
ಕಲಬುರಗಿ: ‘ಜಲಮಂಡಳಿ ಕೊಡುತ್ತಿರುವ ಬಿಲ್ ಜನರು ಬಳಸಿದ ನೀರಿಗೋ ಇಲ್ಲವೇ ನಲ್ಲಿ ಸಂಪರ್ಕದ ಮೆಂಟೆನನ್ಸ್‌ಗೋ?’, ‘ನಗರದಲ್ಲಿರುವ ಅನಧಿಕೃತ ನಲ್ಲಿಗಳ ಸಂಖ್ಯೆ ಎಷ್ಟು?’, ‘ವರ್ಷಗಳಿಂದ ನೀರೇ ಕೊಟ್ಟಿಲ್ಲ. ಸಾವಿರಾರು ರೂಪಾಯಿ ಬಿಲ್ ಮಾತ್ರ ಕೊಟ್ಟಿದ್ದೀರಿ. ಬಡವರು ಏಕೆ ಹಣ ಕಟ್ಟಬೇಕು, ಹೇಗೆ ಕಟ್ಟಬೇಕು?...’
ಇದು ಕಲಬುರಗಿ ಮಹಾನಗರ ಪಾಲಿಕೆಯ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಮಂಗಳವಾರ ಎಲ್ ಅಂಡ್ ಟಿ ಅಧಿಕಾರಿಗಳನ್ನು ಪಾಲಿಕೆ ಸದಸ್ಯರು ಪ್ರಶ್ನಿಸಿದ ವೈಖರಿ.
ನಗರದ ಇಂದಿರಾ ಸ್ಮಾರಕ ಭವನದಲ್ಲಿ ಮೇಯರ್ ವರ್ಷಾ ಜಾನೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ನೀರು ಪೂರೈಕೆ, ಗ್ರಾಹಕರ ಬಾಕಿ ಪಾವತಿ ವಿರುದ್ಧ ಎಲ್ ಅಂಡ್ ಟಿ ಕಂಪನಿ ಕೈಗೊಂಡ ಕ್ರಮ ಕುರಿತು ಚರ್ಚಿಸಲು ವೇದಿಕೆಯಾಯಿತು.
‘20ನೇ ವಾರ್ಡ್‌ನಲ್ಲಿ ನೀರು ಪೂರೈಕೆ ನಿಂತು ವರ್ಷಗಳಾಗಿರುವ ನಲ್ಲಿಗಳಿಗೂ ಸಾವಿರಾರು ರೂಪಾಯಿ ಬಿಲ್ ಕೊಡಲಾಗಿದೆ. ಹಲವು ವರ್ಷಗಳ ಬಿಲ್ ಜನ ಹೇಗೆ ಕಟ್ಟಬೇಕು’ ಎಂದು ಸದಸ್ಯೆ ಫರ್ಹನಾಜ್ ಪ್ರಶ್ನಿಸಿದರು. ಹಲವು ಸದಸ್ಯರು ಇದಕ್ಕೆ ದನಿಗೂಡಿಸಿದರು.
‘10 ವರ್ಷಗಳ ಬಿಲ್ ಏಕೆ ವಸೂಲಿಗೆ ಬಾಕಿ ಉಳಿದಿದೆ? ಇಷ್ಟು ವರ್ಷ ಅಧಿಕಾರಿಗಳು ಏನು ಮಾಡಿದಿರಿ?’ ಎಂದು ಮೇಯರ್ ವರ್ಷಾ ಜಾನೆ ಅಸಮಾಧಾನ ವ್ಯಕ್ತಪಡಿಸಿದರು.
