ಜೇವರ್ಗಿ: ತಾಲ್ಲೂಕಿನ ಮುದಬಾಳ.ಬಿ ಗ್ರಾಮದ ನಲ್ಲಿಗಳಲ್ಲಿ ಮಣ್ಣುಮಿಶ್ರಿತ ನೀರು ಸರಬರಾಜು ಆಗುತ್ತಿರುವುದರಿಂದ ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವಂತಾಗಿದೆ.
ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಬಡ ಕೃಷಿ ಕೂಲಿ ಕಾರ್ಮಿಕ ಜನರೇ ಹೆಚ್ಚು ವಾಸ ಮಾಡುತ್ತಿರುವ ಈ ಗ್ರಾಮದಲ್ಲಿ ಜನರು ಕೊಳಚೆ ನೀರಿನಿಂದ ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ಹಾಗೂ ವಿವಿಧ ಖಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆಗಳು ಸೇರುವಂತಾಗಿದೆ.
ತಾಲ್ಲೂಕಿನ ಗಂವ್ಹಾರ ಗ್ರಾ.ಪಂ ವ್ಯಾಪ್ತಿಯ ಮುದಬಾಳ.ಬಿ ಗ್ರಾಮದಲ್ಲಿ 400 ಮನೆಗಳಿದ್ದು, 2,000ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. 3 ಜನ ಗ್ರಾ.ಪಂ ಸದಸ್ಯರಿರುವ ಗ್ರಾಮದಲ್ಲಿ ಚರಂಡಿಗಳೇ ನಿರ್ಮಾಣ ಮಾಡಿಲ್ಲ. ಮನೆಗಳಿಂದ ಹೊರಬರುವ ಕೊಚ್ಚೆ ನೀರು ರಸ್ತೆಗಳಲ್ಲಿ ಹರಿದು ದುರ್ವಾಸನೆ ಬಿರುತ್ತಿದೆ. ಇದರಿಂದ ಗ್ರಾಮದ ಮಹಿಳೆಯರು, ಮಕ್ಕಳು ಜ್ವರಗಳಿಂದ ನರುಳುವಂತಾಗಿದೆ.
ಶುದ್ದ ಕುಡಿಯುವ ನೀರಿನ ಘಟಕವಿಲ್ಲದೆ ಗ್ರಾಮಸ್ಥರು ಮಣ್ಣು ಮಿಶ್ರಿತ ನೀರು ಕುಡಿದು ನಾನಾ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ. ಗ್ರಾಮದ ಹೊರವಲಯದ ಹಳ್ಳದ ಹತ್ತಿರದ ತೆರೆದ ಬಾವಿಯಿಂದ ಗ್ರಾಮಕ್ಕೆ ನಿತ್ಯ ನೀರು ಸರಬರಾಜು ಮಾಡಲಾಗುತ್ತಿದ್ದು, ಕಳೆದ ಐದಾರು ದಿನಗಳಿಂದ ಬಾವಿಗೆ ಹಳ್ಳದ ನೀರು ಸೇರಿ ಈ ಪರಿಸ್ಥಿತಿ ಎದುರಾಗಿದೆ.
ಗ್ರಾಮದ ಜನರು ನಿತ್ಯ ಸ್ನಾನ, ಬಟ್ಟೆ ತೊಳೆಯಲು ಮಳೆ ನೀರು ಬಳಸುತ್ತಿದ್ದಾರೆ. ಮಳೆ ಬಂದಾಗ ಕೊಡ, ಬ್ಯಾರೆಲ್ ಗಳಲ್ಲಿ ನೀರು ತುಂಬಿಟ್ಟುಕೊಳ್ಳುವ ಪರಿಸ್ಥಿತಿ ಗ್ರಾಮಸ್ಥರಿಗೆ ಎದುರಾಗಿದೆ.
ಗ್ರಾಮದಲ್ಲಿರುವ ಒಂದೇ ಒಂದು ಕೊಳವೆ ಬಾವಿಯಿಂದ ಕುಡಿಯಲು ನೀರು ತರಲಾಗುತ್ತಿದೆ.
ಅನೇಕ ಬಾರಿ ಗ್ರಾ.ಪಂ ಅಧಿಕಾರಿಗಳಿಗೆ ಮೌಖಿಕ ಮನವಿ ಸಲ್ಲಿಸಿ ಶುದ್ದ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿದ್ದರೂ ಗ್ರಾ.ಪಂ ಆಡಳಿತ ಕ್ಯಾರೇ ಎನ್ನುತ್ತಿಲ್ಲ. ಗ್ರಾಮದಲ್ಲಿ ಅಭಿವೃದ್ದಿ ಶೂನ್ಯವಾಗಿದೆ. ಗ್ರಾಮದಲ್ಲಿರುವ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಇಲ್ಲದೇ ಸಾಕಷ್ಟು ತೊಂದರೆಯಾಗಿದೆ.
‘ಚುನಾವಣೆ ಸಮಯದಲ್ಲಿ ಮತಯಾಚನೆಗೆ ಬರುವ ಜನಪ್ರತಿನಿಧಿಗಳು ನಂತರ ಗ್ರಾಮದ ಸಮಸ್ಯೆ ಬಗ್ಗೆ ಕಿಂಚಿತ್ತೂ ಯೋಚಿಸುವುದಿಲ್ಲ. ಗ್ರಾ.ಪಂ ಪಿಡಿಒ ಅವರ ಇಚ್ಚಾಶಕ್ತಿಯ ಕೊರತೆಯಿಂದ ಗ್ರಾಮದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚು ಉಲ್ಬಣಗೊಳ್ಳುತ್ತಿದೆ. ಈ ಕುರಿತು ಶೀಘ್ರ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾ.ಪಂ ಅಧಿಕಾರಿಗಳು ಕಂದಾಯ ವಸೂಲಿಗೆ ಮಾತ್ರ ಬರುತ್ತಾರೆ. ಗ್ರಾಮದಲ್ಲಿ ಚರಂಡಿ ರಸ್ತೆ ಶುದ್ದ ಕುಡಿಯುವ ನೀರು ಮಹಿಳಾ ಶೌಚಾಲಯ ವ್ಯವಸ್ಥೆಯನ್ನು ಸರಿಪಡಿಸುತ್ತಿಲ್ಲ. ಅನೇಕ ಬಾರಿ ಗ್ರಾ.ಪಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲಪರಶುರಾಮ, ಗ್ರಾಮಸ್ಥ
ಮಣ್ಣುಮಿಶ್ರಿತ ನೀರು ಸರಬರಾಜು ಸ್ಥಗಿತಗೊಳಿಸಿ ಬಾವಿಯ ಹೂಳು ತೆಗೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೂಡಲೇ ಗ್ರಾಮಸ್ಥರಿಗೆ ಶುದ್ದ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು.ಮಹಿಬೂಬ ಪಿಡಿಒ ಗಂವ್ಹಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.