ಕಲಬುರಗಿ: ಸಿನಿಮಾ ಕೇವಲ ಮನರಂಜನೆಯ ಸಾಧನವಲ್ಲ. ಏಕಾಂತ ಮತ್ತು ಲೋಕಾಂತದ ವಿಷಯಗಳನ್ನು ಅಂತರ್ಗತಗೊಳಿಸುವುದೇ ಸಿನಿಮಾದ ಉದ್ದೇಶ ಎಂದು ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಇಲ್ಲಿಯ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರಣಿ ಉಪನ್ಯಾಸ ಮಾಲೆಯಲ್ಲಿ ಅವರು ‘ಸಾಹಿತ್ಯ ಮತ್ತು ಸಿನಿಮಾ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
‘ಶ್ರಮ ಮತ್ತ ಸೃಜನಶೀಲತೆ ಒಕ್ಕೂಟಗೊಳಿಸುವುದು ಸಿನಿಮಾ. ಇಲ್ಲಿ ಕಾರ್ಮಿಕರು, ನಿರ್ದೇಶಕರು, ನಟರು, ಕಲಾವಿದರು, ಸಂಗೀತ ಸಂಯೋಜಕರು, ಕವಿಗಳು, ಸಂಕಲನಕಾರರು ಹೀಗೆ ಅನೇಕರು ಸೇರಿ ಸಿನಿಮಾ ತಯಾರಿಸುತ್ತಾರೆ. ಅವರೆಲ್ಲರ ಮಧ್ಯೆ ಒಳ್ಳೆಯ ಬಾಂಧವ್ಯ ಇರುತ್ತದೆ. ಹೀಗಾಗಿ ಇದು ಪ್ರಜಾಸತ್ತಾತ್ಮಕ ಒಕ್ಕೂಟ ಕಲೆ’ ಎಂದು ಪ್ರತಿಪಾದಿಸಿದರು.
‘ಕನ್ನಡ ಸಾಹಿತ್ಯದಿಂದ ಸಿನಿಮಾ ಬೆಳೆದಿದೆ. ಸಾಹಿತ್ಯ ಹೊರತಾಗಿ ಸಿನಿಮಾ ಇಲ್ಲ. ಸಾಹಿತ್ಯದಿಂದಲೇ ಸಿನಿಮಾ. ಕಥೆ, ಕಾದಂಬರಿ, ನಾಟಕಗಳನ್ನು ಆಧರಿಸಿ ಸಿನಿಮಾಗಳು ಬಂದಿವೆ. ಕಲಾತ್ಮಕ ಸಿನಿಮಾ ಮತ್ತು ವ್ಯಾಪಾರಿ ಸಿನಿಮಾಗಳಿಗೆ ಬಹಳಷ್ಟು ವ್ಯತ್ಯಾಸಗಳಿವೆ’ ಎಂದರು.
‘ಭಕ್ತ ಧ್ರುವ’ ಕನ್ನಡದ ಮೊದಲ ಸಿನಿಮಾ ಆಗಬೇಕಿತ್ತು. ಬಿಡುಗಡೆ ತಡವಾಗಿದ್ದರಿಂದ ‘ಸತಿ ಸುಲೋಚನ’ ಕನ್ನಡದ ಮೊದಲ ಸಿನಿಮಾ ಎಂದು ಪ್ರಸಿದ್ಧಿ ಪಡೆಯಿತು ಎಂದು ತಿಳಿಸಿದರು.
ಕುಲಪತಿ ಪ್ರೊ. ಅಬ್ದುಲ್ ರಬ್ ಉಸ್ತಾದ್, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಮಾತನಾಡಿದರು.
ಇಂಗ್ಲಿಷ್ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ರಮೇಶ ರಾಠೋಡ, ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕರಾದ ಶ್ರೀಶೈಲ ನಾಗರಾಳ, ಸೂರ್ಯಕಾಂತ ಸುಜ್ಯಾತ್, ಯುವನಟ ಆಕಾಂಕ್ಷ ಬರಗೂರು ವೇದಿಕೆಯಲ್ಲಿದ್ದರು.
ಸಿದ್ರಾಮ ಹೊನ್ಕಲ್, ಬೋಡೆ ರಿಯಾಜ್ ಅಹ್ಮದ್, ವೀರಶೆಟ್ಟಿ ಗಾರಂಪಳ್ಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಂ.ಬಿ. ಕಟ್ಟಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.