‘ನಗರದಲ್ಲಿ ಹಿಂದಿನ ಸಮೀಕ್ಷೆ ಪ್ರಕಾರ 59,182 ನಲ್ಲಿಗಳಿದ್ದವು. ಅದೇ ದತ್ತಾಂಶಕ್ಕೆ ತಕ್ಕಂತೆ ಕಂಪ್ಯೂಟರ್ ಆಧಾರಿತ ಬಿಲ್ ಜನರೇಟ್ ಆಗುತ್ತಿದೆ. ನೀರೇ ಬರದ 596 ಪ್ರಕರಣಗಳಲ್ಲಿ ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಲಾಗಿದೆ. ಜನರು ಲೋಕ ಅದಾಲತ್ ಮೂಲಕ ಪರಿಹರಿಸಿಕೊಳ್ಳಲು ಅವಕಾಶವಿದೆ’ ಎಂದರು.
ಇದಕ್ಕೆ ಒಕ್ಕೊರಲಿನಿಂದ ಆಕ್ಷೇಪ ವ್ಯಕ್ತಪಡಿಸಿದ ಸೈಯದ್ ಅಹ್ಮದ್, ಶೇಖಅಜ್ಮಲ್ ಅಹ್ಮದ್ ಗೋಲಾ ಸೇರಿದಂತೆ ಹಲವು ಸದಸ್ಯರು, ‘ಬಡವರು, ಅಕ್ಷರಸ್ಥರು ಅರ್ಜಿ ಹಿಡಿದು ಅಲೆಯಲಾಗದು. ಹೀಗಾಗಿ ಈ ಸಂಬಂಧ ಪಾಲಿಕೆಯೇ ಒಂದು ನಿರ್ಣಯ ಕೈಗೊಂಡು, ಲೋಕ ಅದಾಲತ್ ಮಾದರಿಯಲ್ಲಿ ಬಿಲ್‌ಗಳನ್ನು ತುಂಬಲು ಕ್ರಮವಹಿಸಬೇಕು’ ಎಂದರು.
‘ಈ ಬಗೆಗೆ ಕಾನೂನು ಸಲಹೆ ಪಡೆದು ಕ್ರಮವಹಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಅವಿನಾಶ ಶಿಂದೆ ಭರವಸೆ ನೀಡಿದರು.
ವಿರೋಧ ಪಕ್ಷದ ನಾಯಕಿ ಶೋಭಾ ದೇಸಾಯಿ, ಸದಸ್ಯರಾದ ಸಚಿನ್ ಶಿರವಾಳ, ವಿಜಯಕುಮಾರ ಸೇವಲಾನಿ, ಶಾಂತಾಬಾಯಿ, ರಿಯಾಜ್ ಅಹ್ಮದ್, ವಿಶಾಲ ದರ್ಗಿ, ಸಚಿನ್ ಕಡಗಂಚಿ, ಕೃಷ್ಣ ನಾಯಕ ಸೇರಿದಂತೆ ಹಲವರು ಪ್ರಶ್ನೆಗಳ ಸುರಿಮಳೆಗೈದರು. ಸದಸ್ಯರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಎಲ್ ಅಂಡ್ ಟಿ ಅಧಿಕಾರಿಗಳು ತಡಕಾಡಿದರು.
‘24x7 ನೀರು ಪೂರೈಕೆ ಕಾಮಗಾರಿ ಪ್ರಗತಿ’ ಕುರಿತು ಚರ್ಚಿಸಲು ಸಾಕಷ್ಟು ಸಮಯ ಕೊಡಬೇಕು. ಇದಕ್ಕೆ ಸಂಬಂಧಿಸಿದ ಎಲ್ ಅಂಡ್ ಟಿ, ಕೆಯುಐಡಿಎಫ್‌ಸಿ ಹಾಗೂ ಸ್ಮೆಕ್ ಕಂಪನಿ ಅಧಿಕಾರಿಗಳನ್ನು ಕರೆಯಿಸಿ ಈತನಕ ಆಗಿರುವ ಪ್ರಗತಿ ಬಗೆಗೆ ಪಾಲಿಕೆ ಸಭೆಯಲ್ಲಿ ಪಿಪಿಟಿ ಪ್ರೆಸೆಂಟೇಷನ್ ನೀಡಲು ಸೂಚಿಸಬೇಕು. ಈ ಸಂಬಂಧ ಚರ್ಚೆಗೆ ವಿಶೇಷ ಸಭೆ ಕರೆಯಬೇಕು’ ಎಂದು ಸದಸ್ಯ ಸಚಿನ್ ಶಿರವಾಳ ಒತ್ತಾಯಿಸಿದರು. ಇತರ ಸದಸ್ಯರು ಪಕ್ಷಾತೀತವಾಗಿ ಇದಕ್ಕೆ ದನಿಗೂಡಿಸಿದರು.
