ADVERTISEMENT

ಸಚಿವ ಸಂಪುಟದ ಪುನರ್‌ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚಿಸಿಲ್ಲ: ಖರ್ಗೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 10:14 IST
Last Updated 11 ಜೂನ್ 2025, 10:14 IST
   

ಕಲಬುರಗಿ: ‘ಸಚಿವ ಸಂಪುಟದ ಪುನರ್‌ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ. ಜಾತಿ ಜನಗಣತಿ, ಕಾಲ್ತುಳಿತ ಸೇರಿ ಮೂರ್ನಾಲ್ಕು ವಿಚಾರಗಳು ಚರ್ಚೆಯಾಗಿವೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು.

ದೆಹಲಿಯಲ್ಲಿ ಸಿಎಂ, ಡಿಸಿಎಂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮಂಗಳವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಗ್ಗೆ ನಗರದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಆಡಳಿತಾತ್ಮಕವಾಗಿ ಕೆಲವು ಮಾಹಿತಿಯನ್ನು ಪಡೆದಿದ್ದೇವೆ. ಪಕ್ಷದ ಆಂತರಿಕ ವಿಷಯಗಳೂ ಪ್ರಸ್ತಾಪವಾಗಿವೆ. ಸಚಿವ ಸಂಪುಟದ ಬದಲಾವಣೆ ಸದ್ಯಕ್ಕೆ ಇಲ್ಲ. ಮುಂದೆ ಬರುವ ದಿನಗಳಲ್ಲಿ ನೋಡಬೇಕು’ ಎಂದರು.

‘ಕಾಲ್ತುಳಿತದಂತಹ ಘಟನೆ ನಡೆಯಬಾರದಿತ್ತು. ಮುಂದೆ ಇಂತಹದ್ದು ಮರುಕಳಿಸದಂತೆ ನೋಡಿಕೊಳ್ಳಬೇಕು. ಯಾವುದೇ ಕಾರ್ಯಕ್ರಮ ಮಾಡುವಾಗ ಎಲ್ಲರೂ ಸೇರಿ ಮಾಡಬೇಕು. ಕಾಲ್ತುಳಿತದಲ್ಲಿ ತಪ್ಪು ಯಾರಿಂದ ಆಗಿದೆ ಎಂಬುದನ್ನು ಪತ್ತೆಹಚ್ಚಿ ಅವರಿಗೆ ಶಿಕ್ಷೆ ಕೊಡಬೇಕು. ಸಂತ್ರಸ್ತರ ಕುಟುಂಬಗಳ ಬೆಂಬಲಕ್ಕೆ ನಿಂತು, ಅವರಿಗೆ ಸಹಾಯ ಮಾಡುವಂತೆ ರಾಹುಲ್‌ ಗಾಂಧಿ ಅವರು ಸ್ಪಷ್ಟವಾಗಿ ತಿಳಿ ಹೇಳಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

ಬಿಜೆಪಿಗರ ರಾಜೀನಾಮೆಗೆ ಪ್ರತಿಕ್ರಿಯಿಸಿದ ಖರ್ಗೆ, ‘ಕುಂಭಮೇಳದಲ್ಲಿ ಲಕ್ಷಾಂತರ ಜನರು ಸೇರಿ ಕಾಲ್ತುಳಿತವಾಗಿತ್ತು. ಆಗ ನಾನು ಮಾತಾಡಿದ್ದಕ್ಕೆ ನನಗೆಯೇ ಬೈದರು. ಆ ಮೇಲೆ ಒಂದೊಂದೆ ಹೆಣಗಳು ಹೊರಬಂದವು. ಆಗ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ರಾಜೀನಾಮೆ ಕೊಟ್ಟರಾ? ಯಾವುದೇ ಒಂದು ಕೆಲಸ ಉದ್ದೇಶ ಪೂರ್ವಕವಾಗಿ ಮಾಡಿದ್ದರೆ ರಾಜೀನಾಮೆ ಕೊಡಬೇಕು. ಬೆಂಗಳೂರಿನಲ್ಲಿ ಆಕಸ್ಮಿಕವಾಗಿ ನಡೆದಿದೆ. ನಮ್ಮವರೂ ಕ್ಷಮೆ ಕೇಳಿದ್ದಾರೆ. ಮುಂದೆ ಇಂತಹ ಘಟನೆಗಳು ನಡೆಯಬಾರದು’ ಎಂದರು.

