ADVERTISEMENT

ಕಲಬುರಗಿ: ನಗರದಲ್ಲಿ ಜನ, ವಾಹನ ಸಂಚಾರ ವಿರಳ

ವಾರಾಂತ್ಯ ಕರ್ಫ್ಯೂ; ರಸ್ತೆಗಿಳಿಯದ ಹೆಚ್ಚಿನ ಬಸ್‌ಗಳು, ನಡೆಯದ ವ್ಯಾಪಾರ ವಹಿವಾಟು

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 3:55 IST
Last Updated 9 ಜನವರಿ 2022, 3:55 IST
ಕಲಬುರಗಿಯಲ್ಲಿ ವಾರಾಂತ್ಯ ಕರ್ಫ್ಯೂ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಬಳಿ ಶನಿವಾರ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಪೊಲೀಸರು ವಿಚಾರಿಸಿದರು–ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ವಾರಾಂತ್ಯ ಕರ್ಫ್ಯೂ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಬಳಿ ಶನಿವಾರ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಪೊಲೀಸರು ವಿಚಾರಿಸಿದರು–ಪ್ರಜಾವಾಣಿ ಚಿತ್ರ   

ಕಲಬುರಗಿ: ಕೊರೊನಾ ನಿಯಂತ್ರಣಕ್ಕಾಗಿ ವಾರಾಂತ್ಯ ಕರ್ಫ್ಯೂ ಹೇರಿದ ಕಾರಣ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಶನಿವಾರ ಜನ ಹಾಗೂ ವಾಹನ ಸಂಚಾರ ತುಂಬ ವಿರಳವಾಗಿತ್ತು.

ಯಾವಾಗಲೂ ಜನಜಂಗುಳಿಯಿಂದ ಕೂಡಿರುತ್ತಿದ್ದ ಕೇಂದ್ರಬಸ್ ನಿಲ್ದಾಣ, ರೈಲು ನಿಲ್ದಾಣ, ಎಪಿಎಂಸಿ, ಎಂ.ಎಸ್.ಕೆ ಮಿಲ್ ಪ್ರದೇಶ, ಮುಸ್ಲಿಂ ಚೌಕ್, ಆಳಂದ ನಾಕಾ ಸೇರಿ ಹಲವು ಪ್ರದೇಶಗಳು ಮೌನಕ್ಕೆ ಜಾರಿದವು.ವಾಲ್ಮೀಕಿ ವೃತ್ತ (ರಾಮಮಂದಿರ ವೃತ್ತ), ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತ, ಜಗತ್ ವೃತ್ತ, ರಾಷ್ಟ್ರಪತಿ ಚೌಕ್, ಮುಸ್ಲಿಂ ಚೌಕ್, ಖರ್ಗೆ ವೃತ್ತ, ಲಾಳಗೇರಿ ಕ್ರಾಸ್,ಹೊಸ ಜೇವರ್ಗಿ ರಸ್ತೆ, ಹಳೆ ಜೇವರ್ಗಿ ರಸ್ತೆ, ನೆಹರೂ ಗಂಜ್, ಸೇಡಂ ರಸ್ತೆ, ಆಳಂದ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕೂಡ ವಾಹನಗಳ ಓಡಾಟ ಕಡಿಮೆ ಇತ್ತು.

ವಾರಾಂತ್ಯದಲ್ಲಿ ಹೆಚ್ಚು ಭಕ್ತರು ಬರುತ್ತಿದ್ದ ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದಾ ನವಾಜ್ ದರ್ಗಾ, ಸೂಪರ್‌ ಮಾರ್ಕೆಟ್‌ನ ಮಸೀದಿಗಳು, ರಾಮಮಂದಿರ, ಬುದ್ಧವಿಹಾರದಲ್ಲಿ ಪ್ರವೇಶ ನಿರ್ಬಂಧಿಸಲಾಗಿತ್ತು. ಇದರಿಂದ ಭಕ್ತರು ದೇವಸ್ಥಾನಗಳ ಗೇಟ್‌ ಬಳಿಯೇ ನಿಂತು ಕೈಮುಗಿದರು.