ಅಂತಿಮವಾಗಿ ಮೇಯರ್ ವರ್ಷಾ ಜಾನೆ, ‘ಈ ಸಂಬಂಧ ಚರ್ಚೆ ನಡೆಸಲು ಜನವರಿ ಮೊದಲ ವಾರದಲ್ಲಿ ಪಾಲಿಕೆ ಸದಸ್ಯರ ವಿಶೇಷ ಸಭೆ ಕರೆಯಲಾಗುವುದು’ ಎಂದು ಘೋಷಿಸಿ, ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಸಭೆಯ ಆರಂಭದಲ್ಲಿ ಸೂಪರ್ ಮಾರ್ಕೆಟ್‌ನ ನಿರ್ಮಿಸಲು ಉದ್ದೇಶಿಸಿರುವ ತರಕಾರಿ ಮಾರುಕಟ್ಟೆಯ ಮಳಿಗೆಗಳನ್ನು ಸರ್ಕಾರ ನಿಯಮದಂತೆ ಎಲ್ಲ ಮೀಸಲಾತಿಗಳನ್ನು ಅನ್ವಯಿಸಿಯೇ ವಿತರಿಸಲಾಗುವುದು’ ಎಂದು ಆಯುಕ್ತ ಅವಿನಾಶ ಶಿಂದೆ ಸ್ಪಷ್ಟಪಡಿಸಿದರು. ಬಳಿಕ ಸದಸ್ಯರು ‘ಕೈ’ ಎತ್ತುವ ಮೂಲಕ ಅಂಗೀಕಾರದ ಮುದ್ರೆಯೊತ್ತಿದ್ದರು.
ಉಪಮೇಯರ್ ತೃಪ್ತಿ ಲಾಖೆ, ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಪರಿಷತ್ ಕಾರ್ಯದರ್ಶಿ ಬಿ.ಟಿ.ನಾಯಕ ಸೇರಿದಂತೆ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.
‘₹71.11 ಕೋಟಿ ಶುಲ್ಕ ಬಾಕಿ’
‘ನಗರದಲ್ಲಿ ಈತನಕ ಒಟ್ಟು ₹71.11 ಕೋಟಿ ನೀರಿನ ಬಿಲ್ ಬಾಕಿ ಇದೆ. ಪ್ರತಿ ತಿಂಗಳು ₹1.50 ಕೋಟಿ ನಿರ್ವಹಣೆಗೆ ವೆಚ್ಚವಾಗುತ್ತಿದೆ. ಆದರೆ ₹80 ಲಕ್ಷದಿಂದ ₹90 ಲಕ್ಷ ಮಾತ್ರವೇ ಬಿಲ್ ಹಣ ಸಂಗ್ರಹವಾಗುತ್ತಿದೆ. ತಿಂಗಳಿಗೆ ₹50 ಲಕ್ಷದಿಂದ ₹60 ಲಕ್ಷ ನಿರ್ವಹಣೆ ಹಣದ ಕೊರತೆಯಾಗುತ್ತಿದೆ. ಕನಿಷ್ಠ ನಿರ್ವಹಣಾ ವೆಚ್ಚವನ್ನಾದರೂ ಸಂಗ್ರಹಿಸುವ ಒತ್ತಡದಲ್ಲಿ ಮನೆ–ಮನೆಗೆ ಹೋಗಿ ನೀರಿನ ಶುಲ್ಕ ಸಂಗ್ರಹಿಸಲಾಗುತ್ತಿದೆ’ ಎಂದು ಕೆಯುಐಡಿಎಫ್‌ಸಿ ಅಧೀಕ್ಷಕ ಎಂಜಿನಿಯರ್ ಆರ್.