ಕಲಬುರಗಿ: ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಆವರಣದಲ್ಲಿ ಬೃಹತ್ ಸಭಾಂಗಣ ನಿರ್ಮಾಣಕ್ಕಾಗಿ ವಿವಿಧ ಜಾತಿಯ ಮರಗಳನ್ನು ಕತ್ತರಿಸಲಾಗುತ್ತಿದೆ. ಇದಕ್ಕೆ ಕೆಲವು ವಿದ್ಯಾರ್ಥಿಗಳು, ಉಪನ್ಯಾಸಕರು ಬೇಸರ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಮಹಾವಿದ್ಯಾಲಯದ ಆವರಣದಲ್ಲಿ ಸುಮಾರು 1,500 ಆಸನಗಳ ಸಾಮರ್ಥ್ಯದ ಸಭಾಂಗಣ ಮಂಜೂರಾಗಿದೆ. ಸಭಾಂಗಣದ ಕಾಮಗಾರಿಯ ಮೊದಲ ಹಂತದಲ್ಲಿ ₹ 13.50 ಕೋಟಿ ಬಿಡುಗಡೆಯಾಗಿದೆ.
ಮುಖ್ಯ ಕಟ್ಟಡದ ಹಿಂಭಾಗದಲ್ಲಿ ಸುಮಾರು 4,000 ಚದರ ಮೀಟರ್ ಜಾಗವನ್ನು ಸಭಾಂಗಣ ನಿರ್ಮಾಣಕ್ಕೆ ಕಾಲೇಜಿನ ಆಡಳಿತ ಮಂಡಳಿ ಗುರುತಿಸಿದೆ. ಕಳೆದ ಆರೇಳು ವರ್ಷಗಳಿಂದ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಆಸಕ್ತಿಯಿಂದ ನೂರಾರು ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ. ಅವುಗಳಲ್ಲಿ 81 ಮರಗಳಿಗೆ ಆಪತ್ತು ಬಂದಿದೆ.
ಎರಡು ತಿಂಗಳ ಹಿಂದೆಯೇ ಸಭಾಂಗಣ ನಿರ್ಮಾಣಕ್ಕೆ ಅಡೆಚಣೆಯಾಗಿರುವ 81 ಮರಗಳನ್ನು ಕತ್ತರಿಸಲು ಅನುಮತಿ ನೀಡುವಂತೆ ಕೋರಿ ಅರಣ್ಯ ಇಲಾಖೆಯ ಕಲಬುರಗಿ ಉಪ ವಿಭಾಗದ ಪ್ರಾದೇಶಿಕ ಕಚೇರಿಗೆ ಪತ್ರ ಬಂದಿತ್ತು. ಮಹಾವಿದ್ಯಾಲಯ ಆವರಣದಲ್ಲಿ ಮರಗಳು ಇಲ್ಲದ ಬೇರೊಂದ ಜಾಗವನ್ನು ಗುರುತಿಸಿ, ಮರಗಳನ್ನು ಉಳಿಸುವಂತೆ ಹೇಳಲಾಗಿತ್ತು. ಆದರೆ, ಬೇರೆ ಜಾಗವನ್ನು ಗುರುತಿಸದೆ 81 ಮರಗಳಿರುವ ಜಾಗವನ್ನೇ ಅಂತಿಮಗೊಳಿಸಿದ್ದರು. ಅನಿವಾರ್ಯವಾಗಿ ಮರಗಳನ್ನು ಕಡಿಯಲು ಅನುಮತಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ಬೇಸರದಿಂದ ಹೇಳಿದರು.
ಚಿಕ್ಕ ಮರಗಳ ಮರುನಾಟಿ: ‘ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ ಅವರು ಸೋಮವಾರ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಕಾಮಗಾರಿಗಾಗಿ ಕಡಿಯಲು ಉದ್ದೇಶಿಸಿರುವ ಮರಗಳ ಪೈಕಿ ಒಂದಷ್ಟನ್ನಾದರೂ ಉಳಿಸುವ ಸಲುವಾಗಿ ಸಣ್ಣ– ಸಣ್ಣ ಮರಗಳನ್ನು ಇದೇ ಆವರಣದ ಬೇರೆಡೆ ಮರುನಾಟಿ ಮಾಡುವಂತೆ ಸೂಚಿಸಿದ್ದಾರೆ. ಹೀಗಾಗಿ, ಕೆಲವು ಮರಗಳನ್ನು ಗುರುತಿಸಿ ಮರುನಾಟಿ ಮಾಡಲಾಗುತ್ತಿದೆ’ ಎನ್ನುತ್ತಾರೆ ಡಿಎಫ್‌ಒ ರಮೇಶ ಆಳಕೇರಿ ಮತ್ತು ಮೋನಪ್ಪ ಟಿ.ಎನ್.
