ADVERTISEMENT

ಕಲಬುರಗಿ | ಪಕ್ಷ ಸಂಘಟನೆಗೆ ಪ್ರಚಾರ ಸಮಿತಿ ಒತ್ತು: ವಿನಯಕುಮಾರ ಸೊರಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 6:42 IST
Last Updated 19 ಸೆಪ್ಟೆಂಬರ್ 2025, 6:42 IST
ವಿನಯಕುಮಾರ ಸೊರಕೆ
ವಿನಯಕುಮಾರ ಸೊರಕೆ   

ಕಲಬುರಗಿ: ‘ಚುನಾವಣೆ ಎಂದರೆ ಒಂದು ಯುದ್ಧ. ಬರೀ ಸೇನಾಧಿಕಾರಿಗಳು ಇದ್ದರೆ ಸಾಲದು. ಅದಕ್ಕೆ ಸೈನಿಕರೂ ಬೇಕು. ಕಾಂಗ್ರೆಸ್‌ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಯೋಜನೆ ರೂಪಿಸಲಾಗಿದೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ಪ್ರಚಾರ ಸಮಿತಿಯು ಕೇವಲ ಚುನಾವಣೆಗೆ ಸೀಮಿತವಾಗಿತ್ತು. ಆದರೆ ಅದನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ವರ್ಷದ 365 ದಿನಗಳೂ ಕೆಲಸ ಮಾಡುವಂತೆ ಯೋಜನೆ ರೂಪಿಸಲಾಗಿದೆ’ ಎಂದರು.

‘ಈ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ತಲಾ 23 ಸದಸ್ಯರು, ಬ್ಲಾಕ್‌ ಮಟ್ಟದಲ್ಲಿ 23 ಸದಸ್ಯರು ಹಾಗೂ ಎಲ್ಲ ಗ್ರಾಮ ಪಂಚಾಯಿತಿಗಳ ಪ್ರತಿಯೊಂದು ಬೂತ್‌ನಲ್ಲಿ ತಲಾ ಇಬ್ಬರು ಡಿಜಿಟಲ್‌ ಯೂತ್‌ಗಳನ್ನು ನೇಮಿಸಲು ನಿರ್ಧರಿಸಲಾಗಿದೆ. ಈ ನೇಮಕದಲ್ಲಿ ವಿವಿಧ ವರ್ಗದವರಿಗೆ ಸಾಮಾಜಿಕ ನ್ಯಾಯದಡಿ ಪ್ರಾತಿನಿಧ್ಯ ನೀಡಲಾಗುವುದು. ರಾಜ್ಯದಲ್ಲಿ 59 ಸಾವಿರ ಬೂತ್‌ಗಳಿದ್ದು, ಡಿಜಿಟಲ್‌ ಯೂತ್‌ಗಳ ಸಂಖ್ಯೆಯೇ ಲಕ್ಷ ದಾಟುತ್ತದೆ. ಇದನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಪಕ್ಷ ಸಂಘಟಿಸಲಾಗುವುದು’ ಎಂದು ವಿವರಿಸಿದರು.

ADVERTISEMENT

‘ಪ್ರಚಾರ ಸಮಿತಿಗಳ ಜೊತೆಗೆ ಈಗಿರುವ ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ಸಂಯೋಜಿಸಿ ಸೇರಿಕೊಂಡು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲಾಗುವುದು’ ಎಂದರು.

‘ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್‌ ಅಧಿವೇಶನದ ಆಶಯದಂತೆ ಪಕ್ಷವನ್ನು ಸಿದ್ಧಾಂತದ ಆಧಾರದಲ್ಲಿ ಸಂಘಟಿಸಲಾಗುವುದು. ಅಲ್ಲಿ ನಡೆದ ಜೈಬಾಪು, ಜೈಭೀಮ, ಜೈಸಂವಿಧಾನ ಸಮಾವೇಶವನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುವುದು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಭೀಮಣ್ಣ ಮೇಟಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ವೀರನಾಯಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ ರೆಡ್ಡಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಸಿಂಗೆ, ಮುಖಂಡರಾದ ಲಚ್ಚಪ್ಪ ಜಮಾದಾರ, ಲಿಂಗರಾಜ ತಾರಫೈಲ್‌, ಪ್ರಶಾಂತ ಕೊರಳ್ಳಿ ಇದ್ದರು.

‘ಮತಹಕ್ಕು ಕಸಿಯುವ ಷಡ್ಯಂತ್ರ’

‘ದೇಶದಲ್ಲಿ ಸಂವಿಧಾನದ ಮೂಲಕ ಡಾ.ಅಂಬೇಡ್ಕರ್ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮತದಾನದ ಹಕ್ಕು ನೀಡಿದರು. ಮತಗಳವು ಮತದಾರರ ಪಟ್ಟಿಯಿಂದ ಹೆಸರು ಅಳಿಸುವ ಮೂಲಕ ಇಂದು ಆ ಮತಹಕ್ಕು ಕಸಿಯುವ ಷಡ್ಯಂತ್ರ ನಡೆಯುತ್ತಿದೆ. ಅದರ ವಿರುದ್ಧ ಜನಜಾಗೃತಿ ಮೂಡಿಸಲಾಗುವುದು’ ಎಂದು ವಿನಯಕುಮಾರ ಸೊರಕೆ ಹೇಳಿದರು. ‘ಲೋಕಸಭಾ ವಿರೋಧ ಪಕ್ಷ ನಾಯಕರಾದ ರಾಹುಲ್‌ ಗಾಂಧಿ ಶ್ಯಾಡೋ ಪ್ರಧಾನಿ. ಮತಗಳವಿಗೆ ಸಂಬಂಧಿಸಿದಂತೆ ಮಾತನಾಡಿದ ಅವರ ವಿರುದ್ಧ ಚುನಾವಣಾ ಆಯೋಗ ಧಮ್ಕಿ ನೀಡುವಂಥ ಪ್ರತಿಕ್ರಿಯೆ ನೀಡಿದ್ದು ಸರಿಯಲ್ಲ’ ಎಂದರು. ‘ಗ್ಯಾರಂಟಿಯಿಂದ ಅಭಿವೃದ್ಧಿ’ ‘ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಬಿಜೆಪಿ ಟೀಕಿಸಿತ್ತು. ಆದರೆ ಗ್ಯಾರಂಟಿಯಿಂದ ಬಡವರಿಗೆ ಖರೀದಿ ಶಕ್ತಿ ಬಂದಿದೆ. ತಲಾವಾರು ಆದಾಯ ಜಿಡಿಪಿಯಲ್ಲಿ ಪ್ರಗತಿ ಸಾಧಿಸಿದೆ. ಹೂಡಿಕೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಏಳನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಲಾಗಿದೆ. ಅಂಗನವಾಡಿ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.