ಪಿ. ಜಾಧವ ಹೇಳಿದರು. ‘ನಗರದಲ್ಲಿ ಅಂದಾಜು 18 ಸಾವಿರಕ್ಕೂ ಹೆಚ್ಚು ಅನಧಿಕೃತ ನಲ್ಲಿ ಸಂಪರ್ಕಗಳಿವೆ. 24x7 ನೀರು ಪೂರೈಕೆ ಕಾಮಗಾರಿ ಮುಗಿದರೆ ಅವುಗಳ ಸಮಸ್ಯೆ ಪರಿಹಾರವಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ನಾನ್ ಡೆಮೊ ಜೋನ್‌ನಲ್ಲಿ ಪ್ರತಿ ನಲ್ಲಿ ಸಂಪರ್ಕಕ್ಕೂ ₹175 ಶುಲ್ಕ ಬೀಳುತ್ತದೆ. ಡೆಮೊ ಜೋನ್‌ನಲ್ಲಿ ಮೀಟರ್ ಬಳಸಿದಂತೆ ಶುಲ್ಕ ವಿಧಿಸಲಾಗುತ್ತದೆ. ಡೆಮೊ ಜೋನ್‌ನಲ್ಲಿ ನೀರು ಬಳಸದಿದ್ದರೂ ತಿಂಗಳಿಗೆ ₹56 ಶುಲ್ಕ ಬರುತ್ತದೆ’ ಎಂದು ಅಧಿಕಾರಿಗಳು ತಿಳಿಸಿದರು.
‘ನಗರದ ಅಭಿವೃದ್ಧಿ ನೀಲನಕ್ಷೆ ಅಗತ್ಯ’
‘ಕಲಬುರಗಿ ನಿತ್ಯ ಬೆಳೆಯುತ್ತಿದ್ದು ಮುಂದಿನ 20ರಿಂದ 30 ವರ್ಷಗಳಿಗೆ ಸೂಕ್ತ ನೀಲನಕ್ಷೆ ರೂಪಿಸುವುದು ಅಗತ್ಯ. ಇದಕ್ಕಾಗಿ ಯೋಜನೆಗಳ ಸಮೀಕ್ಷೆ ನಡೆಸಿ ಯೋಜನೆ ರೂಪಿಸಲು ಸಲಹಾ ಸಂಸ್ಥೆ ನೇಮಿಸಿಕೊಳ್ಳುವ ಅಗತ್ಯವಿದೆ. ಚರ್ಚೆ ನಡೆಸಿ ಸದಸ್ಯರು ತೀರ್ಮಾನಿಸಬೇಕು’ ಎಂದು ಪಾಲಿಕೆ ಆಯುಕ್ತ ಅವಿನಾಶ ಶಿಂದೆ ಪ್ರಸ್ತಾವ ಮಂಡಿಸಿದರು. ಈ ಕುರಿತು ಹಲವು ಸದಸ್ಯರು ಉತ್ಸಾಹದಿಂದ ಚರ್ಚಿಸಿದರು. ಬಳಿಕ ಸದಸ್ಯ ಯಲ್ಲಪ್ಪ ನಾಯಿಕೊಡಿ ‘ಅಧಿಕಾರಿಗಳು ಪಾಲಿಕೆ ಸಭೆಯಲ್ಲಿ ಯಾವುದೇ ಪ್ರಸ್ತಾವ ಮಂಡಿಸಲು ಕೆಎಂಸಿ ಕಾಯ್ದೆಯಡಿ ಅವಕಾಶವಿಲ್ಲ. ಈ ಪ್ರಸ್ತಾವವನ್ನು ಮೇಯರ್ ವರ್ಷಾ ಜಾನೆ ಹೆಸರಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕು’ ಎಂದು ಸಲಹೆ ನೀಡಿದರು. ಬಳಿಕ ಅದರಂತೆ ಅನುಮೋದನೆ ಪಡೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.