ಚಿಂಚೋಳಿ: ಪ್ರಸಕ್ತ ವರ್ಷ ಈರುಳ್ಳಿ ಬೀಜ ಬೇಸಾಯಗಾರರು ಬಂಪರ್ ಬೆಲೆಯಿಂದ ಸಂತಸಗೊಂಡಿದ್ದಾರೆ. ಸಧ್ಯ ಒಂದು ಚೀಲ(ಅಂದಾಜು 70 ಕೆ.ಜಿ ತೂಕ) ಗುಲಾಬಿ ಈರುಳ್ಳಿ ಬೀಜಕ್ಕೆ ₹50 ಸಾವಿರದಿಂದ ₹55 ಸಾವಿರ, ಬಿಳಿ ಈರುಳ್ಳಿ ಬೀಜದ ಚೀಲವೊಂದಕ್ಕೆ ₹71 ಸಾವಿರದಿಂದ ₹75 ಸಾವಿರ ದರದಲ್ಲಿ ಖರೀದಿದಾರರು ರೈತರ ಮನೆ ಬಾಗಿಲಿಗೆ ಬಂದು ಬೀಜ ಖರೀದಿಸುತ್ತಿದ್ದಾರೆ ಎಂದು ರೈತರು ಹೇಳಿದ್ದಾರೆ.
ಈರುಳ್ಳಿ ಬೀಜಗಳನ್ನು ರೈತರ ಚೀಲದ ಲೆಕ್ಕದಲ್ಲಿಯೇ ಮಾರಾಟ ಮಾಡುವುದು ರೂಢಿ. ಬಿಳಿಯ ಗಡ್ಡೆಯ 70 ಕೆ.ಜಿಯ ಬೀಜದ ಚೀಲಕ್ಕೆ ₹70ಸಾವಿರಕ್ಕೂ ಅಧಿಕ ದರವಿದ್ದು 1 ಕ್ವಿಂಟಲ್‌ಗೆ ₹1 ಲಕ್ಷ, ಗುಲಾಬಿ ಬೀಜಕ್ಕೆ ₹75ಸಾವಿರ ದರ ಲಭಿಸಿದಂತಾಗಿದೆ.
ನವೆಂಬರ್‌ನಲ್ಲಿ ಬಿತ್ತನೆ ನಡೆಸಿದವರು ಎಕರೆಗೆ 2ರಿಂದ 3 ಚೀಲ ಈಳುವರಿ ಪಡೆದರೆ, ಡಿಸೆಂಬರ್ ನಡೆಸಿದವರು ಸರಾಸರಿ ಎಕರೆಗೆ 4 ರಿಂದ 5 ಚೀಲ ಈಳುವರಿ ಪಡೆದಿದ್ದಾರೆ.
‘ನಾನು ಡಿಸೆಂಬರ್ ಎರಡನೇ ವಾರದಲ್ಲಿ 46 ಕ್ವಿಂಟಲ್ ಗುಣಮಟ್ಟದ ಬಿಳಿಗಡ್ಡೆ ತಂದು ಊರಿದ್ದೇನೆ. ತೊಗರಿ ಬೇಸಾಯ ನಡೆಸಿದ ಹೊಲದಲ್ಲಿ 16 ಕ್ವಿಂಟಲ್ ಗುಲಾಬಿ ಗಡ್ಡೆ ಊರಿದ್ದೇನೆ. ಹೀಗೆ 4 ಎಕರೆಯಲ್ಲಿ ಈರುಳ್ಳಿ ಬೀಜ ಬೇಸಾಯ ನಡೆಸಿದ್ದು, ನಾಲ್ಕುವರೆ ತಿಂಗಳಲ್ಲಿ ₹3ಲಕ್ಷ ಖರ್ಚು ಮಾಡಿದ್ದೇನೆ. ಈಗ ಎಕರೆಗೆ 6–7 ಚೀಲ ಇಳುವರಿ ಬಂದಿದ್ದು 28 ಚೀಲ ಬೀಜ ಬೆಳೆದಿದ್ದೇನೆ’ ಎಂದು ನಾಗಾಈದಲಾಯಿ ಗ್ರಾಮದ ರೈತ ಶೇರಖಾನ ಪಠಾಣ ಪ್ರಜಾವಾಣಿಗೆ ತಿಳಿಸಿದ್ದಾರೆ.
ಇದರಲ್ಲಿ 22 ಚೀಲ ಬಿಳ್ಳಿ ಗಡ್ಡೆಯ ಬೀಜವಾದರೆ 6 ಚೀಲ ಗುಲಾಬಿ ಗಡ್ಡೆಯ ಬೀಜವಿದ್ದು ಸಧ್ಯ ಬಿಳಿ ಗಡ್ಡೆಯ ಬೀಜ ರೂ 75ಸಾವಿರ ದರದಲ್ಲಿ 4 ಚೀಲ ಮಾತ್ರ ಮಾರಾಟ ಮಾಡಿದ್ದೇನೆ ಎಂದರು.
