ADVERTISEMENT

‘ಪಾಲಿಕೆ ವ್ಯಾಪ್ತಿಯ ಕಾಮಗಾರಿ ಚುರುಕುಗೊಳಿಸಿ’

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 20:15 IST
Last Updated 6 ನವೆಂಬರ್ 2019, 20:15 IST

ಕಲಬುರ್ಗಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಮಾನ್ಯ ಮೂಲ ಅನುದಾನ, ಎಸ್.ಎಫ್.ಸಿ. ಅನುದಾನ ಹಾಗೂ 13 ಮತ್ತು 14ನೇ ಹಣಕಾಸು ಆಯೋಗದ ಅನುದಾನದಡಿ ಕಳೆದ 3–4 ವರ್ಷಗಳ ಹಿಂದೆ ಆರಂಭಿಸಿದ ಕಾಮಗಾರಿಗಳು ಇನ್ನೂ ಮುಕ್ತಾಯವಾಗಿಲ್ಲ. ಅವುಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ. ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಬುಧವಾರ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಹಿಂದಿನ ಸಾಲಿನ ಕಾಮಗಾರಿಗಳು ಪೂರ್ಣಗೊಳಿಸದೇ ಹಾಗೆಯೇ ಉಳಿದುಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ಬಾಕಿ ಕಾಮಗಾರಿಗಳನ್ನು ಮುಗಿಸಬೇಕು. ಇದಲ್ಲದೆ 2019–20ನೇ ಸಾಲಿನ ಎಲ್ಲ ಕಾಮಗಾರಿಗಳನ್ನು ಮಾರ್ಚ್‌ ಅಂತ್ಯದವರೆಗೆ ಪೂರ್ಣಗೊಳಿಸುವಂತೆ ಪಾಲಿಕೆ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚನೆ ಕೊಟ್ಟರು.

ADVERTISEMENT

ಪಾಲಿಕೆಯ 2019–20ನೇ ಸಾಲಿನ ಎಸ್.ಎಫ್.ಸಿ. ಅನ್‌ಟೈಡ್ ಅನುದಾನದಲ್ಲಿ ವೈಯಕ್ತಿಕ ಲಾಭ ಪಡೆಯುವ ಕಾಮಗಾರಿಗಳಿಗೆ ಇದೂವರೆಗೆ ಟೆಂಡರ್ ಕರೆಯದಿರುವುದಕ್ಕೆ ಅಕ್ಷೇಪಿಸಿದ ಡಿ.ಸಿ, ಕೂಡಲೇ ಟೆಂಡರ್ ಕರೆದು ಫಲಾನುಭವಿಗಳಿಂದ ಅರ್ಜಿ ಪಡೆಯಿರಿ ಎಂದು ತಿಳಿಸಿದರು.

ಪೋಸ್ಟರ್‌ಗಳಿಗೆ ಕಡಿವಾಣ ಹಾಕಿ: ನಗರದ ಜಗತ್ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರು ಮತ್ತು ಸಂಘ–ಸಂಸ್ಥೆಗಳು ಅನುಮತಿ ಪಡೆಯದೇ ಪೋಸ್ಟರ್‌ಗಳನ್ನು ಅಂಟಿಸುತ್ತಿರುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವನಗೌಡ ಪಾಟೀಲ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ನಗರೋತ್ಥಾನ 2ನೇ ಹಂತದಲ್ಲಿ ಹಂಚಿಕೆಯಾದ ₹ 100 ಕೋಟಿ ಮೊತ್ತದಡಿ 138 ಕಾಮಗಾರಿಗಳನ್ನು ತೆಗೆದುಕೊಂಡು, 136 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಬಿಡುಗಡೆಯಾದ ₹ 92.41 ಕೋಟಿ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡಲಾಗಿದೆ. ಅದೇ ರೀತಿ 3ನೇ ಹಂತದ ನಗರೋತ್ಥಾನ ಯೋಜನೆಯಡಿ ₹ 100 ಕೋಟಿ ಅನುದಾನದಲ್ಲಿ ಕೈಗೆತ್ತಿಕೊಂಡ 34 ಕಾಮಗಾರಿಗಳ ಪೈಕಿ 27 ಮುಗಿಸಲಾಗಿದೆ. ನಗರ ಟ್ರಾಫಿಕ್ ಸಂಚಾರಕ್ಕೆ ಸಂಬಂಧಿಸಿದಂತೆ ಮೂರು ಕಾಮಗಾರಿಗಳನ್ನು ಪೊಲೀಸ್ ಇಲಾಖೆಗೆ ವಹಿಸಿದ್ದು, ಇದುವರೆಗೆ ಬಿಡುಗಡೆಯಾದ ₹ 46.18 ಕೋಟಿ ಖರ್ಚು ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ನಗರಕ್ಕೆ 247 ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ನಗರೋತ್ಥಾನ ಯೋಜನೆಯಡಿ ₹ 40 ಕೋಟಿ ಅನುದಾನ ಕಾಯ್ದಿರಿಸಿಕೊಳ್ಳಲಾಗಿದೆ. ಇದಲ್ಲದೇ ಪಾಲಿಕೆ ವ್ಯಾಪ್ತಿಯಲ್ಲಿ ಸಾಮಾನ್ಯ ಮೂಲ ಅನುದಾನ, ಎಸ್.ಎಫ್.ಸಿ. ವಿಶೇಷ ಅನುದಾನ ₹ 40 ಕೋಟಿ, ವಿಶೇಷ ಅನುದಾನ ₹ 50 ಕೋಟಿ, ಎಸ್.ಎಫ್.ಸಿ. ಅನ್‌ಟೈಡ್ ಅನುದಾನ, ಎಸ್.ಎಫ್.ಸಿ. ಎಸ್.ಸಿ.ಸಿ.ಪಿ., ಎಸ್.ಎಫ್.ಸಿ ವಿಶೇಷ ಅನುದಾನ, 13 ಮತ್ತು 14ನೇ ಹಣಕಾಸು ಅಯೋಗದ ಅನುದಾನದಡಿ ಕೈಗೊಂಡ ಕಾಮಗಾರಿಗಳ ವಿವರ ನೀಡಿದರು. ಇದಕ್ಕೆ ಪ್ರತಿಕ್ರಿಯೆಸಿದ ಜಿಲ್ಲಾಧಿಕಾರಿ, ಮುಂದಿನ ಸಭೆಗೆ ಪ್ರತಿ ಕಾಮಗಾರಿಯ ಸಮಗ್ರ ಚಿತ್ರಣ ಸಲ್ಲಿಸುವಂತೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.