ADVERTISEMENT

ಚಿಂಚೋಳಿ: 20 ಮನೆಗಳಿಗೆ ನುಗ್ಗಿದ ಮಳೆ ನೀರು

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 5:42 IST
Last Updated 3 ಜುಲೈ 2020, 5:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಂಚೋಳಿ( ಕಲಬುರಗಿ ಜಿಲ್ಲೆ): ಪುರಸಭೆ ವ್ಯಾಪ್ತಿಯ ಚಂದಾಪುರದ ಪಟೇಲ ಕಾಲೋನಿ ಹಾಗೂ ಆಶ್ರಯ ಕಾಲೋನಿಯಲ್ಲಿ 20 ಮನೆಗಳಲ್ಲಿ ಮಳೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ತಕ್ಷಣ ಪುರಸಭೆ ಸಿಬ್ಬಂದಿ‌ ಮನೆಗಳಿಗೆ ಭೇಟಿ‌ ನೀಡಿದ್ದು, ನೀರು ತೆರವಿಗೆ ಶ್ರಮಿಸಿದ್ದಾರೆ. ಮುಖ್ಯಾಧಿಕಾರಿ ಅಭಯಕುಮಾರ ಅವರು ವಿವಿಧ ಪ್ರದೇಶಗಳಿಗೆ ಭೇಟಿ ‌ನೀಡಿ ‌ಮಳೆ ಹಾನಿ‌ ಪರಿಶೀಲಿಸಿದರು.

ಚಂದಾಪುರದಲ್ಲಿರುವ ಚಂದ್ರಂಪಳ್ಳಿ‌ ನೀರಾವರಿ ಯೋಜನೆಯ ಕಚೇರಿ‌ ಜಲಾವೃತವಾಗಿದೆ. ಬಸವ ನಗರದಲ್ಲಿ ಬೊಂದು ಮನೆಗೆ ನೀರು ನುಗ್ಗಿದ್ದು ಹಾರಕೂಡ ಶಾಲೆ ಮತ್ತು ಪಂಚಾಯತ ರಾಜ್ ಕಚೇರಿ ಸುತ್ತಲೂ ನೀರಿನ ಹೊಂಡಗಳು ನಿರ್ಮಾಣವಾಗಿವೆ.

ADVERTISEMENT

ಮಳೆಯಿಂದ ಕಲ್ಲೂರು ರೋಡ್ ಸೋಮಲಿಂಗದಳ್ಳಿ ಮಧ್ಯೆ ರಸ್ತೆಯ ಚಿಕ್ಕ ಸಿಡಿಯ ಭುಜಕ್ಕೆ ಹಾನಿಯಾಗಿದೆ. ಮುರ್ಕಿ ಹಂದರಕಿ‌ ರಾಜ್ಯ ಹೆದ್ದಾರಿ 122ರಲ್ಲಿ ಬರುವ ಗಣಾಪುರ ಬಳಿಯ ಸೇತುವೆ ಮಳೆ ನೀರಿನ ಪ್ರವಾಹದಲ್ಲಿ ಮುಳುಗಿದ್ದರಿಂದ ಹೆದ್ದಾರಿ ಸಂಚಾರ ಬಂದ್ ಆಗಿದೆ.

ಮಳೆ ನೀರು ರೈತರ ಹೊಲಗಳಿಗೆ ನುಗ್ಗಿ ನೂರಾರು ಎಕರೆ ಬೆಳೆ ನಾಶವಾಗಿದೆ. ಅನೇಕ ಕಡೆಗಳಲ್ಲಿ ಬದುಗಳು ಒಡೆದುಹೋಗಿವೆ. ತಗ್ಗು ಪ್ರದೇಶದ ಹೊಲಗಳು ಜಲಾವೃತ್ತವಾಗಿವೆ. ಮಳೆ ನೀರಿನಿಂದ ಮುಲ್ಲಾಮಾರಿ‌ನದಿಯಲ್ಲಿ ಪ್ರವಾಹ ಉಂಟಾಗಿದೆ.

ಚತ್ರಸಾಲ‌ ಬಳಿ ರಾಜ್ಯ ಹೆದ್ದಾರಿ 122ರಲ್ಲಿ ಸೇತುವೆ ರಕ್ಷಣಾ ಗೋಡೆ ಹಾಗೂ ರಸ್ತೆಯ ಭುಜ ಹಾಳಾಗಿದೆ.

ಚಂದಾಪುರ ಆಶ್ರಯ ಕಾಲೋನಿ ನಿವಾಸಿಗಳಾದ ರಾಜಕುಮಾರ ಸಾಯಪ್ಪ, ವೆಂಕಟೇಶ್, ಶ್ರೀನಿವಾಸ, ಸಾಯಮ್ಮ ದಾಸರ, ಮಹಿಬೂಬಖಾನ್, ಮಹಿಬೂಬಿ ಇಬ್ರಾಹಿಂ, ಅಜಮೋದ್ದೀನ ಬಾಬುಮಿಯ್ಯ, ಮನೆಯಲ್ಲಿ ನೀರು ತುಂಬಿ ದಿನಸಿ ಪದಾರ್ಥಗಳು ಹಾಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.