ADVERTISEMENT

ಕಲಬುರಗಿ: ಮಕ್ಕಳನ್ನು ಕರೆತರುವುದೇ ಶಿಕ್ಷಕರಿಗೆ ಸವಾಲು

ಶಾಲೆ ಶುರುವಾಗಿ ಎರಡು ವಾರ ಕಳೆದರೂ ಶೇ 54ರಷ್ಟು ಮಕ್ಕಳು ಹೊರಗೆ: ಜೇವರ್ಗಿ, ಯಡ್ರಾಮಿ ತಾಲ್ಲೂಕುಗಳಲ್ಲಿ ಹೆಚ್ಚು ಗೈರು

ಮಲ್ಲಿಕಾರ್ಜುನ ನಾಲವಾರ
Published 17 ಜೂನ್ 2025, 5:17 IST
Last Updated 17 ಜೂನ್ 2025, 5:17 IST
ಕಲಬುರಗಿಯ ಜೇವರ್ಗಿ ಕಾಲೊನಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಹಾಜರಾದ ಮಕ್ಕಳು (ಸಂಗ್ರಹ ಚಿತ್ರ)
ಕಲಬುರಗಿಯ ಜೇವರ್ಗಿ ಕಾಲೊನಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಹಾಜರಾದ ಮಕ್ಕಳು (ಸಂಗ್ರಹ ಚಿತ್ರ)    

ಕಲಬುರಗಿ: ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲೆಗಳು ಆರಂಭವಾಗಿ ಎರಡು ವಾರ ಕಳೆದರೂ ಮಕ್ಕಳು ಪೂರ್ಣ ಪ್ರಮಾಣದಲ್ಲಿ ತರಗತಿಗೆ ಹಾಜರಾಗುತ್ತಿಲ್ಲ. ಅರ್ಧಕ್ಕೂ ಹೆಚ್ಚಿನ ಸಂಖ್ಯೆಯ ಮಕ್ಕಳು ಶಾಲೆಯ ಮೆಟ್ಟಿಲೂ ತುಳಿದಿಲ್ಲ.

ಅಕ್ಷರ ದಾಸೋಹ ಅಧಿಕಾರಿಗಳು ನೀಡಿದ ಮಾಹಿತಿ ಅನ್ವಯ, ಜಿಲ್ಲೆಯ 2,188 ಶಾಲೆಗಳಲ್ಲಿ ಜೂನ್ 16ರ ವರೆಗೆ ಶೇ 45.20ರಷ್ಟು ಮಕ್ಕಳು ಮಾತ್ರವೇ ತರಗತಿಗೆ ಹಾಜರಾಗಿದ್ದಾರೆ. ಉಳಿದ ಶೇ 54.80ರಷ್ಟು ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕು ವ್ಯಾಪ್ತಿಯಲ್ಲಿ ಅತ್ಯಧಿಕ (ಶೇ 70ರಷ್ಟು) ಸಂಖ್ಯೆಯ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ.

ಬೇಸಿಗೆ ರಜೆಯ ಮಜಾ ಅನುಭವಿಸಿದ್ದ ಚಿಣ್ಣರಿಗೆ ಮೇ 29ರಿಂದ ಶಾಲಾ ತರಗತಿಗಳ ಬಾಗಿಲು ತೆರೆದವು. ಶಿಕ್ಷಕರ ಪಾಠ ಕೇಳುವ ಉತ್ಸುಕತೆ ಇರುವ ಕೆಲವಷ್ಟೇ ವಿದ್ಯಾರ್ಥಿಗಳು ಖುಷಿಯಿಂದ ಹಾಜರಾದರು. ಶಿಕ್ಷಕರು ಸಹ ಕೈಕುಲಕಿ ಚಾಕೊಲೇಟ್ ನೀಡಿ, ಪುಷ್ಪದಳ ಎಸೆದು ಸಂತಸದಿಂದಲೂ ಬರಮಾಡಿಕೊಂಡರು. 

