ADVERTISEMENT

ಚಿಂಚೋಳಿ| ತೊಗರಿ ಇಳುವರಿ ಕುಸಿತ: ಆತಂಕದಲ್ಲಿ ರೈತರು

ಜಗನ್ನಾಥ ಡಿ.ಶೇರಿಕಾರ
Published 11 ಜನವರಿ 2026, 5:28 IST
Last Updated 11 ಜನವರಿ 2026, 5:28 IST
ಮಲ್ಲಿಕಾರ್ಜುನ ಭೂಶೆಟ್ಟಿ
ಮಲ್ಲಿಕಾರ್ಜುನ ಭೂಶೆಟ್ಟಿ   

ಚಿಂಚೋಳಿ: ತಾಲ್ಲೂಕಿನಲ್ಲಿ ತೊಗರಿ ಬೆಳೆ ಇಳುವರಿ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಸುಮಾರು 55ಸಾವಿರಕ್ಕೂ ಅಧಿಕ ಹೆಕ್ಟೇರನಲ್ಲಿ ಬೆಳೆದ ತೊಗರಿ ಬೆಳೆಗೆ ಅತಿವೃಷ್ಟಿಯಿಂದ ಆಪತ್ತು ಎದುರಾಗಿದೆ. ಚಿಂಚೋಳಿ, ಸುಲೇಪೇಟ, ಐನಾಪುರ, ಕುಂಚಾವರಂ ಭಾಗದಲ್ಲಿ ಬೆಳೆದ ತೊಗರಿ ಬೆಳೆಯ ಇಳುವರಿ ಎಕರೆ ಎರಡು ಕ್ವಿಂಟಲ್‌ ಕೆಲವು ಕಡೆ ಶೂನ್ಯ ಇಳುವರಿ ಬಂದಿದೆ.

ಮುಂಗಾರು ಬಿತ್ತನೆಯ ಸಮಯದಲ್ಲಿ ಜೂನ್ ತಿಂಗಳಲ್ಲಿ‌ ತೇವಾಂಶದ ಕೊರತೆ ಎದುರಾಗಿತ್ತು. ಬಿತ್ತನೆ ಅಸ್ತವ್ಯಸ್ತವಾಯಿತು. ಕೆಲವು ಕಡೆ ಮುಂಗಾರು ಬೆಳೆಗಳು ಹರಗಿ ಪುನ್ ಬಿತ್ತನೆ ನಡೆಸಿದರು. ನಿರಂತರ ಸುರಿದ ಜೋರು ಮಳೆಯಿಂದ ಹಲವು ಕಡೆ ತೊಗರಿ ಬೆಳೆ ಬೇರು ಕೊಳೆತು ಒಣಗಿತ್ತು. ತಗ್ಗು ಪ್ರದೇಶದ ಹೊಲಗಳಲ್ಲಿ ಮೊಣಕಾಲೆತ್ತರ ಬೆಳೆದ ಬೆಳೆ ಮಳೆಯಿಂದ ಒಣಗಿ ನಿಂತಿತ್ತು.

ರೈತರು ಬೆಳೆ ಉಳಿಸಿಕೊಳ್ಳಲು ಯೂರಿಯಾ ಸಿಂಪಡಣೆ, ಬಸಿ ಕಾಲುವೆ ನಿರ್ಮಾಣ ಸೇರಿದಂತೆ ಹಲವು ಚಟುವಟಿಕೆ ಕೈಗೊಂಡು ಬೆಳೆಯನ್ನು ಉಳಿಸಿಕೊಳ್ಳಲಾಯಿತು. ಕಳೆದ ವರ್ಷ ಬೆಳೆವಿಮೆ ನೋಂದಾಯಿಸಿದ ರೈತರಿಗೆ ಬಂಪರ ವಿಮಾ ಪರಿಹಾರ ಬಂದಿದ್ದರಿಂದ ದಾಖಲೆಯ ಪ್ರಮಾಣದಲ್ಲಿ ಅಂದರೆ 27950 ರೈತರು ವಿಮೆ ನೋಂದಾಯಿಸಿದ್ದರೆ, 19150 ರೈತರು ಬೆಳೆಗೆ ಮಳೆಯಿಂದ ಉಂಟಾದ ಹಾನಿಯ ಕುರಿತು ದೂರು ದಾಖಲಿಸಿದ್ದರು. ಬೆಳೆ ಹಾನಿಗೆ ಸಂಬಂಧಿಸಿದಂತೆ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಅಡಿಯಲ್ಲಿ ಸರ್ಕಾರ ಹೆಕ್ಟೇರ್ ₹ 8500 ಪರಿಹಾರ ನೀಡಿದೆ ಆದರೆ ಸ್ಥಳೀಯ ಆಪತ್ತಿನ ಅಡಿಯಲ್ಲಿ ಮುಂಗಾರು ಹಂಗಾಮು ಮುಗಿದರು ವಿಮೆಯ ದೂರುದಾರರಿಗೆ ಸ್ಥಳೀಯ ಆಪತ್ತಿನ ಪರಿಹಾರ ಈವರೆಗೂ ಬಂದಿಲ್ಲ.

