ADVERTISEMENT

ಚಿಂಚೋಳಿ | ಜಲಾಶಯಗಳಿಂದ ನದಿಗೆ ನೀರು; ಮುಳುಗಡೆಯಾದ ಸೇತುವೆಗಳು

ನದಿಯ ದಂಡೆಯ ಗ್ರಾಮಸ್ಥರ ಅರಣ್ಯರೋದನ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 5:18 IST
Last Updated 29 ಆಗಸ್ಟ್ 2025, 5:18 IST
ಚಿಂಚೋಳಿ ತಾಲ್ಲೂಕಿನ ತಾಜಲಾಪುರ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಗ್ರಾಮ ಸಂಪರ್ಕ ಕಳೆದುಕೊಂಡಿರುವುದು
ಚಿಂಚೋಳಿ ತಾಲ್ಲೂಕಿನ ತಾಜಲಾಪುರ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಗ್ರಾಮ ಸಂಪರ್ಕ ಕಳೆದುಕೊಂಡಿರುವುದು   

ಚಿಂಚೋಳಿ: ತಾಲ್ಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದರಿಂದ ಗೇಟು ತೆರೆದು ನದಿಗೆ ನೀರು ಬಿಡಲಾಗಿದೆ.

ಇದರಿಂದ ತಾಲ್ಲೂಕಿನ ವಿವಿಧೆಡೆ ಸೇತುವೆಗಳು ಮುಳುಗಡೆಯಾಗಿ ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ತಾಲ್ಲೂಕಿನ ನಾಗರಾಳ ಜಲಾಶಯಕ್ಕೆ 2,000 ಕ್ಯೂಸೆಕ್ ಒಳಹರಿವಿದ್ದು 2,500 ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. ಸದ್ಯ  ಜಲಾಶಯದ ನೀರಿನ ಮಟ್ಟ 490.15 ಮೀಟರ್ ಇದೆ ಎಂದು ಸಹಾಯಕ ಎಂಜಿನಿಯರ್ ವಿನಾಯಕ ಚವ್ಹಾಣ ತಿಳಿಸಿದ್ದಾರೆ.

ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯಕ್ಕೆ 1,000 ಕ್ಯೂಸೆಕ್ ಒಳಹರಿವು ಇದ್ದು, ಜಲಾಶಯದ ನೀರಿನ ಮಟ್ಟ 1612.4 ಅಡಿಯಿದೆ. ರಾತ್ರಿ ಜಲಾಶಯದಿಂದ ಒಳ ಹರಿವಿನ ಪ್ರಮಾಣ ಅನುಸರಿಸಿ ನೀರು ನದಿಗೆ ಬಿಡಲಾಗುವುದು ಎಂದು ಮೂಲಗಳು ತಿಳಿಸಿವೆ.

ADVERTISEMENT

ಸೇತುವೆಗಳು ಮುಳುಗಡೆ: ನದಿಗೆ ಜಲಾಶಯಗಳಿಂದ ನೀರು ಬಿಟ್ಟಿದ್ದರಿಂದ ಮುಲ್ಲಾಮಾರಿ ನದಿಯಲ್ಲಿ ಬರುವ ವಿವಿಧ ಸೇತುವೆಗಳು ಹಾಗೂ ಬ್ಯಾರೇಜ್‌ಗಳು ಮುಳುಗಡೆಯಾಗಿವೆ.

ತಾಲ್ಲೂಕಿನ ತಾಜಲಾಪುರ ಸೇತುವೆ, ಕನಕಪುರ (ಹಳೆ ಮತ್ತು ಹೊಸ ಬ್ಯಾರೇಜ್‌), ಚಂದಾಪುರ, ಪೋಲಕಪಳ್ಳಿ, ಅಣವಾರ, ಗರಗಪಳ್ಳಿ-ಭಕ್ತಂಪಳ್ಳಿ, ಬುರುಗಪಳ್ಳಿ ಇರಗಪಳ್ಳಿ ಬ್ಯಾರೇಜ್‌ಗಳು ಸಂಪೂರ್ಣ ಮುಳುಗಡೆಯಾಗಿವೆ. ಸಾಲೇಬೀರನಹಳ್ಳಿ ಕೆರೆ ತುಂಬಿ ಹರಿಯುತ್ತಿರುವುದರಿಂದ ಹಸರಗುಂಡಗಿ ಸೇತುವೆ ಮುಳುಗಡೆಯಾಗಿದೆ.

ಪಾತ್ರದ ಗ್ರಾಮಗಳ ಜನರು ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹ ಸಮಸ್ಯೆ ಎದುರಿಸುತ್ತಿದ್ದು ಸಮಸ್ಯೆ ಪರಿಹಾರ ಮರಿಚೀಕೆಯಾಗಿದೆ. ಜನರ ಕೂಗು ಅರಣ್ಯರೋದನವಾಗಿದೆ.

