ADVERTISEMENT

ಕಲಬುರಗಿ: ಅವ್ಯವಹಾರ ತನಿಖೆಗೆ ಆಗ್ರಹಿಸಿ ಗ್ರಾ.ಪಂಗೆ ಬೀಗ

ಹಾಗರಗಾ ಗ್ರಾಮದಲ್ಲಿ ಬಹುಜನ ಸಮಾಜ ಪಕ್ಷದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 5:18 IST
Last Updated 30 ಅಕ್ಟೋಬರ್ 2025, 5:18 IST
ಕಲಬುರಗಿ ತಾಲ್ಲೂಕಿನ ಹಾಗರಗಾದಲ್ಲಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ತಾ.ಪಂ ಲೆಕ್ಕಾಧಿಕಾರಿಗೆ ಮನವಿ ಸಲ್ಲಿಸಿದರು
ಕಲಬುರಗಿ ತಾಲ್ಲೂಕಿನ ಹಾಗರಗಾದಲ್ಲಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ತಾ.ಪಂ ಲೆಕ್ಕಾಧಿಕಾರಿಗೆ ಮನವಿ ಸಲ್ಲಿಸಿದರು   

ಕಲಬುರಗಿ: ‘ತಾಲ್ಲೂಕಿನ ಹಾಗರಗಾ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯಡಿಯಲ್ಲಿ ₹37.79 ಲಕ್ಷ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಬಹುಜನ ಸಮಾಜ ಪಕ್ಷದ ಕಲಬುರಗಿ ಗ್ರಾಮೀಣ ಘಟಕದ ವತಿಯಿಂದ ಬುಧವಾರ ಹಾಗರಗಾ ಗ್ರಾ.ಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು.

‘ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದನದ ಕೊಟ್ಟಿಗೆ, ಕುರಿದೊಡ್ಡಿ, ಬದು ನಿರ್ಮಾಣಕ್ಕೆ ಅಂದಾಜು ಪಟ್ಟಿ ಮಾಡಿ ಕೆಲಸ ಮಾಡದೆ ಹಣ ದುರ್ಬಳಕೆ ಆಗಿದೆ. ಇದನ್ನು ಕೂಡ ತನಿಖೆ ಮಾಡಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

‘ಹಾಗರಗಾ ಗ್ರಾಮದ ಬುದ್ಧ ನಗರ ಮತ್ತು ಸರಸ್ವತಿ ನಗರದಲ್ಲಿ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು. 2023–24ನೇ ಸಾಲಿನಲ್ಲಿ ಬಸವ ಮತ್ತು ಅಂಬೇಡ್ಕರ್‌ ಮನೆಗಳು ನಿರ್ಮಿಸಿಕೊಂಡಿರುವ ಬಿಲ್‌ಗಳನ್ನು ಪಾವತಿಸಬೇಕು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಮುಖ್ಯ ಅಡುಗೆದಾರರು ಮತ್ತು ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಜೊತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ಬರೆದ ಒಟ್ಟು 18 ಬೇಡಿಕೆಗಳ ಮನವಿ ಪತ್ರವನ್ನು ತಾ.ಪಂ ಲೆಕ್ಕಾಧಿಕಾರಿಗೆ ಸಲ್ಲಿಸಲಾಯಿತು.

ಬಿಎಸ್‌ಪಿ ಗ್ರಾಮೀಣ ಅಧ್ಯಕ್ಷ ಅಂಬಾರಾಯ ದಸ್ತಾಪುರ, ಜಿಲ್ಲಾ ಘಟಕದ ಕಾರ್ಯದರ್ಶಿ ರವಿ ಆರ್‌.ಕೋರಿ, ವಿಜಯಕುಮಾರ ಅಂಕಲಗಿ, ವಿಠ್ಠಲ ಕೋಣೆಕರ್‌, ಶರಣಬಸಪ್ಪ ಕೋರಿ, ಅರುಣಕುಮಾರ ಹುಗ್ಗಿ, ಮಲ್ಲಿಕಾರ್ಜುನ ಕೋರಿ, ನಾಗರಾಜ ಭಜಂತ್ರಿ, ಅವಿನಾಶ ತಿಪ್ಪಾ, ಅನೀಲ ಜಮಾದಾರ, ಶಶಿಕುಮಾರ ಕೋರಿ, ಧರ್ಮಸಿಂಗ್‌ ತಿವಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.