ಚಿಂಚೋಳಿ: ತಾಲ್ಲೂಕಿನ ಎತ್ತಿಪೋತೆ ಜಲಪಾತಕ್ಕೆ ಭೇಟಿ ನೀಡಿ, ಪರಿಶೀಲಿಸಿ ವರದಿ ಸಲ್ಲಿಸುವಂತೆ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೂಚಿಸಿದರು.
ಇಲ್ಲಿನ ಪ್ರಜಾಸೌಧದಲ್ಲಿ ಮಂಗಳವಾರ ಕಂದಾಯ ಇಲಾಖೆಯ ಸಿಬ್ಬಂದಿಯೊಂದಿಗೆ ಸಭೆ ನಡೆಸಿದ ಅವರು, ಅಕ್ರಮ ಸಕ್ರಮದಲ್ಲಿ ಸರ್ಕಾರಿ ಜಮೀನು ಮಂಜೂರಾತಿ ಪಡೆದವರಿಗೆ ಫಾರಂ 10 ದಾಖಲೆ ಮಾಡಿಕೊಡುವ ಪ್ರಕ್ರಿಯೆ, ಸಕಾಲ ಅರ್ಜಿಗಳ ವಿಲೇವಾರಿ, ಬೆಳೆಹಾನಿ, ಪ್ರವಾಹ ನಿರ್ವಹಣೆ ಸೇರಿದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಚಿಂಚೋಳಿಯ ಪ್ರಜಾಸೌಧದಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ಈಗಾಗಲೇ ಅಂದಾಜು ಪಟ್ಟಿ ತಯಾರಿಸಿ ₹ 38 ಲಕ್ಷ ಅನುದಾನ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರವೇ ಅಗತ್ಯವಾದ ಅನುದಾನ ಮಂಜೂರಾಗಲಿದೆ ಎಂದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಪ್ರಭುರೆಡ್ಡಿ, ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ವೆಂಕಟೇಶ ದುಗ್ಗನ್ ಹಾಗೂ ರವಿ ಪಾಟೀಲ, ಅಶೋಕ ಕುಲಕರ್ಣಿ, ಶಶಿಧರ ಸ್ವಾಮಿ, ರಾಜೇಂದ್ರ ಹುಗ್ಗಿ, ಕೇಶವ ಕುಲಕರ್ಣಿ, ಕರಬಸಪ್ಪ, ಭೀಮರೆಡ್ಡಿ, ಗೌತಮ, ಖದೀರಪಾಶಾ, ಶೋಹೇಬ್, ಮಕ್ದುಮ್ ಅಲಿ ಮೊದಲಾದವರು ಇದ್ದರು.
ತೆರೆಯದ ಇ–ಖಜಾನೆ ಬಾಗಿಲು!
ಚಿಂಚೋಳಿ ತಾಲ್ಲೂಕಿನ ಪ್ರಜಾಸೌಧದಲ್ಲಿರುವ ಅಭಿಲೇಖಾಲಯದ ಇ–ಖಜಾನೆಯ ಬಾಗಿಲು ಸ್ವತಃ ಜಿಲ್ಲಾಧಿಕಾರಿ ಪೌಜಿಯಾ ತರನ್ನುಮ್ ಬಂದರೂ ತೆರೆಯಲಿಲ್ಲ!
ಇ–ಖಜಾನೆ ಬಾಗಿಲು ತೆರೆಯಲು ಶಿರಸ್ತೆದಾರ್ ಮತ್ತು ದಾಖಲೆ ನಿರ್ವಾಹಕರಿಂದ ಮಾತ್ರ ಸಾಧ್ಯ. ಹೀಗಾಗಿ ಇ–ಖಜಾನೆಯಲ್ಲಿ ಅಳವಡಿಸಿರುವ ಕಾಂಪ್ಯಾಕ್ಟರ್‌ನಲ್ಲಿ ದಾಖಲೆ ಇರಿಸಿದ್ದನ್ನು ಜಿಲ್ಲಾಧಿಕಾರಿ ವೀಕ್ಷಿಸಲು ಬಂದಾಗ ಈ ಘಟನೆ ನಡೆಯಿತು.
ಶಿರಸ್ತೆದಾರ ಅಶೋಕ ಕುಲಕರ್ಣಿ, ನಿರ್ವಾಹಕ ಮಧುಸೂಧನ ಘಾಳೆ ಅವರು ಬಂದು ಬಯೋ ಮೆಟ್ರಿಕ್ ನೀಡಿದ ಮೇಲೆ ಬಾಗಿಲು ತೆರೆಯಿತು. ನಂತರ ಜಿಲ್ಲಾಧಿಕಾರಿಗಳು ಒಳಗಡೆ ಪ್ರವೇಶಿಸಿ ಮಾಧ್ಯಮದವರಿಗೆ ಕಾಂಪ್ಯಾಕ್ಟರ್‌ನಲ್ಲಿ ಇರಿಸಿದ ದಾಖಲೆಗಳನ್ನು ತೋರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.