‘ಆರೇಳು ವರ್ಷಗಳಿಂದ ಬೆಳೆದ ದೊಡ್ಡ ಮರಗಳನ್ನು ಬೇರು ಸಮೇತ ತೆಗೆದು ಮರುನಾಟಿ ಮಾಡುವಂತಹ ಯಂತ್ರೋಪಕರಣಗಳಿಲ್ಲ. ಜೆಸಿಬಿ ಮೂಲಕ ಎರಡ್ಮೂರು ವರ್ಷಗಳಿಂದ ಬೆಳೆದು ನಿಂತ ಸಣ್ಣ– ಸಣ್ಣ ಮರಗಳ ತಾಯಿ ಬೇರಿಗೆ ಹಾನಿಯಾಗದಂತೆ ಹೊರ ತೆಗೆಯುತ್ತಿದ್ದೇವೆ. ಅವುಗಳ ರೆಂಬೆಗಳನ್ನು ಕತ್ತರಿಸಿ, ಬೇರೆಡೆ ಗುಂಡಿಗಳನ್ನು ತೋಡಿ ಮರುನಾಟಿ ಮಾಡುವ ಕಾರ್ಯ ಭರದಿಂದ ಸಾಗಿದೆ. ಆಲದ ಮರಗಳ ರೆಂಬೆಗಳನ್ನು ನರ್ಸರಿ ಫಾರ್ಮ್‌ನಲ್ಲಿ ನಾಟಿ ಮಾಡಿ, ಬೆಳೆಸುತ್ತೇವೆ’ ಎಂದರು.
‘ಬೇರೆ ಎಲ್ಲೂ ಜಾಗವಿಲ್ಲ’
‘ಮಹಾವಿದ್ಯಾಲಯಕ್ಕೆ ಸೇರಿದ್ದ ಹತ್ತಾರ ಎಕರೆ ಜಾಗವನ್ನು ಸರ್ಕಾರವು ಈಗಾಗಲೇ ನಾನಾ ಉದ್ದೇಶಗಳಿಗಾಗಿ ಬೇರೆ ಬೇರೆ ಇಲಾಖೆಗಳಿಗೆ ಕೊಟ್ಟಿದೆ. ದೊಡ್ಡದಾದ ಸಭಾಂಗಣ ನಿರ್ಮಾಣಕ್ಕೆ ಈಗ ಗುರುತಿಸಲಾದ ಜಾಗ ಬಿಟ್ಟರೆ ಬೇರೆ ಯಾವುದೂ ಇಲ್ಲ’ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸವಿತಾ ತಿವಾರಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮಹಾವಿದ್ಯಾಲಯದಲ್ಲಿ ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳಿದ್ದಾರೆ. ಸಾವಿರಾರು ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ ಆಯೋಜಿಸುವಂತಹ ಸಭಾಂಗಣವೂ ಇಲ್ಲ. ಪಿಎಂ ಉಷಾ ಯೋಜನೆಯಡಿ ₹ 5 ಕೋಟಿ ಮಂಜೂರಾಗಿದೆ. ಜತೆಗೆ ಉನ್ನತ ಶಿಕ್ಷಣ ಇಲಾಖೆಯೂ ಅನುದಾನ ಕೊಟ್ಟಿದ್ದು ಅದೆಲ್ಲವೂ ಸಭಾಂಗಣ ಕಾಮಗಾರಿಗೆ ಬಳಕೆಯಾಗುತ್ತಿದೆ. ಮರಗಳ ಕಡಿದಿರುವುದು ನಮಗೂ ಬೇಸರವಿದೆ’ ಎಂದರು.
‘ಮೊನ್ನೆ ಸಾವಿರಾರು ಸಸಿಗಳು ಕೊಟ್ಟು ಇವತ್ತು ಕಣ್ಣೆದುರೇ ಮರ ಕಡಿದರು’ ‘ವಾರಗಳ ಹಿಂದೆ ನಡೆದಿದ್ದ ವನಮಹೋತ್ಸವ ಹಸಿರು ಪಥ ಯೋಜನೆಯ ಚಾಲನೆಗಾಗಿ ಕಾಲೇಜಿನಿಂದ ಸಾವಿರಾರು ವಿದ್ಯಾರ್ಥಿಗಳನ್ನು ಕರೆದೊಯ್ದಿದ್ದರು. ಮನೆಗಳ ಮುಂದೆ ಸಸಿಗಳನ್ನು ನೆಡುವಂತೆ ಸಾವಿರಾರು ಸಸಿಗಳನ್ನು ಕೊಟ್ಟರು. ಇವತ್ತು ನಮ್ಮ ಕಣ್ಣೆದುರೇ ಕಾಲೇಜಿನ ಮರಗಳನ್ನು ಕಡಿದು ಹಾಕಿದರು’ ಎಂದು ಕೆಲ ವಿದ್ಯಾರ್ಥಿಗಳು ಅಲವತ್ತುಕೊಂಡರು. ‘ನಮ್ಮ ಸೀನಿಯರ್‌ಗಳು ಆಸಕ್ತಿ ವಹಿಸಿ ಸಸಿಗಳನ್ನು ನೆಟ್ಟು ನೆರಳು ಕೊಡುವ ಮಟ್ಟಕ್ಕೆ ಬೆಳೆಸಿದ್ದರು. ಬಿಡುವಿನ ಅವಧಿ ಓದು ಊಟಕ್ಕೆ ಮರಗಳೇ ಆಸರೆ ಆಗಿದ್ದವು. ಪರೀಕ್ಷೆಯ ಅವಧಿಯಲ್ಲಿ ಮರದ ನೆರಳಲ್ಲಿ ಗುಂಪಾಗಿ ಕುಳಿತು ಗ್ರೂಪ್ ಸ್ಟಡಿ ಮಾಡುತ್ತಿದ್ದೆವು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.