19 ಕೆರೆಗಳು ಭರ್ತಿ: ತಾಲ್ಲೂಕಿನಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಎಲ್ಲಾ 19 ಕೆರೆಗಳು ಭರ್ತಿಯಾಗಿದ್ದು, ಪಂಗರಗಾ ಕೆರೆ ಮಾತ್ರ ಭರ್ತಿಯಾಗಬೇಕಿದೆ. ನಾಗಾಈದಲಾಯಿ ಕೆರೆ 2 ವರ್ಷಗಳ ಹಿಂದೆ ಒಡೆದಿದ್ದು ನೀರು ಸಂಗ್ರಹವಾಗುತ್ತಿಲ್ಲ ಎಂದು ಸಣ್ಣ ನೀರಾವರಿ ಉಪ ವಿಭಾಗದ ಎಇಇ ಶಿವಾಜಿ ಜಾಧವ ತಿಳಿಸಿದರು.

ತುಮಕುಂಟಾ, ಚಿಕ್ಕಲಿಂಗದಳ್ಳಿ, ಸಾಲೇಬೀರನಹಳ್ಳಿ, ಕೋಡ್ಲಿ ಅಲ್ಲಾಪುರ, ಹಸರಗುಂಡಗಿ, ಐನಾಪುರ ಹಳೆಹೊಸ, ಚಂದನಕೇರಾ, ದೋಟಿಕೊಳ, ಹುಲ್ಸಗೂಡ, ಹೂಡದಳ್ಳಿ, ಯಲಕಪಳ್ಳಿ, ಜಿಲವರ್ಷಾ, ಕೊಳ್ಳೂರು, ಖಾನಾಪುರ, ಲಿಂಗಾನಗರ, ಅಂತಾವರಂ, ಮುಕರಂಬ, ಧರ್ಮಾಸಾಗರ ಕೆರೆಗಳು ಭರ್ತಿಯಾಗಿವೆ.

ಶಾಸಕರ ಪ್ರವಾಸ ಇಂದು: ಚಿಂಚೋಳಿಯಲ್ಲಿ ಮಳೆಯಿಂದ ಹೆಸರು ಸೇರಿದಂತೆ ಮುಂಗಾರು ಬೆಳೆಗಳು ಹಾಳಾಗಿರುವ ಪ್ರದೇಶಕ್ಕೆ ಶಾಸಕ ಡಾ.ಅವಿನಾಶ ಜಾಧವ ಶುಕ್ರವಾರ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಸಂತೋಷ ಗಡಂತಿ, ಚಿಮ್ಮಾಈದಲಾಯಿ ಗ್ರಾ.ಪಂ. ಸದಸ್ಯ ಶ್ರೀನಿವಾಸ ಚಿಂಚೋಳಿಕರ್ ತಿಳಿಸಿದ್ದಾರೆ.

ಹಸರಗುಂಡಗಿ ಮಾರ್ಗದ ಸೇತುವೆ ಮುಳುಗಡೆಯಾಗಿರುವುದು
ಬಸವರೆಡ್ಡಿ ಡೋಣಿ ತಾಜಲಾಪುರ ಕೃಷಿಕರು

ನಾಗರಾಳ ಜಲಾಶಯದಿಂದ 2500 ಕ್ಯೂಸೆಕ್ ನೀರು ಬಿಡುಗಡೆ ನದಿ ದಂಡೆಯ ಹೊಲಗಳಲ್ಲಿನ ಬೆಳೆಗಳು ಜಲಾವ್ರತ ಚಿಂಚೋಳಿ 19 ಸಣ್ಣ ನೀರಾವರಿ ಕೆರೆಗಳು ಭರ್ತಿ

ತಾಜಲಾಪುರ ಸೇತುವೆ ಮುಳುಗಿದರೆ ಹಸರಗುಂಡಗಿ ಮಾರ್ಗದ ಸೇತುವೆಯೂ ಸಾಲೇಬೀರನಹಳ್ಳಿ ಕೆರೆಯಿಂದ ಮುಳುಗಿ ಸಂಪರ್ಕ ಕಡಿತವಾಗಿದೆ. ತಾಜಲಾಪುರ ದ್ವೀಪದಂತಾಗಿದ್ದು ಸೇತುವೆ ಎತ್ತರ ಹೆಚ್ಚಿಸಲು ಸರ್ಕಾರ ಮುಂದಾಗಬೇಕು
ಬಸವರೆಡ್ಡಿ ಡೋಣಿ ತಾಜಲಾಪುರ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.