ADVERTISEMENT

ಕಲಬುರ್ಗಿ | ಹಸಿವು ನೀಗಿಸಿಕೊಳ್ಳಲು ಭಿಕ್ಷೆ ಬೇಡುತ್ತಿವೆ ಮಕ್ಕಳು

ಕೆಲಸವಿಲ್ಲ ಬಿಡಿಗಾಸೂ ಇಲ್ಲ; ಜೀವನ ನಿರ್ವಹಣೆ ದುಸ್ತರ!

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 2:05 IST
Last Updated 18 ಜೂನ್ 2020, 2:05 IST

ಕಮಲಾಪುರ (ಕಲಬುರ್ಗಿ ಜಿಲ್ಲೆ): ಕೊರೊನಾ ಕರಾಳ ಛಾಯೆಯಿಂದ ಅನೇಕ ಸಂಸಾರಗಳು ನರಳುತ್ತಿದ್ದು, ಕಮಲಾಪುರ ಸಮೀಪದ ದೇವಲು ನಾಯಕ ತಾಂಡಾದ ಕುಟುಂಬವೊಂದ ಜರ್ಜರಿತವಾಗಿದೆ. ತಿನ್ನಲು ಏನೂ ಇಲ್ಲದ್ದಕ್ಕೆ ಭಿಕ್ಷೆ ಬೇಡಿ ಹಸಿವು ನೀಗಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ವೃದ್ಧ ಅತ್ತೆ, ಮಾನಸಿಕ ಅಸ್ವಸ್ಥ ಪತಿ, 5, 3, 2 ವರ್ಷದ ಮೂರು ಮಕ್ಕಳನ್ನು ತಾನೊಬ್ಬಳೇ ದುಡಿದು ಸಾಕುತ್ತಿದ್ದ ಮಹಿಳೆ ಚಾಂಗುನಾಬಾಯಿ ಈ ಕುಟುಂಬದ ಸಂಪೂರ್ಣ ಭಾರ ಹೊತ್ತಿದ್ದಾರೆ. ತಾಂಡಾದಲ್ಲಿ ತುಂಡು ಭೂಮಿಯಿಲ್ಲ. ಒಂದೆಡೆ ಉರುಳಿದ ಒಂದು ಕೋಣೆಯ ಮನೆಯಲ್ಲಿ ವಾಸಿಸುವ ಇವರಿಗೆ ಪ್ರತಿ ದಿನ ದುಡಿಯದಿದ್ದರೆ ಹೊಟ್ಟೆ ತುಂಬುವುದಿಲ್ಲ.

ಕೃಷಿ ಚಟುವಟಿಕೆಗಳಿದ್ದಾಗ ಮಾತ್ರ ತಾಂಡಾದಲ್ಲಿ ಕೆಲಸ ಸಿಗುತ್ತದೆ. ಇನ್ನುಳಿದ ದಿನಗಳಲ್ಲಿ ಕೆಲಸ ಅರಸಿ ಮುಂಬೈಗೆ ಗುಳೆ ಹೋಗುವುದು ಅನಿವಾರ್ಯ. ಪತಿ, ಅತ್ತೆ, ಮಕ್ಕಳನ್ನು ಊರಲ್ಲೇ ಬಿಟ್ಟು ಸಹೋದರರ ಜೊತೆ ಮುಂಬೈಗೆ ತೆರಳುವ ಇವರು ಮೂರ್ನಾಲ್ಕು ತಿಂಗಳು ದುಡಿಮೆ ಮಾಡಿ ಹಣ ಕೂಡಿಟ್ಟುಕೊಂಡು ಊರಿಗೆ ಮರಳುತ್ತಿದ್ದರು. ಅದರಲ್ಲೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.

ADVERTISEMENT

ಈ ಕುರಿತು ‘ಪ್ರಜಾವಾಣಿ’ ಪ್ರತಿನಿಧಿ ಚಾಂಗುನಾಬಾಯಿ ಜೊತೆ ಮಾತಿಗಿಳಿದಾಗ ತಮ್ಮ ಸಂಕಷ್ಟದ ಬದುಕಿನ ಕಥೆ ಬಿಚ್ಚಿಟ್ಟರು.
‘ಗಂಡ ಮಾನಸಿಕ ಅಸ್ವಸ್ಥನಿದ್ದಾನೆ. ಅತ್ತೆಗೆ ವಯಸ್ಸಾಗಿದೆ. ಇವರನ್ನು ಊರಲ್ಲೇ ಬಿಟ್ಟು ಕೆಲಸ ಹುಡುಕಿಕೊಂಡು ಸಹೋದರರ ಜೊತೆ ಮುಂಬೈಗೆ ಹೋಗಿದ್ದೆ. ಕಲ್ಯಾಣ ನಗರದಲ್ಲಿ 15 ದಿನ ಕೆಲಸ ಮಾಡಿದೆ. ಅಷ್ಟರಲ್ಲೆ ಲಾಕ್ ಡೌನ್ ಘೋಷಣೆಯಾಯಿತು. ಸಂಪೂರ್ಣ ಕೆಲಸ ನಿಂತುಹೋಯಿತು. ಸುಮಾರು 17 ದಿನ ಲಾಕ್‍ಡೌನ್‍ನಲ್ಲಿ ಕಳೆದೆ. ಆಹಾರ ಸಾಮಗ್ರಿಗಳೆಲ್ಲ ಮುಗಿಯುತ್ತಿದ್ದಂತೆ ಮೇ 7ರಂದು ಅಲ್ಲಿಂದ ಕಾಲ್ಕಿತ್ತಿದ್ದೆವು. 6 ದಿನ ನಡೆದುಕೊಂಡು ಮೇ 13ರಂದು ಕಮಲಾಪುರ ತಲುಪಿದೆ’ ಎಂದರು.

