ADVERTISEMENT

ಕಲಬುರಗಿ: ಇಬ್ಬರು ಅಂತರರಾಜ್ಯ ಕಳ್ಳರ ಸೆರೆ

ಗೂಗಲ್‌ ಮ್ಯಾಪ್‌ನಲ್ಲಿ ಸೋಲಾರ್ ಪ್ಲಾಂಟ್‌ ಪತ್ತೆ ಮಾಡಿ ತಾಮ್ರದ ಕೇಬಲ್ ವೈರ್ ಕದ್ದು ಮಾರಾಟ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 14:13 IST
Last Updated 10 ಮಾರ್ಚ್ 2025, 14:13 IST
<div class="paragraphs"><p>ಕಲಬುರಗಿಯಲ್ಲಿ ತಾಮ್ರದ ಕೇಬಲ್‌ ವೈರ್ ಕದಿಯುತ್ತಿದ್ದ ಆರೋಪಿಗಳ ಬಂಧನದಿಂದ ವಶಕ್ಕೆ ಪಡೆಯಲಾದ ಸ್ವತ್ತುಗಳನ್ನು ಪ್ರದರ್ಶಿಸಿದರು.&nbsp;ಈ ವೇಳೆ ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣವರ, ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಚಿತ್ತಾಪುರ ಪಿಐ ಚಂದ್ರಶೇಖರ ತಿಗಡಿ, ವಾಡಿ ಪಿಎಸ್‌ಐ ತಿರುಮಲೇಶ ಸೇರಿ ಸಿಬ್ಬಂದಿ ಉಪಸ್ಥಿತರಿದ್ದರು&nbsp;</p></div>

ಕಲಬುರಗಿಯಲ್ಲಿ ತಾಮ್ರದ ಕೇಬಲ್‌ ವೈರ್ ಕದಿಯುತ್ತಿದ್ದ ಆರೋಪಿಗಳ ಬಂಧನದಿಂದ ವಶಕ್ಕೆ ಪಡೆಯಲಾದ ಸ್ವತ್ತುಗಳನ್ನು ಪ್ರದರ್ಶಿಸಿದರು. ಈ ವೇಳೆ ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣವರ, ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಚಿತ್ತಾಪುರ ಪಿಐ ಚಂದ್ರಶೇಖರ ತಿಗಡಿ, ವಾಡಿ ಪಿಎಸ್‌ಐ ತಿರುಮಲೇಶ ಸೇರಿ ಸಿಬ್ಬಂದಿ ಉಪಸ್ಥಿತರಿದ್ದರು 

   

   ಪ್ರಜಾವಾಣಿ ಚಿತ್ರ

ಕಲಬುರಗಿ: ‘ಸೋಲಾರ್ ಪ್ಲಾಂಟ್‌ಗಳಲ್ಲಿನ ತಾಮ್ರದ ಕೇಬಲ್‌ ವೈರ್ ಕದ್ದು ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಕಳ್ಳರನ್ನು ಬಂಧಿಸಿ, ಅವರಿಂದ ₹6.06 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು.

ADVERTISEMENT

‘ತೆಲಂಗಾಣದ ವನಪರ್ತಿ ಜಿಲ್ಲೆಯ ಆತ್ಮಕೂರ ಪಟ್ಟಣದ ಪೋಲಾ ನಾಗೇಶ (35) ಮತ್ತು ರಮೇಶ ಬಾಲಕೃಷ್ಣ (30) ಬಂಧಿತ ಆರೋಪಿಗಳು. ಕೃತ್ಯದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಬೇಕಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘2024ರ ಡಿಸೆಂಬರ್ 14ರಂದು ನಾಲವಾರದಲ್ಲಿನ ಅದಾನಿ ಸೋಲಾರ್ ಪ್ರೈವೇಟ್ ಲಿಮಿಟೆಡ್ ಸೋಲಾರ್ ಪ್ಲಾಂಟ್‌ನಲ್ಲಿ ₹2.56 ಲಕ್ಷ ಮೌಲ್ಯದ 7,000 ಮೀಟರ್ ಉದ್ದದ ತಾಮ್ರದ ಕೇಬಲ್ ವೈರ್ ಕಳುವಾಗಿತ್ತು. ಈ ಬಗ್ಗೆ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿವೈಎಸ್‌ಪಿ ಶಂಕರಗೌಡ ಪಾಟೀಲ ನೇತೃತ್ವದ ತನಿಖಾ ತಂಡ, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದರು.