ADVERTISEMENT

ಈಗ ಶಾಲೆಯಿಂದ ಹೊರಗೆ ಉಳಿದಿರುವ ಅರ್ಧದಷ್ಟು ಮಕ್ಕಳನ್ನು ತರಗತಿಯಲ್ಲಿ ಕೂಡಿಸುವ ಹೊಣೆಗಾರಿಕೆ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ (ಎಸ್‌ಡಿಎಂಸಿ) ಹೆಗಲೇರಿದೆ. ‘ಸರ್ಕಾರಿ ಶಾಲೆಗೆ ಮಗುವನ್ನು ಕಳುಹಿಸಿ’, ‘ಶಾಲೆಗೆ ಬನ್ನಿ’, ‘ಶಾಲೆಗೆ ಬಾ ಮಗು’ ಎಂದು ಶಿಕ್ಷಕರು ಮನೆ–ಮನೆಗೆ ಹೋಗಿ ಜಾಗೃತಿ ಮೂಡಿಸಿ, ಮಗುವನ್ನೂ ಕರೆ ತರುವಲ್ಲಿ ನಿರತವಾಗಿದ್ದಾರೆ.

ಫಲಿತಾಂಶ, ಹಾಜರಾತಿಯಲ್ಲೂ 42ರಿಂದ 43 ಪರ್ಸೆಂಟ್: ‘ಶಾಲೆಗಳು ಪುನರಾರಂಭವಾಗಿ 15 ದಿನಗಳು ಕಳೆದರೂ 42ರಿಂದ 43 ಪರ್ಸೆಂಟ್ ಮಕ್ಕಳು ಬಂದಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 42 ಪರ್ಸೆಂಟ್ ಇದೆ, ಹಾಜರಾತಿಯಲ್ಲಿಯೂ 42ರಿಂದ 43 ಪರ್ಸೆಂಟ್ ಇದೆಯಲ್ಲಾ, ಇವು ಎರಡಕ್ಕೂ ಏನಾದರು ಸಂಬಂಧ ಇದೆಯಾ ಎಂದು ಹಿರಿಯ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಕೃಷಿ ಪ್ರಧಾನ ಜಿಲ್ಲೆಯಾಗಿದ್ದರಿಂದ ಗ್ರಾಮೀಣ ಭಾಗದಲ್ಲಿ ಸಹಜವಾಗಿ ಮಕ್ಕಳು ಪೋಷಕರೊಂದಿಗೆ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಹೀಗಾಗಿ, ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ದಾಖಲಾತಿ ಆಂದೋಲನ ನಡೆಸಲಾಗುತ್ತಿದೆ. ಪಾಲಕರ ಮನೆ ಬಾಗಿಲು ತಟ್ಟಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವರಿಕೆಯೂ ಮಾಡುತ್ತಿದ್ದೇವೆ. ಬಿಸಿಯೂಟದ ವ್ಯವಸ್ಥೆ, ಅಪೌಷ್ಟಿಕ ನಿವಾರಣೆಗೆ ಮೊಟ್ಟೆ, ಬಾಳೆ ಹಣ್ಣು, ಉಚಿತ ಪುಸ್ತಕ, ಸಮಸ್ತ್ರ ಸೇರಿ ನಾನಾ ಸೌಕರ್ಯಗಳ ಬಗ್ಗೆ ಪಾಲಕರಿಗೆ ತಿಳಿಸುತ್ತಿದ್ದೇವೆ’ ಎನ್ನುತ್ತಾರೆ ಶಿಕ್ಷಕರು.

ಶಿಕ್ಷಕರು ಎಸ್‌ಡಿಎಂಸಿ ಸದಸ್ಯರು ಗ್ರಾಮದ ಮುಖಂಡರು ಶಾಲೆಯ ಹಳೇ ವಿದ್ಯಾರ್ಥಿಗಳೊಂದಿಗೆ ಶಾಲೆಗೆ ಬಾರದ ಮಕ್ಕಳ ಮನೆ– ಮನೆಗೆ ಹೋಗಿ ಅವರನ್ನು ಕರೆ ತರಲಾಗುತ್ತಿದೆ
ಸೂರ್ಯಕಾಂತ ಮದಾನೆ ಡಿಡಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.