ADVERTISEMENT

ಅಫಜಲಪುರ| ಮನೆಗಳಿಗೆ ನುಗ್ಗಿದ ಮಳೆ ನೀರು : ವಿದ್ಯುತ್ ಸ್ಥಗಿತ ಪರದಾಡಿದ ನಾಗರಿಕರು

​ಪ್ರಜಾವಾಣಿ ವಾರ್ತೆ
Published 26 ಮೇ 2025, 16:28 IST
Last Updated 26 ಮೇ 2025, 16:28 IST
ಅಫಜಲಪುರ ತಾಲ್ಲೂಕಿನ ಮಲ್ಲಾಬಾದ ಗ್ರಾಮದ ಹತ್ತಿರ ಸೋಮವಾರ ಸುರಿದ ಮಳೆಗೆ ಅಮರ್ಜಾ ನದಿ ತುಂಬಿ ಹರಿಯುತ್ತಿರುವುದು
ಅಫಜಲಪುರ ತಾಲ್ಲೂಕಿನ ಮಲ್ಲಾಬಾದ ಗ್ರಾಮದ ಹತ್ತಿರ ಸೋಮವಾರ ಸುರಿದ ಮಳೆಗೆ ಅಮರ್ಜಾ ನದಿ ತುಂಬಿ ಹರಿಯುತ್ತಿರುವುದು   

ಅಫಜಲಪುರ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸೋಮವಾರ ಸಂಜೆ ಸುಮಾರು 2 ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದೆ. ಇದರಿಂದ ಗ್ರಾಮಾಂತರ ಭಾಗದಲ್ಲಿ ಮಳೆ, ಗಾಳಿಗೆ ವಿದ್ಯುತ್ ಕಂಬ ಉರುಳಿ ಬಿದ್ದು ವಿದ್ಯುತ್ ಸ್ಥಗಿತವಾಗಿದೆ. ಇನ್ನೊಂದೆಡೆ ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ಮನೆಗಳಿಗೆ ಚರಂಡಿ ನೀರು ಹೊಕ್ಕು ನಿವಾಸಿಗಳು ಪರದಾಡುವಂತಾಯಿತು.‌

‘ಪಟ್ಟಣದಲ್ಲಿ ಪುರಸಭೆಯವರು ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿದ್ದರಿಂದ ಪ್ರತಿ ವರ್ಷ ಮಳೆ ಬಂದ ನಂತರ ನೀರು ಸರಳವಾಗಿ ಮುಂದೆ ಹರಿದು ಹೋಗದೆ ಚರಂಡಿಯಲ್ಲಿ ತುಂಬಿಕೊಂಡು ಚರಂಡಿ ನೀರು ಮನೆಗೆ ಬಂದು ನುಗ್ಗುತ್ತದೆ. ಪುರಸಭೆಯವರು ಮನೆಗಳಿಗೆ ನೀರು ನುಗ್ಗಿರುವ ವಾರ್ಡುಗಳಿಗೆ ಭೇಟಿ ನೀಡಿ ಮನೆಯ ಒಳಗೆ, ಮನೆಯ ಮುಂದೆ ನಿಂತಿರುವ ಮಳೆ ನೀರು ತೆರವುಗೊಳಿಸಬೇಕು. ಇಲ್ಲದಿದ್ದರೆ ಧರಣಿ ಮಾಡುತ್ತೇವೆ’ ಎಂದು ಬಿಜೆಪಿ ಮುಖಂಡ ರಬ್ಬಾನಿ ರೇವೂರ ತಿಳಿಸಿದರು.

‘ವಾರ್ಡ್ ನಂಬರ್ 20ರಲ್ಲಿ ಮನೆಗಳು ಸಂಪೂರ್ಣ ನೀರಿನಿಂದ ಆವೃತವಾಗಿವೆ. ಪಟ್ಟಣ ಸೇರಿದಂತೆ ಕರಜಗಿ ಮತ್ತು ಅಫಜಲಪುರ ಹೋಬಳಿಯಲ್ಲಿ ಹೆಚ್ಚಿನ ಮಳೆಯಾಗಿದೆ. ಹಳ್ಳಕೊಳ್ಳಗಳು ತುಂಬಿಕೊಂಡಿವೆ. ಅಮರ್ಜಾ ನದಿಗಳು ತುಂಬಿ ಹರಿಯುತ್ತಿವೆ. ಮಳೆಯಿಂದ ಭೀಮಾನದಿಗೆ ನೀರು ಬಂದಿದ್ದರಿಂದ ಹೆಚ್ಚು ನೀರನ್ನು ಭೀಮಾ ಬ್ಯಾರೇಜ್ ಮುಖಾಂತರ ಕೆಳಗಿನ ಭಾಗಕ್ಕೆ ಬಿಡಲಾಗುತ್ತಿದೆ’ ಎಂದು ಅಲ್ಲಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಸಂತೋಷ್ ಕುಮಾರ್ ಸಜ್ಜನ್ ತಿಳಿಸಿದರು. 

ADVERTISEMENT
ಅಫಜಲಪುರ ಪಟ್ಟಣದ ವಾರ್ಡ್ ನಂಬರ್ 20ರಲ್ಲಿ ಮನೆಗಳಿಗೆ ನೀರು ನುಗ್ಗಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.