‘ಗೋಗಲ್ ಮ್ಯಾಪ್‌ನಲ್ಲಿ ಸೋಲಾರ್ ಪ್ಲಾಂಟ್‌ಗಳನ್ನು ಪತ್ತೆ ಮಾಡುತ್ತಿದ್ದ ಆರೋಪಿಗಳು, ಎರಡ್ಮೂರು ಬಾರಿ ಪ್ಲಾಂಟ್‌ಗಳಿಗೆ ಭೇಟಿ ನೀಡುತ್ತಿದ್ದರು. ಸುತ್ತಲಿನ ಚಲನವಲನ ಗಮನಿಸಿ, ರಾತ್ರಿ ವೇಳೆ ತಾಮ್ರದ ಕೇಬಲ್‌ ವೈರ್ ಕಳವು ಮಾಡುತ್ತಿದ್ದರು. ದೂರದ ನಿರ್ಜನ ಪ್ರದೇಶಕ್ಕೆ ತಾಮ್ರದ ಕೇಬಲ್ ಒಯ್ದು, ವೈರ್‌ ಮೇಲ್ಬಾಗದ ಪ್ಲಾಸ್ಟಿಕ್ ಕವರ್ ಸುಟ್ಟು ತೆಲಂಗಾಣಕ್ಕೆ ಸಾಗಿಸಿ ಅಲ್ಲಿಯೇ ಮಾರುತ್ತಿದ್ದರು’ ಎಂದು ಮಾಹಿತಿ ನೀಡಿದರು.

‘ಸೇಡಂ ತಾಲ್ಲೂಕಿನ ಕಲ್ಲಕಂಬ ಸಮೀಪದ ಸೋಲಾರ್ ಪ್ಲಾಂಟ್‌ನಲ್ಲಿಯೂ 2,000 ಮೀಟರ್ ತಾಮ್ರದ ಕೇಬಲ್ ವೈರ್ ಕಳುವಾಗಿದ್ದು ಗೊತ್ತಾಯಿತು. ಕರ್ನಾಟಕ ಮತ್ತು ತೆಲಂಗಾಣದ ನಂಬರ್‌ ಪ್ಲೆಟ್‌ ಹೊಂದಿದ್ದ ಮಿನಿ ಅಶೋಕ್ ಲೇಲ್ಯಾಂಡ್ ವಾಹನವೊಂದು ತೆಲಂಗಾಣ– ಕರ್ನಾಟಕ ಗಡಿ ಪ್ರದೇಶದಲ್ಲಿ ಅನುಮಾನಸ್ಪದವಾಗಿ ಓಡಾಡಿದ್ದು ಗಮನಕ್ಕೆ ಬಂದಿತ್ತು’ ಎಂದರು.

‘ಕಳ್ಳತನ ಕೃತ್ಯ ನಡೆದ ದಿನಗಳಂದು ಅನುಮಾನಾಸ್ಪದ ವಾಹನವು ಆಯಾ ಪ್ರದೇಶಗಳ ಸುತ್ತಲಿನಲ್ಲಿ ಓಡಾಡಿದ್ದು, ಸಿಸಿಟಿವಿ ಕ್ಯಾಮೆರಾದಿಂದ ಗೊತ್ತಾಯಿತು. ಒಂದು ಸಿಸಿಟಿವಿ ಕ್ಯಾಮೆರಾದಲ್ಲಿ ಕರ್ನಾಟಕ ನಂಬರ್, ದೂರದ ಇನ್ನೊಂದು ಚೆಕ್ ಪೋಸ್ಟ್‌ನಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ತೆಲಂಗಾಣದ ನಂಬರ್ ಪ್ಲೆಟ್ ಕಾಣಿಸಿತ್ತು. ಆ ವಾಹನದ ಮಾಲೀಕ ರಮೇಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಾಮ್ರದ ಕೇಬಲ್ ವೈರ್ ಕದ್ದಿದ್ದು ಗೊತ್ತಾಗಿದೆ’ ಎಂದು ಹೇಳಿದರು.

‘ರಾಜ್ಯದ ಹಲವು ಜಿಲ್ಲೆಗಳು, ತೆಲಂಗಾಣದಲ್ಲಿ ಕಳ್ಳವು ಮಾಡಿರುವ ಶಂಕೆ ಇದ್ದು, ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿ ವಿವರಣೆ ಪಡೆಯಲಾಗುವುದು. ಕೃತ್ಯಕ್ಕೆ ಬಳಸಿದ್ದ ವಾಹನ, ತಾಮ್ರ ಸೇರಿ ₹6.06 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದರು.

ಡಿವೈಎಸ್‌ಪಿ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಚಿತ್ತಾಪುರ ಪಿಐ ಚಂದ್ರಶೇಖರ ತಿಗಡಿ, ವಾಡಿ ಪಿಎಸ್‌ಐ ತಿರುಮಲೇಶ, ಸಿಬ್ಬಂದಿ ಲಕ್ಷ್ಮಣ, ರಮಣಯ್ಯ, ರವೀಂದ್ರ, ಆರೀಫ್, ರಮೇಶ, ಬಲರಾಮ ಅವರಿದ್ದ ತಂಡ ಆರೋಪಿಗಳನ್ನು ಪತ್ತೆ ಹಚ್ಚಿದೆ. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣವರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.