ADVERTISEMENT

ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್ ‌ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 11:14 IST
Last Updated 17 ಆಗಸ್ಟ್ 2024, 11:14 IST
   

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲರ ಗೆಹಲೋತ್‌ ಅವರು ಅನುಮತಿ‌ ನೀಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು, ಕಾರ್ಯಕರ್ತರು ನಗರದಲ್ಲಿ ಶನಿವಾರ ತೀವ್ರ ಪ್ರತಿಭಟನೆ ನಡೆಸಿದರು.

ಶನಿವಾರ ಮಧ್ಯಾಹ್ನ 3.30ಕ್ಕೆ ನಗರದ ಜಗತ್ ವೃತ್ತದಲ್ಲಿ ಸೇರಿದ ಕಾಂಗ್ರೆಸ್ ನ ನೂರಾರು ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದರು. ಕೇಂದ್ರ ಸರ್ಕಾರ, ರಾಜ್ಯಪಾಲರ ವಿರುದ್ಧ ಘೋಷಣೆ ‌ಮೊಳಗಿಸಿದರು. ಟೈರ್ ಹಾಗೂ ರಾಜ್ಯಪಾಲರ ಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ‌ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಮುಖ್ಯ ಮಂತ್ರಿಗಳ ರಾಜಕೀಯ ಸಲಹೆಗಾರ ಬಿ.ಆರ್.ಪಾಟೀಲ, 'ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕಾಂಗ್ರೆಸ್ ‌ಸರ್ಕಾರದ ಏಳಿಗೆ ಸಹಿಸುತ್ತಿಲ್ಲ. ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳಲ್ಲಿ ಅಧಿಕಾರ ಕಸಿಯಲು ಯತ್ನಿಸುತ್ತಿದೆ. ರಾಜ್ಯಪಾಲರನ್ನು ಕೈಗೊಂಬೆ‌ ಮಾಡಿಕೊಂಡು ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ' ಎಂದು ಆರೋಪಿಸಿದರು.

ADVERTISEMENT

ಹಿಂದಿನ ಸರ್ಕಾರದ‌ ಅವಧಿಯಲ್ಲೂ ಇದೇ ರಾಜ್ಯಪಾಲರಿದ್ದರು. ಆಗ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಕುಮಾರಸ್ವಾಮಿ ಅವರ ವಿರುದ್ಧ ಆರೋಪಗಳ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಲಾಗಿತ್ತು. ಆಗ ಅನುಮತಿ‌ ನಿರಾಕರಿಸಿದ್ದ ರಾಜ್ಯಪಾಲರು ಈಗ ಕೇಂದ್ರದ ದಾಳವಾಗಿ ಸಿದ್ದರಾಮಯ್ಯ ವಿರುದ್ಧ ಕ್ರಮಕ್ಕೆ ಅನುಮತಿ ನೀಡಿದ್ದಾರೆ. ಇದು ಖಂಡನೀಯ. ಇದನ್ನು ನಾವು‌ ಖಂಡಿಸುತ್ತೇವೆ. ಈ ಸಂಬಂಧ ‌ಕಾನೂನು ಹೋರಾಟದ ಜೊತೆಗೆ ಬೀದಿ ಹೋರಾಟವನ್ನೂ ನಡೆಸುತ್ತೇವೆ ಎಂದು ಗುಡುಗಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ಶಾಸಕಿ‌ ಕನೀಜ್ ಫಾತೀಮಾ ಮಾತನಾಡಿದರು.

ಸಂಚಾರ ದಟ್ಟಣೆ: ಜಗತ್ ವೃತ್ತದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದರಿಂದ, ಜಗತ್ ವೃತ್ತ ಸಂಪರ್ಕಿಸುವ ತಿಮ್ಮಾಪುರಿ ಸರ್ಕಲ್‌ಮಾರ್ಗ, ಕೆಬಿಎನ್ ದರ್ಗಾ ‌ಮಾರ್ಗ, ಸೂಪರ್‌ಮಾರ್ಕೆಟ್ ಮಾರ್ಗ ಹಾಗೂ ಅಪ್ಪ‌ಕೆರೆಯ ಕಡೆಯ ಮಾರ್ಗದಲ್ಲಿ ಸಂಚಾರ ದಟ್ಟಣೆ ‌ಉಂಟಾಗಿ, ವಾಹನಗಳ ಸವಾರರು ‌ಪರದಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.