ಜಾತಿ ಜನಗಣತಿ ಮರು ಸಮೀಕ್ಷೆ ಸಮರ್ಥನೆ: ‘ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಸಾಮಾಜಿಕ, ಆರ್ಥಿಕ ಮಾನದಂಡ ಇರಿಸಿಕೊಂಡು ಜಾತಿ ಜನಗಣತಿ ನಡೆಸಿದ್ದರು. ಆ ಮಾನದಂಡಗಳು ಹಾಗೆಯೇ ಇರಲಿವೆ. ಅವುಗಳ ಜತೆಗೆ ಹೊಸದಾಗಿ ಬಂದರೆ ಸೇರಿಸುತ್ತೇವೆ. ಜಾತಿ ಜನಗಣತಿ ನಡೆದ 10 ವರ್ಷಗಳಾಗಿದ್ದರಿಂದ ಎಸ್‌ಸಿ, ಎಸ್‌ಟಿ, ಒಬಿಸಿ ಪಟ್ಟಿಗಳಲ್ಲಿ ಸಾಕಷ್ಟು ವ್ಯತ್ಯಾಸವಾಗಿದೆ. ಯಾವೆಲ್ಲ ಸಮುದಾಯಗಳಲ್ಲಿ ಏನೆಲ್ಲಾ ವ್ಯತ್ಯಾಸವಾಗಿದೆ, ಎಷ್ಟು ಜನ ಸಂಖ್ಯೆ ಬಂದಿದೆ ಎಂಬುದನ್ನು ಅದನ್ನು ನೋಡಿ, ಸೇರ್ಪಡೆ ಮಾಡುವಂತೆ ಮರು ಸಮೀಕ್ಷೆಗೆ ಸೂಚಿಸಲಾಗಿದೆ. ಬೇರೆ ಏನು ಇಲ್ಲ’ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಶಾಸಕರ ನಡುವೆ ಒಡಕು ತರಲು ಇಡಿ ದಾಳಿ: ‘ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಮೊದಲಿನಿಂದಲೂ ಕಾಂಗ್ರೆಸ್ ಮೇಲೆ ಸಿಟ್ಟಿದೆ. ಕಾಂಗ್ರೆಸ್ ಶಾಸಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ, ನಮ್ಮ ಪಕ್ಷದ ಶಾಸಕರನ್ನು ಒಡೆಯಲು ಸಂಚು ಮಾಡುತ್ತಿದ್ದಾರೆ. ಒಂದು ವರ್ಷದ ಹಿಂದಿನ ಚುನಾವಣೆಯಲ್ಲಿ ನಡೆದಿದ್ದನ್ನು ಈಗ ತೆಗೆದು ಕಿರುಕುಳ ಕೊಡುವುದು ಸರಿಯಲ್ಲ’ ಎಂದು ಬಳ್ಳಾರಿಯಲ್ಲಿ ನಡೆದ ಇ.ಡಿ. ದಾಳಿಗೆ ಮಲ್ಲಿಕಾರ್ಜು ಖರ್ಗೆ ಅವರು ಪ್ರತಿಕ್ರಿಯೆ ನೀಡಿದರು.

ಚುನಾವಣೆಯಲ್ಲಿ ಎಲ್ಲ ಪಕ್ಷದವರ ಸಾವಿರಾರು ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ. ಆ ಹಣ ಎಲ್ಲಿಂದ ಬಂತು? ಯಾರದು ಎಂಬುದು ಇಲ್ಲಿಯವರೆಗೂ ಹೊರಗೆ ಬಂದಿಲ್ಲ. ಒಂದೇ ಪಕ್ಷವನ್ನು ಗುರಿಯಾಗಿಸಿಕೊಂಡು ತೊಂದರೆ ಕೊಟ್ಟರೆ ಆ ಪಕ್ಷದಲ್ಲಿ ಬೇಧಭಾವ ಉಂಟಾಗಿ ಎದುರಿನವರಿಗೆ ಅನುಕೂಲ ಆಗುತ್ತದೆ ಎಂಬ ಲೆಕ್ಕಚಾರವಿದೆ. ಅವರು ಎಷ್ಟೇ ಕಿರುಕುಳ ಕೊಟ್ಟರೂ ನಾವು ಒಗ್ಗಟ್ಟಾಗಿ ಇದ್ದೇವೆ’ ಎಂದು ಹೇಳಿದರು.

‘ಸ್ವಾತಂತ್ರ್ಯದ ಬಳಿಕ ಪ್ರಧಾನಿ ಮೋದಿ ಹೊರತುಪಡಿಸಿ ಯಾವುದೇ ಪ್ರಧಾನಿಯೂ ಲೋಕಸಭೆಯ ಉಪಾಧ್ಯಕ್ಷರ ಹುದ್ದೆಯನ್ನು ಖಾಲಿ ಇರಿಸಿರಲಿಲ್ಲ. ಮೋದಿಯ 3ನೇ ಅವಧಿಯಲ್ಲಿಯೂ ಉಪಾಧ್ಯಕ್ಷರ ಹುದ್ದೆ ಖಾಲಿ ಇರಿಸಿರುವುದು ಪ್ರಜಾಪ್ರಭುತ್ವ ವಿರೋಧಿ, ಕಾನೂನುಬಾಹಿರ ನಡೆ’ ಎಂದು ಖಂಡಿಸಿದರು.

