ADVERTISEMENT

‘ನಿರುದ್ಯೋಗಿ ಪದವೀಧರರಿಗೆ ಕೌಶಲ ಕಲಿಕೆ’

ಕಾಮೆಡ್–ಕೆ ಅಧ್ಯಕ್ಷ ಡಾ. ಎಂ.ಆರ್. ಜಯರಾಂ ಆಶಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 3:01 IST
Last Updated 24 ಜನವರಿ 2023, 3:01 IST
ಕಲಬುರಗಿಯಲ್ಲಿ ಆಯೋಜಿಸಿದ್ದ ನಾವೀನ್ಯತಾ ಕೇಂದ್ರ ಉದ್ಘಾಟನೆ ಸಮಾರಂಭದಲ್ಲಿ ಡಾ.ಭೀಮಾಶಂಕರ ಬಿಲಗುಂದಿ ಅವರು ಬಿ.ಎನ್‌.ಸುಬ್ರಹ್ಮಣ್ಯ ಅವರೊಂದಿಗೆ ಮಾತುಕತೆ ನಡೆಸಿದರು. ಡಾ.ಎಂ.ಆರ್‌.ಜಯರಾಂ, ರಾಧಾಕೃಷ್ಣ, ಡಾ.ಎಸ್‌.ಕುಮಾರ್‌ ಪಾಲ್ಗೊಂಡಿದ್ದರು–ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಆಯೋಜಿಸಿದ್ದ ನಾವೀನ್ಯತಾ ಕೇಂದ್ರ ಉದ್ಘಾಟನೆ ಸಮಾರಂಭದಲ್ಲಿ ಡಾ.ಭೀಮಾಶಂಕರ ಬಿಲಗುಂದಿ ಅವರು ಬಿ.ಎನ್‌.ಸುಬ್ರಹ್ಮಣ್ಯ ಅವರೊಂದಿಗೆ ಮಾತುಕತೆ ನಡೆಸಿದರು. ಡಾ.ಎಂ.ಆರ್‌.ಜಯರಾಂ, ರಾಧಾಕೃಷ್ಣ, ಡಾ.ಎಸ್‌.ಕುಮಾರ್‌ ಪಾಲ್ಗೊಂಡಿದ್ದರು–ಪ್ರಜಾವಾಣಿ ಚಿತ್ರ   

ಕಲಬುರಗಿ: ‘ರಾಜ್ಯದಲ್ಲಿ ಪ್ರತಿ ವರ್ಷ 1.20 ಲಕ್ಷ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪದವಿ ಪಡೆಯುತ್ತಾರೆ. ಅವರಲ್ಲಿ 20 ಸಾವಿರ ಜನರಿಗೆ ಮಾತ್ರ ಉದ್ಯೋಗ ಸಿಗುತ್ತದೆ. ಉಳಿದವರು ನಿರುದ್ಯೋಗಿಗಳಾಗಿ ಉಳಿಯುವರು. ಇದನ್ನು ನಿವಾರಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಕೌಶಲ ಹೆಚ್ಚಿಸಲು ಕಲಬುರಗಿ ಸೇರಿ ರಾಜ್ಯದ ಎಂಟು ಕಡೆ ‘ಕಾಮೆಡ್ ಕೇರ್ಸ್ ಇನ್ನೋವೇಟಿವ್ ಹಬ್’ ಆರಂಭಿಸಲಾಗಿದೆ’ ಎಂದು ಕಾಮೆಡ್–ಕೆ ಅಧ್ಯಕ್ಷ ಡಾ.ಎಂ.ಆರ್. ಜಯರಾಂ ತಿಳಿಸಿದರು.

ನಗರದ ಪ್ರೈಮ್ ಮಾಲ್ ಆವರಣದಲ್ಲಿ ಸೋಮವಾರ ಆರಂಭವಾದ ನೂತನ ನಾವೀನ್ಯತಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಪ್ರತಿ ವರ್ಷ ಕೆಲಸ ಪಡೆಯುವ ರಾಜ್ಯದ 20 ಸಾವಿರ ಎಂಜಿನಿಯರಿಂಗ್ ಪದವೀಧರರ ಪೈಕಿ 5 ಸಾವಿರ ಮಂದಿ ವಿದೇಶಕ್ಕೆ ತೆರಳುವರು. ಉಳಿದ 15 ಸಾವಿರ ಉದ್ಯೋಗಿಗಳು ಮಾತ್ರ ದೇಶದ ಅಭಿವೃದ್ಧಿಗೆ ಕೆಲಸ ಮಾಡುತ್ತಾರೆ’ ಎಂದರು.

