ADVERTISEMENT

ಸಂವಿಧಾನವೇ ಭಾರತದ ಧರ್ಮಗ್ರಂಥ: ಬಿ.ಎಂ.ಪುಟ್ಟಯ್ಯ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 12:37 IST
Last Updated 19 ಅಕ್ಟೋಬರ್ 2018, 12:37 IST
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಎಚ್.ಟಿ.ಪೋತೆ ಮಾತನಾಡಿದರು
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಎಚ್.ಟಿ.ಪೋತೆ ಮಾತನಾಡಿದರು   

ಕಲಬುರ್ಗಿ: ‘ನಮ್ಮ ದೇಶದ ಸಂವಿಧಾನ ಪ್ರಜಾ ಧರ್ಮಗ್ರಂಥವಾಗಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಬಿ.ಎಂ.ಪುಟ್ಟಯ್ಯ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಈಚೆಗೆ ಜರುಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತ ವಿಶಿಷ್ಟ ದೇಶ. ಅನೇಕ ಸಂತರು-ಶರಣರು ಆಗಿ ಹೋಗಿದ್ದಾರೆ. ಆದರೆ, ಇಲ್ಲಿಯ ಜಾತಿ ಪದ್ಧತಿಯ ಕಾರಣಕ್ಕಾಗಿ ಜನರ ಜೀವನ ಬದಲಾಗದೆ ಇರುವುದು ವಿಷಾದದ ಸಂಗತಿ. ಪ್ರಜಾಪ್ರಭುತ್ವವಾದಿ ಸಂವಿಧಾನಕ್ಕೆ ಮೂರು ಅಲಿಖಿತ ಸಂವಿಧಾನಗಳು ಅಡ್ಡಿಯಾಗಿವೆ. ಅಲಿಖಿತ ಸಂವಿಧಾನವೆಂದರೆ ಜಾತಿ, ಧರ್ಮ ಮತ್ತು ಕಾರ್ಪೋರೇಟ್ ವಲಯ. ಈ ಮೂರು ಅಲಿಖಿತ ಸಂವಿಧಾನಗಳು ಆಳುವ ವರ್ಗದ ಹೆಗಲೇರಿ ಜಾತಿ ಅಸಮಾನತೆ ಬಡತನ, ಕೋಮುದಳ್ಳುರಿಗಳಿಗೆ ಕಾರಣವಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಸರ್ವರಿಗೂ ಸಮಪಾಲು, ಸಮಬಾಳು ಸಿಗಬೇಕಾದರೆ ಅಂಬೇಡ್ಕರ್‌ರ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು. ಅಂದಾಗ ಮಾತ್ರ ದಲಿತರು, ಮಹಿಳೆಯರು, ಶೋಷಿತರು, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರ ಬದುಕನ್ನು ಬದಲಾಯಿಸಲು ಸಾಧ್ಯವಾಗುತ್ತದೆ’ ಎಂದರು.

‘ಬಹಳಷ್ಟು ಜನ ಸಂವಿಧಾನವೆಂದರೆ ಮೀಸಲಾತಿ, ಮೀಸಲಾತಿ ಎಂದರೆ ಸಂವಿಧಾನ ಎಂದು ಭಾವಿಸಿದ್ದಾರೆ. ಮೀಸಲಾತಿ ಎಂದರೆ ಕೇವಲ ದಲಿತರಿಗೆಂದು ವಾದಿಸುತ್ತಾರೆ. ಆದರೆ, ಈ ದೇಶದಲ್ಲಿ ಹಿಂದುಳಿದವರು, ಮಹಿಳೆಯರು, ನಿವೃತ್ತ ಯೋಧರು ಕೂಡ ಮೀಸಲಾತಿ ಪಡೆಯುತ್ತಿದ್ದಾರೆ. ಇದಲ್ಲದೇ ಪ್ರಾದೇಶಿಕ ಆಧಾರದ ನೆಲೆಯಲ್ಲಿ ಅನೇಕ ಪ್ರದೇಶಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಹಿಂದುಳಿದವರು ಶೇ 32, ಇತರರು ಶೇ 50 ಮೀಸಲಾತಿ ಪಡೆಯುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಕೇವಲ ಶೇ 18 ಮೀಸಲಾತಿ ಪಡೆಯುತ್ತಿದ್ದರೂ ಆರೋಪಕ್ಕೆ ಗುರಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ’ ಎಂದು ಹೇಳಿದರು.

ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮಾತನಾಡಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ.ರಮೇಶ ರಾಠೋಡ, ಉರ್ದು ಮತ್ತು ಪರ್ಶಿಯನ್ ವಿಭಾಗದ ಮುಖ್ಯಸ್ಥ ಪ್ರೊ.ಅಬ್ದುಲ್ ರಬ್ ಉಸ್ತಾದ ಇದ್ದರು.

ಕನ್ನಡ ಅಧ್ಯಯನ ಸಂಸ್ಥೆಯ ಡಾ. ಎಂ.ಬಿ.ಕಟ್ಟಿ ಸ್ವಾಗತಿಸಿದರು. ಡಾ. ಶಿವಗಂಗಾ ಬಿಲಗುಂದಿ ನಿರೂಪಿಸಿ, ಪೀರಪ್ಪ ಸಜ್ಜನ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.