‘ಕಾಶ್ಮೀರ ಕಣಿವೆಯಲ್ಲಿ ರೈಲ್ವೆ ಸಂಪರ್ಕ ಜಾಲ ವಿಸ್ತರಿಸುವಲ್ಲಿ ಈ ಹಿಂದಿನ ಸರ್ಕಾರಗಳು ನೀಡಿದ್ದ ಕೊಡುಗೆಗಳನ್ನು ಸ್ಮರಿಸುವಲ್ಲಿ ಪ್ರಧಾನಿ ಮೋದಿ ಅವರು ವಿಫಲವಾಗಿದ್ದಾರೆ. ಕಣಿವೆ ರಾಜ್ಯದಲ್ಲಿ ರೈಲ್ವೆ ಯೋಜನೆಗಳನ್ನು ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಆರಂಭಿಸಿದರು. ಅಟಲ್ ಬಿಹಾರಿ ವಾಜಪೇಯಿ ಅವುಗಳನ್ನು ಇನ್ನಷ್ಟು ಮುಂದುವರಿಸಿಕೊಂಡು ಬಂದರು. ಡಾ.ಮನಮೋಹನ್‌ ಸಿಂಗ್ ನೇತೃತ್ವದ ಯುಪಿಎಸ್ ಸರ್ಕಾರ ತನ್ನ 10 ವರ್ಷಗಳ ಅವಧಿಯಲ್ಲಿ ಹೆಚ್ಚಿನ ಆದ್ಯತೆ ನೀಡಿತ್ತು. ಮನಮೋಹನ್‌ ಸಿಂಗ್, ಸೋನಿಯಾ ಗಾಂಧಿ, ನಾನು ಸೇರಿದಂತೆ ಹಲವರು ಕಾಶ್ಮೀರಕ್ಕೆ ತೆರಳಿ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿದ್ದೇವೆ’ ಎಂದು ಉದ್ಘಾಟನೆಗೆ ತೆರಳಿದ್ದು ಫೋಟೊಗಳನ್ನು ಮಾಧ್ಯಮಗಳಿಗೆ ಪ್ರದರ್ಶಿಸಿದರು.

‘ನಾನು ರೈಲ್ವೆ ಸಚಿವನಾಗಿದ್ದಾಗ ಕಾಶ್ಮೀರ ಮತ್ತು ಈಶಾನ್ಯ ಭಾಗದ ರಾಜ್ಯಗಳ ರೈಲ್ವೆ ಯೋಜನೆಗಳಿಗೆ ಸಾಕಷ್ಟು ಅನುದಾನ ಹಂಚಿಕೆ ಮಾಡಿದ್ದೆ. ಆದರೆ, ಮೋದಿ ಅವರು ನಾವು ಪ್ರಾರಂಭಿಸಿದ್ದ ಯೋಜನೆಗಳನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ. ಹಿಂದಿನ ಸರ್ಕಾರದ ಕೊಡುಗೆಗಳನ್ನೂ ಸ್ಮರಿಸುತ್ತಿಲ್ಲ’ ಎಂದರು.

‘ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 11 ವರ್ಷಗಳಲ್ಲಿ 36 ತಪ್ಪುಗಳನ್ನು ಮಾಡಿದೆ. ಮೋದಿ ಅವರಂತೆ ಪದೇ ಪದೇ ಸುಳ್ಳುಗಳನ್ನು ಹೇಳಿ, ಇಷ್ಟೊಂದು ತಪ್ಪುಗಳನ್ನು ಮಾಡಿ, ಜನರನ್ನು ದಾರಿ ತಪ್ಪಿಸಿ, ಯುವಕರನ್ನು ಮೋಸಗೊಳಿಸುವ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ. ನನ್ನ 65 ವರ್ಷಗಳ ರಾಜಕೀಯ ಮತ್ತು 55 ವರ್ಷಗಳ ಅಧಿಕಾರದಲ್ಲಿ ಅವರಂತಹ ಪ್ರಧಾನಿಯನ್ನು ಭೇಟಿಯಾಗಿಲ್ಲ. ತಾವು ಮಾಡಿದ್ದ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ, ಕ್ಷಮೆ ಸಹ ಯಾಚಿಸುವುದಿಲ್ಲ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.