ADVERTISEMENT

‘ಕಳೆದ ಒಂದು ತಿಂಗಳಿನಿಂದ ತೊಗರಿ ರಾಶಿ ಶುರುವಾಗಿದ್ದು, ಇಳುವರಿ ಕುಸಿದಿದೆ. ಎಕರೆಗೆ ಎರಡರಿಂದ ಮೂರು ಕ್ವಿಂಟಲ್‌ ಇಳುವರಿ ಬಂದರೆ ಕೆಲವು ಕಡೆ ಬಿತ್ತಿದ ಬೀಜವೂ ವಾಪಸ್ಸಾಗಿಲ್ಲ. ನೋಡಿದರೆ ಹೊಲದ ತುಂಬಾ ಬೆಳೆ ಲಕ್ಕಿ ಒಡೆಯುತ್ತ ಸಾಗಿದೆ. ಆದರೆ ಫಸಲು ಮಾತ್ರ ಮರಿಚೀಕೆಯಾಗಿದೆ’ ಎಂದು ಕಲ್ಲೂರು ಗ್ರಾಮದ ರೈತ ಮಲ್ಲಿಕಾರ್ಜುನ ಇದ್ಲಾಯಿ ತಿಳಿಸಿದರು.

ನೀರಾವರಿ ತೊಗರಿ ಬೇಸಾಯ ಮಾಡಿದ ರೈತರು ಹೊಲದಲ್ಲಿ ಬೆಳೆ ಸ್ವಲ್ಪ ಕಾಯಿ ಕಚ್ಚಿದ್ದು ಇನ್ನೂ ರಾಶಿ ಮಾಡಬೇಕಿದೆ. ಆದರೆ ಒಣ ಬೇಸಾಯದ ತೊಗರಿ ಬೆಳೆ ಇಳುವರಿ ತಗ್ಗಿದೆ. ಚಿಂಚೋಳಿ, ಸುಲೇಪೇಟ, ನಿಡಗುಂದಾ, ಕಲ್ಲೂರು, ಚಿಮ್ಮಾಈದಲಾಯಿ, ಹಸರಗುಂಡಗಿ, ಸಲಗರ ಬಸಂತಪುರ, ಚಿಮ್ಮನಚೋಡ, ಚಂದನಕೇರಾ ಮೊದಲಾದ ಕಡೆ ಗೊಡ್ಡು ರೋಗ ತೊಗರಿ ಬೆಳೆಗಾರರ ಕನಸು‌ ಭಗ್ನಗೊಳಿಸಿದೆ.

ಸುಬ್ಬಣ್ಣ ಜಮಖಂಡಿ
ಚಿಂಚೋಳಿ ಕಲಬುರಗಿ ರಸ್ತೆಯ ಅಣವಾರದ ಕ್ರಾಸ ಬಳಿಯ ಹೊಲದಲ್ಲಿ ತೊಗರಿ ಬೆಳೆಯ ರಾಶಿಯಲ್ಲಿ ತೊಡಗಿರುವುದು
ಚಿಂಚೋಳಿ ತಾಲ್ಲೂಕಿನಲ್ಲಿ ಗೊಡ್ಡು ಹೆಚ್ಚಾಗಿ ಕಾಯಿ ಕಚ್ಚದೇ ಇರುವುದರಿಂದ ತೊಗರಿ ರಾಶಿ ಮಾಡಲು ಆಗದೇ ರೈತರು ಬೆಳೆ ಹಾಗೆಯೇ ಬಿಟ್ಟಿದ್ದಾರೆ. ಇದರಿಂದ ಬಿತ್ತಿದ ಬೀಜವೂ ಹಿಂತಿರುಗದ ಸ್ಥಿತಿಯಿದೆ
ಮಲ್ಲಿಕಾರ್ಜುನ ಭೂಶೆಟ್ಟಿ ಅಧ್ಯಕ್ಷರು ಕೃಷಿಕ ಸಮಾಜ ಚಿಂಚೋಳಿ
ತಾಲ್ಲೂಕಿನಲ್ಲಿ ತೊಗರಿ ಇಳುವರಿ ಪತ್ತೆಗೆ ಬೆಳೆ ಕಟಾವು ಪ್ರಯೋಗ ಪರಿಶೀಲನೆ ಪ್ರಗತಿಯಲ್ಲಿದ್ದು ಶೇ.50 ಪೂರ್ಣಗೊಂಡಿದೆ. ನೀರಾವರಿ ತೊಗರಿ ಇನ್ನೂ ಕೊಯ್ಲಿಗೆ ಬಂದಿಲ್ಲ. ಕೆಲವು ಕಡೆ ಅಧೀನ ಸಿಬ್ಬಂದಿ ಇಳುವರಿ ಪತ್ತೆ ಪರೀಕ್ಷೆ ಮಾಡುತ್ತಿದ್ದಾರೆ
ಸುಬ್ಬಣ್ಣ ಜಮಖಂಡಿ ತಹಶೀಲ್ದಾರ್‌ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.