ಚಿತ್ತಾಪುರ: ‘ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕುಳಿತಿದ್ದ ಸಮಯದಲ್ಲಿ ಸ್ಥಳಿಯ ಪೊಲೀಸ್ ಅಧಿಕಾರಿಗಳು ಕಾನೂನು ಪ್ರಕಾರವೇ ಸೂಕ್ತ ರಕ್ಷಣೆ ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಯಾರೂ ಗೂಂಡಾಗಿರಿ ಮಾಡಿಲ್ಲ’ ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಹೇಳಿದರು.
ಪಟ್ಟಣದಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಾರಾಯಣಸ್ವಾಮಿ ಅವಹೇಳನ ಮಾಡಿದಾಗ ಕಾಂಗ್ರೆಸ್ ಕಾರ್ಯಕರ್ತರು ಸುಮ್ಮನೆ ಕೂಡಬೇಕಾ? ಕ್ಷಮೆ ಕೇಳುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದರೆ ಗೂಂಡಾಗಿರಿ ಹೇಗಾಗುತ್ತದೆ? ಕಾಂಗ್ರೆಸ್ ಕಾರ್ಯಕರ್ತರು ನಾರಾಯಣಸ್ವಾಮಿಯನ್ನು ಕೂಡಿ ಹಾಕಿಲ್ಲ. ಅವರು ಪ್ರತಿಭಟನೆಗೆ ಹೆದರಿ ಒಳಗೆ ಕುಳಿತಿರಬಹುದು. ಆಗ ಪೊಲೀಸರು ಅವರಿಗೆ ಭದ್ರತೆ ನೀಡಿ ಸುರಕ್ಷಿತವಾಗಿ ಕಳುಹಿಸಿದ್ದಾರೆ. ಅವರ ಕರ್ತವ್ಯ ಪ್ರಾಮಾಣಿಕವಾಗಿ ಮಾಡಿದ್ದಾರೆ’ ಎಂದು ಅವರು ಹೇಳಿದರು.
‘ಪ್ರಿಯಾಂಕ್ ಅವರು ನಿರಂತರವಾಗಿ ಅಧಿಕಾರದಲ್ಲಿರುವುದು ಬಿಜೆಪಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಎನಾದರೊಂದು ಸುಳ್ಳು ಹೇಳಿ ಕಳಂಕ ತರುವ ಷಡ್ಯಂತ್ರ ಬಿಜೆಪಿ ಮಾಡುತ್ತಿದೆ. ಮರಳು ಮಾಫಿಯಾ, ಲಿಕ್ಕರ್ ಮಾಫಿಯಾ, ಗೂಂಡಾಗಿರಿ ಮಾಡಿದ್ದಾರೆ ಎಂದು ಬಿಜೆಪಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪ್ರಿಯಾಂಕ್ ಅವರನ್ನು ನಾಲಾಯಕ್ ಎಂದು ಘೋಷಣೆ ಕೂಗಿದರೆ ಕಾರ್ಯಕರ್ತರು ಪ್ರತಿಭಟನೆ ನಡೆಸದೆ ಸುಮ್ಮನಿರಬೇಕಾ’ ಎಂದು ಪ್ರಶ್ನಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣಾ ಸಾಲಿ ಅವರು ಮಾತನಾಡಿ, ‘ಪೊಲೀಸರು ಕಾಂಗ್ರೆಸ್ ಕೈಗೊಂಬೆಯಾಗಿದ್ದಾರೆ ಎಂದು ಬಿಜೆಪಿ ಮಾಡಿದ ಆರೋಪ ಶುದ್ಧ ತಪ್ಪು. ಕಾಂಗ್ರೆಸ್ ಅನ್ನ ಉಂಡ ಅಂಬಾರಾಯ ಅಷ್ಠಗಿ ಮತ್ತು ಛಲವಾದಿ ನಾರಾಯಣಸ್ವಾಮಿ ಬಿಜೆಪಿಗೆ ಹೋಗಿ ಖರ್ಗೆ ಬಗ್ಗೆ ವ್ಯಕ್ತಿಗತವಾಗಿ ಮಾತನಾಡಿ ವಿರೋಧಿಸುತ್ತಿರುವುದು ಸರಿಯಲ್ಲ’ ಎಂದರು.
ಜಿ.ಪಂ ಮಾಜಿ ಸದಸ್ಯ ಶಿವರುದ್ರ ಭೀಣಿ ಮಾತನಾಡಿದರು. ಸುದ್ಧಿಗೋಷ್ಠಿಯಲ್ಲಿ ಮುಕ್ತಾರ್ ಪಟೇಲ್, ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಸೂರ್ಯಕಾಂತ ಪೂಜಾರಿ, ಮಲ್ಲಿನಾಥ ಭಾಗೋಡಿ ದಿಗ್ಗಾಂವ, ಸಿದ್ಧಣಗೌಡ ಆರ್.ಡಿ, ಓಂಕಾರ ರೇಷ್ಮಿ, ಶೇಖ್ ಬಬ್ಲು, ಸಂಜಯ ಬುಳಕರ್, ನಾಗೇಶ ಹಲಿಗಿ, ವಿನ್ನುಕುಮಾರ ಇದ್ದರು.
ಕ್ಷಮೆ ಕೇಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೈಯಲ್ಲಿ ತಲವಾರ ಬಡಿಗೆ ಲಾಠಿ ಕಲ್ಲು ಹಿಡಿದುಕೊಂಡಿರಲಿಲ್ಲ. ಗೂಂಡಾಗಿರಿ ಹೇಗಾಗುತ್ತದೆ?ಮುಕ್ತಾರ್ ಪಟೇಲ್ ತಾಲ್ಲೂಕು ಅಧ್ಯಕ್ಷ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.