ADVERTISEMENT

ಸಂವಿಧಾನ ಸಮರ್ಪಣಾ ದಿನ ಆಚರಣೆ

ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ವಿವಿಧ ಸಂಘಟನೆಗಳಿಂದ ಗೌರವ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 6:59 IST
Last Updated 27 ನವೆಂಬರ್ 2020, 6:59 IST
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಂಗಾಮಿ ಕುಲಪತಿ ಪ್ರೊ.ಎನ್. ನಾಗರಾಜು ಅಂಬೇಡ್ಕರ್ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಪ್ರೊ.ಮುಷ್ತಾಕ್ ಅಹ್ಮದ್ ಐ ಪಟೇಲ್, ಪ್ರೊ.ಅಪ್ಪಗೆರೆ ಸೋಮಶೇಖರ್ ಇದ್ದರು
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಂಗಾಮಿ ಕುಲಪತಿ ಪ್ರೊ.ಎನ್. ನಾಗರಾಜು ಅಂಬೇಡ್ಕರ್ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಪ್ರೊ.ಮುಷ್ತಾಕ್ ಅಹ್ಮದ್ ಐ ಪಟೇಲ್, ಪ್ರೊ.ಅಪ್ಪಗೆರೆ ಸೋಮಶೇಖರ್ ಇದ್ದರು   

ಕಲಬುರ್ಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಗುಲಬರ್ಗಾ ವಿಶ್ವವಿದ್ಯಾಲಯ ಮತ್ತು ವಿವಿಧ ಸಂಘಟನೆಗಳ ವತಿಯಿಂದ ಗುರುವಾರ ನಗರದಲ್ಲಿ ಸಂವಿಧಾನ ದಿನ ಆಚರಿಸಲಾಯಿತು.

ಕರ್ನಾಟಕ ಕೇಂದ್ರೀಯವಿ.ವಿ: ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿದಿಕ್ಸೂಚಿ ಭಾಷಣ ಮಾಡಿದ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ವಲೇರಿಯನ್ ರೋಡ್ರಿಗಸ್, ‘ಭಾರತ ಸಂವಿಧಾನ ರಚನೆಯ ಸ್ವರೂಪವೇ ಎಲ್ಲರನ್ನೂ ಒಳ್ಳಗೊಳ್ಳುವ ಮೌಲ್ಯವನ್ನು ಆಧರಿಸಿದೆ. ಇದು ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದೆ. ಸಂವಿಧಾನ ಜನರ ಆಚಾರ, ವಿಚಾರ, ಸಂಸ್ಕೃತಿ ಅಡ್ಡಿಪಡಿಸುವುದಿಲ್ಲ’ ಎಂದರು.

ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮುದಾಯಿಕ ಬದುಕಿಗೆ ಧಕ್ಕೆಯಾಗದ ಹಾಗೆ ನಿರ್ವಹಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಎಲ್ಲರಿಗೂ ನೀಡಿದೆ.ಕಾಲದ ಅಗತ್ಯಕ್ಕೆ ತಕ್ಕಂತೆ ತಿದ್ದುಪಡಿ ಮಾಡಿಕೊಳ್ಳುವ ಅವಕಾಶವನ್ನು ಸಂವಿಧಾನ ಒಳಗೊಂಡಿದೆ. ದೇಶದ ಪ್ರಜಾಪ್ರಭುತ್ವ ನಿಂತಿರುವುದು ಸಾಂವಿಧಾನಿಕ ಚೌಕಟ್ಟಿನಲ್ಲಿ ಎಂಬುದನ್ನು ಗ್ರಹಿಸಬೇಕಿದೆ’ ಎಂದರು.

ADVERTISEMENT

ವರ್ತಮಾನದಲ್ಲಿ ನಮ್ಮ ಸಂವಿಧಾನ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಅವುಗಳಲ್ಲಿ ಬಹಳ ಮುಖ್ಯವಾದ ಸಮಸ್ಯೆ ಒಟ್ಟು ಪ್ರಜಾಪ್ರಭುತ್ವವನ್ನು ಚುನಾವಣೆಗಳಿಗೆ, ರಾಜಕೀಯ ಪಕ್ಷಗಳ ಚಟುವಟಿಗೆಳಿಗೆ ಸೀಮಿತಗೊಳಿಸಿ ವಿಶ್ಲೇಷಿಸುತ್ತಿರುವುದು ಬಹಳ ಅಪಾಯಕಾರಿ ಬೆಳವಣಿಗೆ. ಸಂವಿಧಾನದ ಮೂಲಕ ಲಭಿಸಿರುವ ಪ್ರಜಾಪ್ರಭುತ್ವ ವ್ಯಕ್ತಿ, ಪಕ್ಷ, ಧರ್ಮ, ಜಾತಿ ಎಲ್ಲವನ್ನೂ ಮೀರಿದ ಮೌಲ್ಯವಾಗಿದೆ ಎಂಬ ಅರಿವು ಯುವತಲೆಮಾರಿಗೆ ದಾಟಿಸುವ ಕೆಲಸವನ್ನು ವಿಶ್ವವಿದ್ಯಾಲಯಗಳು ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಪ್ರೊ. ಬಂಜಗೆರೆ ಜಯಪ್ರಕಾಶ್ ಮಾತನಾಡಿ, ‘ಜಗತ್ತಿನ ಯಾವ ದೇಶದ ಸಂವಿಧಾನ ಕರ್ತೃಗಳು ಎದುರಿಸದ ಒಂದು ಸಮಸ್ಯೆಯನ್ನು ನಮ್ಮ ದೇಶದ ಸಂವಿಧಾನ ರಚನಾಕಾರರು ಎದುರಿಸಿದರು. ಇಲ್ಲಿನ ಜಾತಿ, ಲಿಂಗಾಧಾರಿತ ಮತ್ತು ಧಾರ್ಮಿಕ ತಾರತಮ್ಯವನ್ನು ಕಾನೂನಿನ ಮೂಲಕ ಮೀರುವ ಸವಾಲು ಇವುಗಳನ್ನು ನಿವಾರಿಸಿ ಸಮಾನತೆ ಮತ್ತು ಸಹೋದರತ್ವ ಸ್ಥಾಪಿಸದ ಹೊರತು ನಾವು ಒಂದು ದೇಶವಾಗಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬ ಅರಿವು ಡಾ. ಅಂಬೇಡ್ಕರ್ ಅವರಿಗೆ ಸ್ಪಷ್ಟವಾಗಿ ಇತ್ತು. ಆ ಕಾರಣಕ್ಕೆ ಭಾರತ ಸಂವಿಧಾನ ಮಹಿಳೆ, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವ ಒಂದು ಕಾರ್ಯಸೂಚಿಯಾಗಿದೆ’ ಎಂದರು.