ಈರುಳ್ಳಿ ಬೀಜ ಔಷಧ ತಯಾರಿಗೆ ಬಳಸಲಾಗುತ್ತದೆ ಎಂಬ ಮಾಹಿತಿಯಿದೆ ಆದರೆ ಯಾವ ಔಷಧ ತಯಾರಿಗೆ ಬಳಸುತ್ತಾರೆ ಮತ್ತು ಇದರ ಮಾರುಕಟ್ಟೆ ಎಲ್ಲಿದೆ ಎಂಬುದು ತಾಲ್ಲೂಕಿನ ಬೀಜ ಬೆಳೆಗಾರರಿಗೆ ಗೊತ್ತಿಲ್ಲ. ಹೀಗಾಗಿ ದಲ್ಲಾಳಿಗಳನ್ನೇ ಇಲ್ಲಿನ ರೈತರು ಅವಲಂಬಿಸಿದ್ದಾರೆ ಎನ್ನುತ್ತಾರೆ ನಾಗಾಈದಲಾಯಿ ಗ್ರಾಮದ ರೈತ ಉದಯಕುಮಾರ ಪಾಟೀಲ.
ತಾಲ್ಲೂಕಿನಲ್ಲಿ ಡಿಸೆಂಬರ್ ತಿಂಗಳಲ್ಲಿ ಗಡ್ಡೆ ಊರಿ ಬೀಜ ಬೆಳೆದ ರೈತರು ಉತ್ತಮ ಬೆಲೆ ಜತೆಗೆ ಉತ್ತಮ ಇಳುವರಿಯೂ ಪಡೆದರೆ, ನವೆಂಬರ್ ತಿಂಗಳಲ್ಲಿ ಗಡ್ಡೆ ಊರಿ ಬೀಜ ಬೆಳೆದವರ ಹೊಲದಲ್ಲಿ ಇಳುವರಿ ಬಂದಿಲ್ಲ.
ತಾಲ್ಲೂಕಿನ ಐನೋಳ್ಳಿ, ದೇಗಲಮಡಿ, ಅಣವಾರ, ಚಂದ್ರಂಪಳ್ಳಿ, ಕೊಳ್ಳೂರು, ನಾಗಾಈದಲಾಯಿ, ಹಸರಗುಂಡಗಿ, ಮರಪಳ್ಳಿ, ದಸ್ತಾಪುರ, ರಟಕಲ್, ಮುಕರಂಬಾ, ಗೊಣಗಿ, ಮೋತಕಪಳ್ಳಿ, ಯಂಪಳ್ಳಿ ಮೊದಲಾದ ಗ್ರಾಮಗಳಲ್ಲಿ ಸುಮಾರು 600 ಎಕರೆ (240 ಹೆಕ್ಟೇರ್) ಪ್ರದೇಶದಲ್ಲಿ ರೈತರು ಈರುಳ್ಳಿ ಬೀಜ ಬೇಸಾಯ ನಡೆಸಿದ್ದಾರೆ.
ಇಲ್ಲಿ ಈರುಳ್ಳಿಯಲ್ಲಿ ಗುಲಾಬಿ ಮತ್ತು ಬಿಳಿ ಬಣ್ಣದ ಗಡ್ಡೆಗಳ ಬೇಸಾಯ ನಡೆಸಲಾಗುತ್ತಿದೆ.
ಉತ್ತಮ ಇಳುವರಿಗೆ ಪೂರಕ ವಾತಾವರಣ ಹಾಗೂ ಜಮೀನಿನ ಫಲವತ್ತತೆ ಜತೆಗೆ ಸಮರ್ಪಕ ನಿರ್ವಹಣೆ ಅಗತ್ಯವಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೆಶಕ ರಾಜಕುಮಾರ ಗೋವಿನ್.
ದಿನ ಕಳೆದಂತೆ ಸೂಕ್ಷ್ಮವಾದ ಈರುಳ್ಳಿ ಬೀಜದ ಮೊಳಕೆ ಪ್ರಮಾಣ ಕ್ಷೀಣಿಸುತ್ತದೆ. ಸಂರಕ್ಷಿಸಲು ರೈತರಿಗೆ ತೋಟಗಾರಿಕಾ ಇಲಾಖೆ ತರಬೇತಿ ನೀಡಿದರೆ ಹೆಚ್ಚು ಆದಾಯ ಪಡೆಯಲು ಅನುಕೂಲವಾಗಲಿದೆಗುರುಪಾಟೀಲ ಮೋತಕಪಳ್ಳಿ ರೈತ
ನಾನು ಎರಡು ಎಕರೆಯಲ್ಲಿ ಗುಲಾಬಿ ಈರುಳ್ಳಿ ಗಡ್ಡೆ ಊರಿ ಬೀಜ ಬೆಳೆದಿದ್ದೇನೆ. ಎಕರೆಗೆ 4 ಚೀಲದಂತೆ 8 ಚೀಲ ಉಳುವರಿ ಬಂದಿದೆ. ₹50ಸಾವಿರಕ್ಕೆ ಒಂದು ಚೀಲ ಬೀಜ ವ್ಯಾಪಾರಿಗಳು ಕೇಳಿದ್ದಾರೆ ಮಾರಾಟ ಮಾಡಿಲ್ಲಸಂಗಾರೆಡ್ಡಿ ಅನಂತರೆಡ್ಡಿ ರೈತ ನಾಗಾ ಈದಲಾಯಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.