ಕಲಬುರಗಿ: ಒಂದು ವರ್ಷದಲ್ಲಿ ಹಣ ದುಪ್ಪಟ್ಟು ಮಾಡಿಕೊಡುವ ಆಮಿಷಯೊಡ್ಡಿದ ದಂಪತಿ, ಶಿಕ್ಷಕ ಸೇರಿದಂತೆ ಹಲವರಿಂದ ₹ 30 ಕೋಟಿ ಪಡೆದು ಪರಾರಿಯಾದ ಆರೋಪದಡಿ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕ್ಯಾಪಿಟಲ್ ಗ್ರೋ ಲರ್ನ್’ ಟ್ರೇಡಿಂಗ್ ಕಂಪನಿ ಮಾಲೀಕರಾದ ಉತ್ಕರ್ಷ ವರ್ಧಮಾನೆ ಮತ್ತು ಸಾವಿತ್ರಿ ವರ್ಧಮಾನೆ, ಪರಾರಿಯಾಗಲು ಸಹಕರಿಸಿದ ಆರೋಪದಡಿ ಸುಧಾ ಠಾಕೂರ ಮತ್ತು ಸಂಬಂಧಿ ವಿಜಯಸಿಂಗ್ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರ್ಧಮಾನೆ ದಂಪತಿ ಗಾಂಧಿನಗರ ಕಮಾನು ಸಮೀಪ ಕಂಪನಿಯ ಕಚೇರಿ ತೆರೆದಿದ್ದರು. ₹ 1 ಲಕ್ಷ ಹೂಡಿಕೆ ಮಾಡಿದರೆ ಒಂದು ವರ್ಷದಲ್ಲಿ ₹ 2 ಲಕ್ಷ ಕೊಡುವುದಾಗಿ ನಂಬಿಸಿದ್ದರು. ಇದನ್ನು ನಂಬಿದ್ದ ಶಿಕ್ಷಕ ವೀರೇಶ ಭೀಮಾಶಂಕರ ಅವರು ಹಂತ ಹಂತವಾಗಿ ₹ 5.50 ಲಕ್ಷ ಹಣವನ್ನು ವರ್ಧಮಾನೆ ಅವರಿಗೆ ಕೊಟ್ಟಿದ್ದರು. ವೀರೇಶ ಅವರಂತೆ ಮಹಮದ್ ಇಬ್ರಾಹಿಂ, ಗುಂಡಪ್ಪ ವಾರದ್, ಚಂದ್ರಕಾಂತ ರಾಠೋಡ್ ಸೇರಿ ಹಲವರಿಂದ ಒಂದು ವರ್ಷದಲ್ಲಿ ₹ 1 ಕೋಟಿಗೂ ಅಧಿಕ ಹಣವನ್ನು ವರ್ಧಮಾನೆ ದಂಪತಿ ಪಡೆದಿದ್ದಾರೆ ಎಂದು ಸಂತ್ರಸ್ತರು ದೂರು ಕೊಟ್ಟಿದ್ದಾರೆ.
ಹಣದ ಸುರಕ್ಷತೆಯನ್ನು ನಂಬಿಸಲು ಬಾಂಡ್ ಪೇಪರ್ ಮತ್ತು ಚೆಕ್‌ಗಳನ್ನು ಕೊಟ್ಟಿದ್ದರು. ಲಾಭಾಂಶ ಸೇರಿ ಯಾವುದೇ ಹಣವನ್ನು ವಾಪಸ್ ಮಾಡದ ದಂಪತಿ, ಮೇ 24ರ ಮಧ್ಯರಾತ್ರಿ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.