ADVERTISEMENT

ಬಿಜೆಪಿ ‘ಪೋಸ್ಟರ್‌’ಗೆ ತಿರುಗೇಟು: ಖರ್ಗೆ ‍ಪರ ‘ಪೋಸ್ಟರ್‌’ ಅಂಟಿಸಿದ ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 7:37 IST
Last Updated 16 ಅಕ್ಟೋಬರ್ 2025, 7:37 IST
ಕಲಬುರಗಿಯ ಎಸ್‌ವಿಪಿ ವೃತ್ತದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಘಟಕದಿಂದ ಬುಧವಾರ ಪೋಸ್ಟರ್‌ ಅಭಿಯಾನ ನಡೆಸಲಾಯಿತು
ಕಲಬುರಗಿಯ ಎಸ್‌ವಿಪಿ ವೃತ್ತದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಘಟಕದಿಂದ ಬುಧವಾರ ಪೋಸ್ಟರ್‌ ಅಭಿಯಾನ ನಡೆಸಲಾಯಿತು   

ಕಲಬುರಗಿ: ಆರ್‌ಎಸ್‌ಎಸ್ ಕಾರ್ಯ ಚಟುವಟಿಕೆ ನಿಷೇಧ ಕೋರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದನ್ನು ಖಂಡಿಸಿ ಬಿಜೆಪಿ ನಾಯಕರು ನಡೆಸಿದ್ದ ‘ಪೋಸ್ಟರ್‌’ ಅಭಿಯಾನಕ್ಕೆ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕ ಬುಧವಾರ ‘ಪೋಸ್ಟರ್‌’ ಅಭಿಯಾನದ ಮೂಲಕವೇ ತಿರುಗೇಟು ನೀಡಿದೆ.

ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸಂವಿಧಾನ ಪೀಠಿಕೆ ಹಾಗೂ ಪೋಸ್ಟರ್‌ಗಳೊಂದಿಗೆ ಜಮಾಯಿಸಿದ ಮಹಿಳಾ ಕಾಂಗ್ರೆಸ್‌ ಜಿಲ್ಲಾ ಮುಖಂಡರು, ಕಾರ್ಯಕರ್ತರು ಬಸ್‌, ಆಟೊ, ಗೋಡೆ, ಫಲಕಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸಿದರು.

ಆರ್‌ಎಸ್‌ಎಸ್‌ಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಭವನ, ಜಿಲ್ಲಾಧಿಕಾರಿ ಕಚೇರಿ ಹಾಗೂ ಜಗತ್ ವೃತ್ತದ ಅಲ್ಲಲ್ಲಿ ಪೋಸ್ಟರ್‌ ಅಂಟಿಸಲಾಯಿತು.

ADVERTISEMENT

‘ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವವರು ದೇಶಪ್ರೇಮಿಗಳು’, ‘ಯಾರು ಸಂವಿಧಾನವನ್ನು ಪ್ರೀತಿಸುತ್ತಾರೋ, ಅವರು ದೇಶವನ್ನೂ ಪ್ರೀತಿಸುತ್ತಾರೆ’, ‘ಯಾರು ದೇಶವನ್ನು ಪ್ರೀತಿಸುತ್ತಾರೋ ಅವರು ಆರ್‌ಎಸ್‌ಎಸ್‌ ಅನ್ನು ಧಿಕ್ಕರಿಸುತ್ತಾರೆ’ ಎಂದು ಪೋಸ್ಟರ್‌ಗಳಲ್ಲಿ ಬರೆಯಲಾಗಿದ್ದು, ಸಂವಿಧಾನ ಪೀಠಿಕೆ, ಬುದ್ಧ, ಬಸವ, ಅಂಬೇಡ್ಕರ್‌ ಜೊತೆಗೆ ಪ್ರಿಯಾಂಕ್‌ ಖರ್ಗೆ ಚಿತ್ರವಿದೆ.

ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ರೇಣುಕಾ ಸಿಂಗೆ ಮಾತನಾಡಿ, ‘ಸಚಿವ ಪ್ರಿಯಾಂಕ್‌ ಅವರು ಆರ್‌ಎಸ್‌ಎಸ್‌ ಕುರಿತು ರಾಜ್ಯದ ಜನರ ಕೊರಳ ಧ್ವನಿಯಾಗಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಅವರೇನೂ ಆರ್‌ಎಸ್‌ಎಸ್ ನಿಷೇಧಿಸಿ ಎಂದಿಲ್ಲ’ ಎಂದರು.

‘ಸಚಿವ ಪ್ರಿಯಾಂಕ್‌ ಅವರು ಕೇವಲ ಸರ್ಕಾರಿ, ಅನುದಾನಿತ ಶಾಲಾ–ಕಾಲೇಜುಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಯಂತ್ರಿಸಲು ಕೋರಿದ್ದಾರೆ. ಅವರನ್ನು ಬೆಂಬಲಿಸಿ ನಾವೂ ಆರ್‌ಎಸ್‌ಎಸ್‌ ನಿಷೇಧಿಸುವಂತೆ ಆಗ್ರಹಿಸಿ ಪ್ರಧಾನಿ ಹಾಗೂ ಕೇಂದ್ರ ಗೃಹಸಚಿವರಿಗೆ ಪತ್ರ ಬರೆಯುತ್ತೇವೆ. ಅವರಿಗೆ ಕಿಂಚಿತ್ತಾದರೂ ಸಾಂವಿಧಾನಿಕ ಪ್ರಜ್ಞೆ ಇದ್ದರೆ, ಮೊದಲು ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರಬೇಕು. ದೇಶದ್ರೋಹಿ ಚಟುವಟಿಕೆಗಳನ್ನು ಇಟ್ಟುಕೊಂಡು ಆಟವಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಮಾತನಾಡಿ, ‘ಸಚಿವ ಪ್ರಿಯಾಂಕ್‌ ಖರ್ಗೆ ಅವರು ಆರ್‌ಎಸ್‌ಎಸ್‌ ಕುರಿತು ಪತ್ರ ಬರೆದಿರುವುದನ್ನು ಸಹಿಸದೇ ಬಿಜೆಪಿ ಪೋಸ್ಟರ್‌ ಅಂಟಿಸಿದೆ. ಅದಕ್ಕೆ ಪ್ರತಿಯಾಗಿ ನಾವೂ ಸಂವಿಧಾನ ಸಂರಕ್ಷಣೆ ಕುರಿತು ಪೋಸ್ಟರ್‌ ಅಂಟಿಸಿ ಸಚಿವ ಪ್ರಿಯಾಂಕ್‌ ಅವರ ಬೆಂಬಲಕ್ಕೆ ನಿಂತಿದ್ದೇವೆ’ ಎಂದರು.

ಮಹಿಳಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆ ವಾಣಿಶ್ರೀ ಸಗರಕರ, ಮುಖಂಡರಾದ ಬಸಮ್ಮ, ಸಂಗೀತಾ, ಫಾತಿಮಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಸಚಿವ ಪ್ರಿಯಾಂಕ್‌ ಪತ್ರ ಖಂಡಿಸಿ ಬಿಜೆಪಿಯು ಮುಖಂಡರು ಆರ್‌ಎಸ್‌ಎಸ್‌ ಬೆಂಬಲಿಸಿ ‘ಯಾರು ಭಾರತವನ್ನು ಪ್ರೀತಿಸುತ್ತಾರೋ ಅವರು ಆರ್‌ಎಸ್‌ಎಸ್‌ ಅನ್ನೂ ಪ್ರೀತಿಸುತ್ತಾರೆ’ ಎಂಬ ಬರಹವುಳ್ಳ ಪೋಸ್ಟರ್‌ ಅಂಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.