ADVERTISEMENT

ಸೇಡಂ: ಕಲುಷಿತಗೊಂಡ ಕಮಲಾವತಿ ನದಿ ನೀರು

ನದಿಯ ಒಡಲಿಗೆ ಕಾರ್ಖಾನೆಗಳ ತ್ಯಾಜ್ಯ, ಮರಳು ಅಕ್ರಮ ಗಣಿಗಾರಿಕೆ

ಅವಿನಾಶ ಬೋರಂಚಿ
Published 4 ಮಾರ್ಚ್ 2025, 4:26 IST
Last Updated 4 ಮಾರ್ಚ್ 2025, 4:26 IST
ಸೇಡಂ ಪಟ್ಟಣಕ್ಕೆ ಹೊಂದಿಕೊಂಡಿರುವ ಕಮಲಾವತಿ ನದಿ ನೀರು ಪಾಚಿಗಟ್ಟಿ ಕಲುಷಿತಗೊಂಡಿರುವುದು
ಸೇಡಂ ಪಟ್ಟಣಕ್ಕೆ ಹೊಂದಿಕೊಂಡಿರುವ ಕಮಲಾವತಿ ನದಿ ನೀರು ಪಾಚಿಗಟ್ಟಿ ಕಲುಷಿತಗೊಂಡಿರುವುದು   

ಸೇಡಂ: ಸಿಮೆಂಟ್‌ ಕಂಪನಿಗಳ ತ್ಯಾಜ್ಯ, ಮರಳು ಅಕ್ರಮ ಗಣಿಗಾರಿಕೆ, ಸರಾಗವಾಗಿ ನೀರು ಹರಿಯಲು ಅನುವಿಲ್ಲದಿರುವುದು, ಆಮೆಗತಿ ಕಾಮಗಾರಿಗಳು, ಪ್ಲಾಸ್ಟಿಕ್‌ ತ್ಯಾಜ್ಯ ಸೇರಿದಂತೆ ಇನ್ನೂ ಹಲವು ಕಾರಣಗಳಿಂದಾಗಿ ಈ ಭಾಗದ ಜೀವನದಿ ‘ಕಮಲಾವತಿ’ ನದಿಯ ನೀರು ಕಲುಷಿತಗೊಂಡಿದೆ.

ಪಟ್ಟಣಕ್ಕೆ ಹೊಂದಿರುವ ಕಮಲಾವತಿ ನದಿ ನೀರು ಮಲೀನಗೊಂಡಿದ್ದು, ಜನ-ಜಾನುವಾರುಗಳ ಉಪಯೋಗಕ್ಕೆ ಅನುಕೂಲಕರವಾಗಿಲ್ಲ. ಕುಡಿಯಲು ಹಾಗೂ ನಿತ್ಯ ಬಳಕೆಗೂ ಯೋಗ್ಯವಿಲ್ಲ ಎಂದು ಜನರು ದೂರಿದ್ದಾರೆ.

ಕಮಲಾವತಿ ನದಿ ನೀರಿನಲ್ಲಿ ಪಾಚಿಗಟ್ಟಿದೆ. ಕೆಲವೆಡೆ ವಿವಿಧ ಕಾಮಗಾರಿಗಳು ವರ್ಷಗಳಿಂದ ನಡೆಯುತ್ತಿರುವುದರಿಂದ ನೀರು ಸಂಗ್ರಹವಾಗಿ, ಮುಂದಕ್ಕೆ ಸಾರಾಗವಾಗಿ ನೀರು ಹರಿಯುತ್ತಿಲ್ಲ. ಸಂಗ್ರವಾದ ನೀರಲ್ಲಿ ಗಲೀಜು ಬೆಳೆಯುತ್ತಿದ್ದು, ವಾಸನೆ ಬರುತ್ತಿದೆ. ನಿಂತ ನೀರಲ್ಲಿ ಪ್ಲಾಸ್ಟಿಕ್ ಬಾಟಲಿ, ಚೀಲ, ಬಟ್ಟೆ ಸೇರಿದಂತೆ ಇನ್ನಿತರ ತ್ಯಾಜ್ಯ ವಸ್ತುಗಳು ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರು ನೀರು ಬಳಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಪುರಸಭೆ ಸದಸ್ಯ ಶಿವಾನಂದ ಸ್ವಾಮಿ ಹೇಳಿದ್ದಾರೆ.

