ಚಿಂಚೋಳಿ: ತಾಲ್ಲೂಕಿನ ಫತೆಪುರ–ಐನೋಳ್ಳಿ ಮಧ್ಯೆ ಹರಿಯುವ ಸರನಾಲಾ ನದಿಗೆ ಅಡ್ಡಲಾಗಿದೆ ಬ್ರಿಜ್ ಕಂ ಬ್ಯಾರೇಜು ನಿರ್ಮಿಸಲಾಗಿದ್ದು, ಫತೆಪುರ ಗ್ರಾಮಸ್ಥರ ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.
ಸಮೀಪದ ಐನೋಳ್ಳಿ ಗ್ರಾಮದಿಂದ ಕೇವಲ 2 ಕಿ.ಮೀ ಅಂತರದಲ್ಲಿದ್ದರೂ ಕೂಡ ಜನರು ಸೇತುವೆ ಇಲ್ಲದ ಕಾರಣ 6 ಕಿ.ಮೀ ಸುತ್ತು ಹಾಕಿ ಗ್ರಾಮಕ್ಕೆ ತೆರಳಬೇಕಾಗಿತ್ತು. ಈಗ ಸೇತುವೆ ನಿರ್ಮಾಣವಾಗಿದ್ದರಿಂದ ನದಿಯ ಆಚೆಗಿನ ಹೊಲಗಳಿಗೆ ತೆರಳುವ ರೈತರಿಗೆ, ಐನೋಳ್ಳಿ ಸರ್ಕಾರಿ ಪ್ರೌಢಶಾಲೆಗೆ ತೆರಳುವ ಮಕ್ಕಳಿಗೆ ಹಾಗೂ ಐನೋಳ್ಳಿಗೆ ತೆರಳುವ ಜನರಿಗೆ ವರದಾನವಾಗಲಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಂದಾಜು ₹8 ಕೋಟಿ ಅನುದಾನದಲ್ಲಿ ಸೇತುವೆ ನಿರ್ಮಿಸಿದ್ದು, ಶಾಸಕ ಡಾ.ಅವಿನಾಶ ಜಾಧವ ಅಗತ್ಯ ಅನುದಾನ ಮಂಜೂರು ಮಾಡಿಸಿದ್ದಾರೆ.
‘1.20 ದಶಲಕ್ಷ ಕ್ಯೂಬಿಕ್ ಮೀಟರ್ ಸಂಗ್ರಹಣಾ ಸಾಮರ್ಥ್ಯದ 150 ಗೇಟುಗಳು ಮತ್ತು ಉಗ್ರಾಣ ನಿರ್ಮಿಸಲಾಗಿದೆ. 3.5 ಮೀಟರ್ ಎತ್ತರ ಹಾಗೂ 75 ಮೀಟರ್ ಉದ್ದ ಹಾಗೂ 5.5 ಮೀಟರ್ ಅಗಲದ ಬ್ರಿಜ್ ಕಂ ಬ್ಯಾರೇಜಿನಿಂದ 225 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಯಾಗಲಿದೆ’ ಎಂದು ಸಣ್ಣ ನೀರಾವರಿ ಉಪ ವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನೀಯರ್ ಶಿವಾಜಿ ಜಾಧವ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಭೌತಿಕ ಕಾಮಗಾರಿ ಪೂರ್ಣಗೊಂಡಿದ್ದು ಅಂತಿಮ ಹಂತದ ಕೆಲಸ ಕೈಗೊಳ್ಳಬೇಕಿದೆ. ಜೊತೆಗೆ ಕೂಡು ರಸ್ತೆ ನಿರ್ಮಾಣ ಬಾಕಿಯಿದೆ. ಚಂದ್ರಪಳ್ಳಿ ಜಲಾಶಯ ನೀರು ಬಿಟ್ಟರೆ ಫತೆಪುರ ಶಾಲಾ ಮಕ್ಕಳು ಐನೋಳ್ಳಿಗೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಈಗ ಆ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.
‘ಜನರ ಬೇಡಿಕೆಗೆ ಸ್ಪಂದಿಸಿ ಬ್ರಿಜ್ ಕಂ ಬ್ಯಾರೇಜು ನಿರ್ಮಿಸಿದ ಶಾಸಕರಿಗೆ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ನಾರಾಯಣ ಕೊಟ್ರಕಿ ತಿಳಿಸಿದರು.
ಫತೆಪುರ ಬ್ರಿಜ್ ಕಂ ಬ್ಯಾರೇಜು ಮಂಜೂರಾತಿಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಗಮನಕ್ಕೆ ಬಂದಾಗ ನಾನು ಸ್ವತಃ ಸಣ್ಣ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳ ಕಚೇರಿಗೆ ತೆರಳಿ ಪತ್ರ ನೀಡಿ ಮಂಜೂರಾತಿಗೆ ಕೈಜೋಡಿಸಿದ್ದೇನೆದೀಪಕನಾಗ್ ಪುಣ್ಯಶೆಟ್ಟಿ ಮಾಜಿ ಅಧ್ಯಕ್ಷರು ಜಿ.ಪಂ. ಕಲಬುರಗಿ
ಬ್ರಿಜ್ ಕಂ ಬ್ಯಾರೇಜಿನ ಸೈಡ್ ವಾಲ್ ಮತ್ತು ಸ್ಲ್ಯಾಬ್ ಮೇಲೆ 3 ಇಂಚು ಸಿಸಿ ಕಾಂಕ್ರಿಟ್ ಹಾಕುವಾಗ ಕಪ್ಪು ಮರಳು ಬಳಸುತ್ತಿದ್ದಾಗ ಪ್ರತಿಭಟಿಸಿದ್ದರಿಂದ ಅದನ್ನು ತೆಗೆದುಹಾಕಿದ್ದಾರೆ. ಕಾಮಗಾರಿ ಬಗ್ಗೆ ಅನುಮಾನಗಳಿವೆಶಿವರಾಜ ತಳವಾರ ಕೃಷಿಕರು ಐನೋಳ್ಳಿ
ಫತೆಪುರ ಐನೋಳ್ಳಿ ಜನರ ಬಹುದಿನಗಳ ಬೇಡಿಕೆ ಈಡೇರಿಸಲು ಕೆಕೆಆರ್‌ಡಿಬಿ ಅಡಿಯಲ್ಲಿ ಅಗತ್ಯವಾದ ಅನುದಾನ ಮಂಜೂರು ಮಾಡಿಸಿದ್ದೇನೆ. ರೈತರು ಇದರ ಸದ್ಭಳಕೆ ಮಾಡಿಕೊಳ್ಳಬೇಕುಡಾ.ಅವಿನಾಶ ಜಾಧವ ಶಾಸಕ ಚಿಂಚೋಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.