‘ಉದ್ಯೋಗ ಸಿಗದ 1 ಲಕ್ಷ ಪದವೀಧರರ ಬಗ್ಗೆ ನಾವು ಹೆಚ್ಚು ಯೋಚಿಸಬೇಕಿದೆ. ಅದಕ್ಕಾಗಿಯೇ ವಿವಿಧ ಬಗೆಯ ಕೌಶಲಗಳನ್ನು ಕಲಿಸಿಕೊಡಲು ಇನ್ನೋವೇಟಿವ್ ಹಬ್ ನೆರವಾಗಲಿದೆ. ಇದಕ್ಕಾಗಿ ಕಾಮೆಡ್ ಕೆ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಈ ಕೇಂದ್ರವನ್ನು ಬಳಸಲು ಅವಕಾಶ ಸಿಗಲಿದೆ’ ಎಂದರು.

ADVERTISEMENT

‘ಕಾಮೆಡ್‌–ಕೆ ಆಡಳಿತ ಮಂಡಳಿಯು ನಿಷ್ಪಕ್ಷಪಾತವಾಗಿ ಸಿಇಟಿ ಪರೀಕ್ಷೆಗಳನ್ನು ನಡೆಸಿ ಇಡೀ ದೇಶದಲ್ಲೂ ಖಾಸಗಿ ಆಡಳಿತ ಮಂಡಳಿಗಳ ಒಕ್ಕೂಟವಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಎಸ್.ವಿ. ರಂಗನಾಥ್, ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್)ಯ ಮುಖ್ಯಸ್ಥರಾಗಿದ್ದ ಬ್ರಹ್ಮಚಾರಿ ಅವರನ್ನು ಕಾಮೆಡ್–ಕೆ ಆಡಳಿತ ಮಂಡಳಿಗೆ ಸೇರಿಸಿಕೊಳ್ಳಲಾಗಿದೆ’ ಎಂದರು.

ಕಾಮೆಡ್–ಕೆ ಕಾರ್ಯದರ್ಶಿ ಡಾ.ಎಸ್. ಕುಮಾರ್ ಮಾತನಾಡಿ, ‘ಅಂತರರಾಷ್ಟ್ರೀಯ ಸಂಸ್ಥೆಯಿಂದ ಎಂಜಿನಿಯರಿಂಗ್ ಕಾಲೇಜುಗಳ ಏಳು ವಿಭಾಗಗಳಲ್ಲಿನ ಬೋಧನೆ, ಸಂಶೋಧನೆ, ತರಬೇತಿ ಮಟ್ಟ ಅಳೆಸಲಾಗುವುದು. ಇದಕ್ಕೆ ₹ 6 ಲಕ್ಷ ಖರ್ಚಾಗುತ್ತದೆ. ಆದರೆ ಕಾಮೆಡ್ ಕೆ ಸದಸ್ಯ ಕಾಲೇಜುಗಳು ಈ ಸೇವೆ ಪಡೆಯಲು ಬಯಸಿದರೆ ಒಟ್ಟು ಖರ್ಚಿನ ಶೇ 80ರಷ್ಟನ್ನು ಕಾಮೆಡ್–ಕೆ ಭರಿಸಲಿದೆ. ಕೇವಲ ₹ 1 ಲಕ್ಷ ಭರಿಸಿದರೆ ಸಾಕು’ ಎಂದರು.

‘ನಾವೀನ್ಯತಾ ಕೇಂದ್ರ (ಇನ್ನೋವೇಟಿವ್ ಹಬ್)ದ ಸೇವೆ ಪಡೆಯಲಿರುವ ಎಂಜಿನಿರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕನಿಷ್ಠ ಶುಲ್ಕವನ್ನು ನಿಗದಿ ಮಾಡಲಾಗಿದೆ’ ಎಂದು ತಿಳಿಸಿದರು.

ಎಚ್‌ಕೆಇ ಸೊಸೈಟಿ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಮಾತನಾಡಿ, ‘ಕಲ್ಯಾಣ ಕರ್ನಾಟಕ ಭಾಗದ ತಾಂತ್ರಿಕ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ನಾವೀನ್ಯತಾ ಕೇಂದ್ರವನ್ನು ಕಲಬುರಗಿಯಲ್ಲಿ ಆರಂಭಿಸಿದ್ದು ಸ್ವಾಗತಾರ್ಹ ಕ್ರಮ. ಎಲ್ಲ ಎಂಜಿನಿಯರಿಂಗ್ ಕಾಲೇಜುಗಳು ಇದರ ಸೌಲಭ್ಯ ಪಡೆದುಕೊಳ್ಳಬೇಕು’ ಎಂದರು.

ಕೆಪಿಸಿಎಫ್‌ ಶಿಕ್ಷಣ ಸಂಸ್ಥೆಯ ಟ್ರಸ್ಟಿ ರಾಧಾಕೃಷ್ಣ ದೊಡ್ಡಮನಿ ಇದ್ದರು. ಇಆರ್‌ಎ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.