ಕಲಬುರಗಿ: ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಕೆಆರ್‌ಡಿಬಿ) 2025–26ನೇ ಸಾಲಿನಲ್ಲಿ ಸರ್ಕಾರದ ಆಯ್ದ ಇಲಾಖೆಗಳ ಸಹಯೋಗದ ಅಭಿವೃದ್ಧಿ ಯೋಜನೆಗಳಲ್ಲಿ ₹ 1,500 ಕೋಟಿ ಹಾಗೂ ಮಂಡಳಿಯ ಮೈಕ್ರೊ ಮತ್ತು ಮ್ಯಾಕ್ರೊ ಯೋಜನೆಗಳಲ್ಲಿ ₹ 3,500 ಕೋಟಿ ಅನುದಾನವನ್ನು ಖರ್ಚು ಮಾಡುವ ನಿರ್ಣಯ ತೆಗೆದುಕೊಂಡಿದೆ’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ತಿಳಿಸಿದರು.
ಇಲ್ಲಿನ ಕೆಕೆಆರ್‌ಡಿಬಿ ಕಚೇರಿಯಲ್ಲಿ ಶನಿವಾರ 2025–26ನೇ ಸಾಲಿನ ಮಂಡಳಿಯ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕಂಕಣ ಬದ್ಧವಾಗಿದೆ. ಮುಂದಿನ ಒಂದು ವರ್ಷದಲ್ಲಿ ₹ 5,000 ಕೋಟಿ ಖರ್ಚು ಮಾಡಲು ಕ್ರಿಯಾ ಯೋಜನೆಗಳನ್ನು ರೂಪಿಸಲು ಸರ್ವ ಸನ್ನದ್ಧು ಮಾಡಿಕೊಳ್ಳಲಾಗಿದೆ’ ಎಂದರು.
‘ಕಲಬುರಗಿಯಲ್ಲಿ ಮೆಗಾ ಡೇರಿ ನಿರ್ಮಾಣಕ್ಕೆ ₹ 50 ಕೋಟಿ, ಹಸರೀಕರಣಕ್ಕೆ ₹ 50 ಕೋಟಿ, ಎಂಎಸ್‌ಎಂಇಗಳ ಬಲವರ್ಧನೆಗೆ ₹ 100 ಕೋಟಿ, ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ₹ 100 ಕೋಟಿ, ಶೋಷಿತ ವರ್ಗ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹ 25 ಕೋಟಿ, 50 ಕೆಪಿಎಸ್‌ಸಿ ಶಾಲೆಗಳಿಗೆ ₹ 200 ಕೋಟಿ ಅನುದಾನವನ್ನು ಮಂಡಳಿ ನೀಡಲಿದೆ. ಮಂಡಳಿ ಖರ್ಚು ಮಾಡುವಷ್ಟೇ ಅನುದಾನವನ್ನು ಆಯಾ ಇಲಾಖೆಗಳೂ ವಿನಿಯೋಗಿಸಲಿವೆ’ ಎಂದರು.
‘ಕಲಬುರಗಿಯಲ್ಲಿ ನಿಮ್ಹಾನ್ಸ್, ರಾಯಚೂರು ಮತ್ತು ಬೀದರ್ ಜಿಲ್ಲೆಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ, ಕೊಪ್ಪಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣದ ಶೇ 50ರಷ್ಟು ಖರ್ಚನ್ನು ಮಂಡಳಿಯೇ ಭರಿಸಲಿದೆ. ಉಳಿದ ಅನುದಾನವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಖರ್ಚು ಮಾಡಲಿದೆ. ಮಂಡಳಿಯ ₹ 1,500 ಕೋಟಿಯ ಜತೆಗೆ ಸರ್ಕಾರದ ಇತರೆ ಇಲಾಖೆಗಳಿಂದಲೂ ₹ 1,500 ಕೋಟಿ ಅನುದಾನ ನಮ್ಮ ಭಾಗಕ್ಕೆ ಹರಿದು ಬರಲಿದೆ’ ಎಂದು ತಿಳಿಸಿದರು.
‘₹ 3,500 ಕೋಟಿ ಅನುದಾನವನ್ನು 41 ಶಾಸಕರ ಕ್ಷೇತ್ರಗಳಿಗಾಗಿ ಮೈಕ್ರೊ ಮತ್ತು ಮ್ಯಾಕ್ರೊ ಯೋಜನೆಗಳಡಿ ಪ್ರಾಮಾಣಿಕವಾಗಿ ಬಳಸಿಕೊಳ್ಳುತ್ತೇವೆ. ಆಯಾ ಜಿಲ್ಲೆಗಳ ಸಚಿವರಿಗೂ ದೊಡ್ಡ ಯೋಜನೆಗಳಿಗೆ ಈ ಹಣ ವಿನಿಯೋಗ ಮಾಡಿಕೊಳ್ಳುವ ಅವಕಾಶವಿದೆ. ಅಕ್ಷರ ಆವಿಷ್ಕಾರ ಯೋಜನೆಯು ಮುಂದಿನ ಎರಡು ವರ್ಷಗಳು ಮುಂದುವರಿಯಲಿದೆ’ ಎಂದರು.
ಸಚಿವರಾದ ಶರಣಬಸಪ್ಪ ದರ್ಶನಾಪುರ, ಡಾ.ಶರಣಪ್ರಕಾಶ ಪಾಟೀಲ, ಮಂಡಳಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಶಿಕ್ಷಣ ಇಲಾಖೆ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ.ಆಕಾಶ್ ಶಂಕರ್ ಉಪಸ್ಥಿತರಿದ್ದರು.
‘ಕೃಷಿ ಆರೋಗ್ಯ ಸಮಿತಿಗಳ ರಚನೆ’
‘ನಮ್ಮ ಭಾಗದಲ್ಲಿ ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳ ಏಳಿಗೆಗೆ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಅರಿಯಲು ತಜ್ಞರನ್ನು ಒಳಗೊಂಡ ಕೃಷಿ ಭಾಗ್ಯ ಸಮಿತಿ ಹಾಗೂ ಆರೋಗ್ಯ ಮತ್ತು ಅಪೌಷ್ಟಿಕತೆ ಸಮಿತಿಗಳನ್ನು ಮುಂದಿನ ಒಂದು ತಿಂಗಳಲ್ಲಿ ರಚನೆ ಮಾಡಲಾಗುವುದು’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ತಿಳಿಸಿದರು. ‘30 ವರ್ಷಗಳ ಹಿಂದೆ ಸಕ್ಕರೆ ಕಾರ್ಖಾನೆಗೆ ನೀಡಿದ್ದ ಸಾಲ ವಸೂಲಿಗೂ ತೀರ್ಮಾನಿಸಲಾಗಿದೆ. ಅಂತರ್ಜಲ ವೃದ್ಧಿಗೂ ಯೋಜನೆಯನ್ನು ಹಾಕಿಕೊಂಡಿದ್ದೇವೆ. ತೊಗರಿ ತಳಿ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಸ್ತಾಪವೂ ಆಗಿದೆ. ಮಂಡಳಿಯ ಕಾಮಗಾರಿಗಳನ್ನು ಶೇ 50ಕ್ಕೂ ಮೀರದಂತೆ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ನೀಡದಂತೆ ನಿರ್ಣಯವನ್ನೂ ತೆಗೆದುಕೊಂಡಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.