇ ಕೆಲವು ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.

ಭಾನುವಾರ ರಾತ್ರಿ 11ರ ವೇಳೆಗೆ ದಿಗ್ಗಾಂವ ಕಡೆಯಿಂದ ಖಾಸಗಿ ವಾಹನ ಬರುತ್ತಿದ್ದಾಗ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ವಾಹನ ನಿಲ್ಲಿಸಲು ಪ್ರಯತ್ನಿಸಿದರು. ವಾಹನ ಚಾಲಕ ಪೊಲೀಸರ ಸೂಚನೆ ಧಿಕ್ಕರಿಸಿ ವೇಗವಾಗಿ ವಾಹನ ಚಲಾಯಿಸಿಕೊಂಡು ಹೋದ. ತಕ್ಷಣ ಪೊಲೀಸರು ಇನ್ನೊಂದು ವಾಹನದಲ್ಲಿ ಬೆನ್ನಟ್ಟಿದರು. ಅದೇ ರಸ್ತೆಯಲ್ಲಿದ್ದ ಕೆಲವು ಯುವಕರು ವಾಹನ ತಡೆಯುವಲ್ಲಿ ಯಶಸ್ವಿಯಾದರು.

ಮೂರು ಹೋರಿ ಇದ್ದ ಈ ವಾಹನವನ್ನು ಠಾಣೆಗೆ ತಂದರು. ಬೆಳಿಗ್ಗೆಈ ವಿಷಯ ಪಟ್ಟಣದಲ್ಲಿ ಕಾಳ್ಗಿಚ್ಚಿನಂತೆ ಹರಡಿತು. ಎರಡೂ ಕೋಮಿನ ಜನರು ಠಾಣೆ ಹತ್ತಿರ ಜಮಾಯಿಸಿದರು. ಶಾಂತಿ ಮಾತುಕತೆ ನಡೆಯುವಾಗಲೇ, ವಾಹನ ಸವಾರನ ಪ‍ರ ಗುಂಪು ಇನ್ನೊಂದು ಗುಂಪಿನ ಯುವಕನ ಮೇಲೆ ದಿಢೀರ್‌ ಹಲ್ಲೆ ನಡೆಸಿತು. ಮನಸೋ ಇಚ್ಛೆ ಯುವಕನನ್ನು ಥಳಿಸಿ, ಬೈಕ್‌ ಜಖಂಗೊಳಿಸಿದರು. ಮನೆಯೊಂದರ ಮುಂದಿದ್ದ ಕಾರಿಗೆ ಕಲ್ಲು ತೂರಿ ಗಾಜು ‍‍ಪುಡಿಪುಡಿ ಮಾಡಿದರು.

ADVERTISEMENT

ಈ ವೇಳೆ ಉದ್ರಿಕ್ತ ಯುವಕರು ಘೋಷಣೆ ಕೂಗಲು ಶುರು ಮಾಡಿದರು.ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಆಗಲೇ ಗಲ್ಲಿಗಳಲ್ಲಿ ಜಮಾಯಿಸಿ ನಿಂತಿದ್ದ ದುಷ್ಕರ್ಮಿಗಳು, ಪೊಲೀಸರ ಮೇಲೆ ಕಲ್ಲು ತೂರಿದರು. ರಕ್ಷಣೆ ಪಡೆಯಲು ಪೊಲೀಸರು ವಾಪಸ್‌ ಓಡಿ ಬರುತ್ತಿದ್ದ ದೃಶ್ಯದ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು.

ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.