ADVERTISEMENT

ರಾಜಕುಮಾರ ಪಾಟೀಲ ತೆಲ್ಕೂರ ಶಾಸಕರಾಗಿದ್ದಾಗ ನದಿ ಅಗಲೀಕರಣದ ಜೊತೆಗೆ ಹೂಳೆತ್ತುವ ಕಾಮಗಾರಿ ಕೈಗೊಂಡು, ನದಿಯನ್ನು ಸ್ವಚ್ಛಗೊಳಿಸಿದ್ದರು. ನದಿಯಲ್ಲಿ ಬೆಳೆದಿದ್ದ ಜಾಲಿ ಗಿಡ ಮರುಗಳನ್ನು ತೆಗೆಸಿ, ನದಿ ನೀರು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದ್ದರು. ಇದರಿಂದಾಗಿ ನದಿ ನೀರು ಸುಗಮವಾಗಿ ಹರಿಯುತ್ತಿತ್ತು. ನೀರು ಕೂಡ ಶುದ್ಧವಾಗಿರುತ್ತಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ನದಿಗೆ ಅಡ್ಡಲಾಗಿ ಕೆಲವಡೆ ಕಾಮಗಾರಿಗಳು ಮಂದಗತಿ ಸಾಗುತ್ತಿರುವುದರಿಂದ ನೀರಿನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜತೆಗೆ ಕಮಲಾವತಿ ನದಿಯಲ್ಲಿ ಬಟಗೇರಾ, ಮದರಿ, ರಂಜೋಳ ಸೇರಿದಂತೆ ವಿವಿಧ ಕಡೆಗಳಲ್ಲಿ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ನದಿಯಲ್ಲಿ ಟ್ರ್ಯಾಕ್ಟರ್, ಎತ್ತಿನ ಬಂಡಿ ಸೇರಿದಂತೆ ವಿವಿಧ ವಾಹನಗಳಲ್ಲಿ ಮರಳನ್ನು ಸಾಗಿಸುತ್ತಿದ್ದಾರೆ. ಇದರಿಂದಾಗಿ ನದಿಯಲ್ಲಿ ಹೊಂಡಗಳೂ ಬಿದ್ದು, ಜಾಲಿಗಿಡಗಳು ಬಳೆಯುತ್ತಿವೆ. ನದಿ ಕಲುಷಿತವಾಗಲು ಕಾರಣವಾಗಿದೆ ಎಂದು ಮುಖಂಡ ಶ್ರೀಮಂತ ಆವಂಟಿ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜಕುಮಾರ ಪಾಟೀಲ ಶಾಸಕರಾಗಿದ್ದಾಗ ಕಮಲಾವತಿ ನದಿ ಅಗಲೀಕರಣ ಮಾಡಿಸಿ ಸ್ವಚ್ಛವಾಗಿಟ್ಟಿದ್ದರು. ಈಗ ನದಿಯ ನೀರು ಕಲುಷಿತಗೊಂಡಿದ್ದು ಸರ್ಕಾರ ಗಮನ ಹರಿಸಬೇಕು
ಶ್ರೀಮಂತ ಆವಂಟಿ ಮುಖಂಡ
ಬೇಸಿಗೆಯ ಬಿಸಿಲಿನ ಪ್ರಖರತೆ ಹೆಚ್ಚಿರುವುದರಿಂದ ಜಾನುವಾರುಗಳು ಜೀವನದಿ ಕಮಲಾತಿ ಆಶ್ರಯಿಸಿವೆ. ನದಿಯ ನೀರಿನ ಸ್ವಚ್ಛತೆಯಡೆಗೆ ಅಧಿಕಾರಿಗಳು ಗಮನ ಹರಿಸುವ ಅವಶ್ಯಕತೆಯಿದೆ
ಮಲ್ಲಿಕಾರ್ಜುನ ಮೆಕ್ಯಾನಿಕ್ ಅಧ್ಯಕ್ಷ ಕೋಲಿ ಕಬ್ಬಲಿಗ ಸಮಾಜ

ಸಿಮೆಂಟ್‌ ಕಂಪನಿ ತ್ಯಾಜ್ಯ ನದಿಗೆ

ಪಟ್ಟಣಕ್ಕೆ ಹೊಂದಿಕೊಂಡಿರುವ ಸಿಮೆಂಟ್ ಕಂಪನಿಯೊಂದರ ತ್ಯಾಜ್ಯವು ನದಿಯನ್ನು ಸೇರುತ್ತಿದ್ದು ನದಿ ನೀರು ಕಲುಷಿತವಾಗಲು ಮುಖ್ಯ ಕಾರಣವಾಗಿದೆ. ಕಂಪನಿಗಳ ಹೊರಹಾಕುವ ರಾಸಾಯನಿಕ ತ್ಯಾಜ್ಯ ಕೆಲವೊಮ್ಮೆ ದುರ್ನಾತ ಬೀರುತ್ತಿರುತ್ತದೆ. ಇಂತಹ ರಾಸಾಯನಿಕ ತ್ಯಾಜ್ಯ ನೀರು ಸೇರುವುದರಿಂದ ಈ ಭಾಗದ ಜನರಲ್ಲಿ ಚರ್ಮರೋಗಗಳು ಬರುತ್ತಿವೆ. ಜನರಲ್ಲಿ ಮೈ ತುರಿಕೆ ಬರುತ್ತಿದೆ. ಜತೆಗೆ ಆರೋಗ್ಯದ ಮೇಲೆ ವ್ಯತಿರಕ್ತ ಪರಿಣಾಮ ಬೀರುತ್ತಿದೆ. ಅಲ್ಲದೆ ನದಿಯಲ್ಲಿನ ಜಲಚರ ಪ್ರಾಣಿಗಳ ಜೀವಕ್ಕೂ ಹಾನಿಯುಂಟು ಮಾಡುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ ಚವಾಣ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.