ವಿ.ವಿ.ಯ ಹಂಗಾಮಿ ಕುಲಪತಿ ಪ್ರೊ.ಎನ್. ನಾಗರಾಜು, ಕಲಸಚಿವ ಪ್ರೊ. ಮುಷ್ತಾಕ್ ಅಹ್ಮದ್ ಐ ಪಟೇಲ್ ಮತ್ತು ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ. ಅಪ್ಪಗೆರೆ ಸೋಮಶೇಖರ್ ಮತ್ತು ಪ್ರೊ. ರೇಮ್ಯ ಉಪಸ್ಥಿತರಿದ್ದರು.

ಗುಲಬರ್ಗಾ ವಿಶ್ವವಿದ್ಯಾಲಯ: ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನವಾಗಿ ರಚನೆಯಾದ ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಉದ್ಘಾಟಿಸಿದರು.

ಗುಲಬರ್ಗಾ ವಿ.ವಿ. ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ, ಕುಲಸಚಿವ ಪ್ರೊ.ಸಿ. ಸೋಮಶೇಖರ್, ಮೌಲ್ಯಮಾಪನ ಕುಲಸಚಿವ ಪ‍್ರೊ. ಸಂಜೀವಕುಮಾರ ಎಂ. ಇದ್ದರು.

ರವಿವರ್ಮ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ: ನಗರದ ಕಲಾಮಂಡಳದಲ್ಲಿ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ‘ಕವಿಗೋಷ್ಠಿ ಹಾಗೂ ಸಂಗೀತ ಸುಧೆ’ ಕಾರ್ಯಕ್ರಮವನ್ನುಏರ್ಪಡಿಸಲಾಗಿತ್ತು.

ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಮಾತನಾಡಿ, ‘ದೇಶದ ಸಮಗ್ರ ವಿಕಾಸಕ್ಕೆ ರೂಪಿತಗೊಂಡ ಭಾರತೀಯ ಸಂವಿಧಾನದ ಆಶಯಗಳನ್ನು ಜನ ಸಮಾನ್ಯರಿಗೆ ತಲುಪಲಿ’ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ರಮೇಶ ಲಂಡನಕರ್ ಮಾತನಾಡಿ, ‘ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಬೇಕಾದರೆ ನಮ್ಮ ಸಂವಿಧಾನವೇ ಕಾರಣ. ಸ್ವಾತಂತ್ರ್ಯ ಸಮಾನತೆ ಹಾಗೂ ಭ್ರಾತೃತ್ವದ ತತ್ವಗಳು ಅನುಮಾನಾಸ್ಪದವಾಗಿ ಕಾಡುತ್ತಿವೆ. ಇಂದಿಗೂ ಸಂವಿಧಾನದ ಆಶಯಗಳ ಅನುಷ್ಠಾನಗೊಳಿಸದೇ ಬದಲಾವಣೆಯ ಹುನ್ನಾರದ ಮಾತುಗಳು ಕೇಳುತ್ತಿದ್ದೇವೆ. ಇದು ಅಪಾಯಕಾರಿ ಸಂಗತಿ’ ಎಂದು ಕಳವಳ ವ್ಯಕ್ತಪಡಿಸಿದರು.

ವೈದ್ಯ ಡಾ.ಎಸ್.ಎಸ್. ಗುಬ್ಬಿ, ಭೀಮ ಆರ್ಮಿ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಸ್. ತವಡೆ, ಸಾಹಿತಿ ಶಿವಶಾಂತ ರೆಡ್ಡಿ ಮುನ್ನೋಳ್ಳಿ ವೇದಿಕೆಯಲ್ಲಿದ್ದರು. ಸಂಘದ ಕಾರ್ಯದರ್ಶಿ ಶಿವಶಂಕರ ಬಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯಮಂತ್ರಿ ಪದಕ ಪಡೆದ ಪಿಎಸ್ಐ ಭಾರತಿಬಾಯಿ ಧನ್ನಿ, ಡಾ.ದೀಪಕ ಸುಖೆ, ಕೊರೊನಾ ವಾರಿಯರ್‌ಗಳಾಗಿ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರಾದ ಭಾರತಿಬಾಯಿ ಕಿರಣಗಿ, ರೇಖಾ ಎಸ್.ಬೀಳಲಕರ ಅವರನ್ನು ಸೇವಾ ರತ್ನ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.