14 ದಿನ ಕ್ವಾರಂಟೈನ್‍ನಲ್ಲಿ ಉಳಿದೆ. ನಂತರ ಬರಿಗೈಯಲ್ಲಿ ಮನೆ ಸೇರಿದೆ. ಮಕ್ಕಳು ಮುಖ ನೋಡ ತೊಡಗಿದವು. ಹೊತ್ತುತಂದ ಚೀಲದ ಗಂಟು ಬಿಚ್ಚಿ ನೋಡಿದವು. ಹೊಸದೇನು ಇಲ್ಲ! ಊರಿಂದಲೇ ಕೊಂಡೊಯ್ದ ಹಾಸಿಗಿ, ಹಚ್ಚಡ, ಸೀರೆ ಮಾತ್ರ. ಮಕ್ಕಳಿಗೆ ತಿನ್ನಲು ಏನನ್ನೂ ತಂದಿಲ್ಲ. ಮಕ್ಕಳ ಸಪ್ಪೆ ಮುಖ ನೋಡಿ ಕಣ್ಣೀರು ಬಂತು. ಇನ್ನು ಮುಂದೆ ಈ ಮಕ್ಕಳ ಸಾಕುವುದು ಹೇಗೆಂಬ ಚಿಂತೆಯೂ ಕಾಡತೊಡಗಿದೆ.

‘ಪಡಿತರ ತಿಂಗಳವರೆಗೆ ಸರಿ ಹೋಗುವುದಿಲ್ಲ. ಬೇರೆ ತಾಂಡಾಗಳಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ಚಾಲ್ತಿಯಲ್ಲಿದೆ. ನಮ್ಮ ತಾಂಡಾದಲ್ಲಿ ಅದೂ ಇಲ್ಲ. ಪ್ರತಿ ದಿನ ಕಮಲಾಪುರ ಮತ್ತಿತರ ಕಡೆ ಕೆಲಸಕ್ಕಾಗಿ ಅಲೆಯುತ್ತಿದ್ದೇನೆ. ಎಲ್ಲಿಯೂ ಕೆಲಸ ಸಿಗುತ್ತಿಲ್ಲ. ಅನಿವಾರ್ಯವಾಗಿ ಮಕ್ಕಳಿಗೆ ತಟ್ಟೆಕೊಟ್ಟು ಎಲ್ಲಿಯಾದರೂ ಕೇಳಿ ತಿನ್ನಿ ಎಂದೆ. ತಾಂಡಾ ಜನ ನಮ್ಮ ಸ್ಥಿತಿ ನೋಡಿ ಮಕ್ಕಳಿಗೆ ಭಿಕ್ಷೆ ನೀಡತೊಡಗಿದರು. ಇದು ದಿನದ ರೂಢಿಯಾಯಿತು. ಮಕ್ಕಳು ತಂದ ಅನ್ನದಲ್ಲೇ ಗಂಡನೂ ತಿನ್ನುತ್ತಾನೆ. ಅತ್ತೆ ನಾನು ಏನಾದರೂ ಉಳಿದಿದ್ದದರೆ ತಿನ್ನುತ್ತೇವೆ ಇಲ್ಲದಿದ್ದರೆ ಉ‍ಪವಾಸ. ಸಂಕಷ್ಟದ ಈ ಸ್ಥಿತಿಯಲ್ಲೆ ಹೇಗೋ ಬದುಕುಳಿಯುತ್ತೇವೆ. ಮುಂದೆ ನಮಗೂ ಒಳ್ಳಕಾಲ ಬಂದೀತು ಎಂಬ ಆಶಾ ಭಾವನೆ ಇದೆ’ ಎಂದು ಕಣ್ಣೀರಾದರು ಚಾಂಗುನಾಬಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.