ADVERTISEMENT

ಪ್ರಯಾಣಿಕರಿಲ್ಲದ ಕಾರಣ ಗ್ರಾಮೀಣ ಸಾರಿಗೆಯ ಬಹುತೇಕ ಬಸ್‌ಗಳು ನಿಲ್ದಾಣದಲ್ಲೇ ಉಳಿದವು. ಆದರೆ, ನಗರ ಸಾರಿಗೆ ಬಸ್‌ಗಳು ಮಾತ್ರ ಕಾರ್ಯಾಚರಣೆಗೆ ಇಳಿದವು. ಉಳಿದಂತೆ ಜನರು ಬೈಕ್, ಆಟೊ, ಕಾರುಗಳಲ್ಲಿ ಸಂಚರಿಸಿದರು.

ವೃತ್ತಗಳಲ್ಲಿ ಭದ್ರತೆಗಾಗಿ ನಿಂತಿದ್ದ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ಮಾಡಿದರು.

ಸಂಚಾರ ಠಾಣೆಯ ಪಿಎಸ್ಐ, ಎಎಸ್‌ಐಗಳು ಹಾಗೂ ಸಿಬ್ಬಂದಿ ವಾಹನಗಳಲ್ಲಿ ಸುತ್ತಾಡಿ ಭದ್ರತೆ ಪರಿಶೀಲಿಸಿದರು. ಧ್ವನಿವರ್ಧಕದ ಮೂಲಕ ಜನರಿಗೆ ಗುಂಪುಗೂಡದಂತೆ, ಕೊರೊನಾ ನಿಯಮ ಪಾಲಿಸುವಂತೆ ಸಂದೇಶ ನೀಡಿದರು.

‌ವ್ಯಾಪಾರಿಗಳಿಗೂ ನಷ್ಟ:ಸೂಪರ್ ಮಾರ್ಕೆಟ್, ಕಣ್ಣಿ ಮಾರ್ಕೆಟ್‌, ಶಹಾಬಜಾರ್‌, ಗಂಜ್‌ ಮಾರ್ಕೆಟ್‌ನಲ್ಲಿ ಕೆಲ ವ್ಯಾಪಾರಿಗಳು ಎಂದಿನಂತೆ ಶನಿವಾರ ನಸುಕಿನಲ್ಲಿ ಕೂಡ ಹೂವು, ಹಣ್ಣು, ತರಕಾರಿ ವ್ಯಾಪಾರ ಆರಂಭಿಸಿದರು. ಆದರೆ, ಗ್ರಾಹಕರೇ ಇಲ್ಲದೇ ನಷ್ಟ ಅನುಭವಿಸಬೇಕಾಯಿತು.

ಸುಲಿಗಾಯಿ ಮಾರಾಟ ಮಾಡಲು ಹಳ್ಳಿಗಳಿಂದ ಬಂದಿದ್ದ 30ಕ್ಕೂ ಹೆಚ್ಚು ರೈತ ಮಹಿಳೆಯರು ಇಡೀ ದಿನ ಬಿಸಿಲಿನಲ್ಲಿ ಕಾದು ಕುಳಿತರೂ ವ್ಯಾಪಾರವಾಗಲೇ ಇಲ್ಲ ಎಂದು ಗೋಳು ತೋಡಿಕೊಂಡರು.

ಹಾಲು, ಔಷಧಿ, ತರಕಾರಿ ತರಲು ಕೆಲವರು ಕಾಲ್ನಡಿಗೆಯಲ್ಲಿ ಹೊರಗೆ ಬಂದರೆ, ವಾಹನಗಳಲ್ಲಿ ಬಂದವರನ್ನು ಪೊಲೀಸರು ತಡೆದು ನಿಲ್ಲಿಸಿದರು.ಕಿರಾಣಿ ಅಂಗಡಿ, ದಿನಸಿ, ಬೇಕರಿ, ಗೃಹ ಸಲಕರಣೆ ಮಳಿಗೆ, ಮದ್ಯದಂಗಡಿ ಸೇರಿದಂತೆ ಎಲ್ಲವನ್ನೂ ಬಂದ್‌ ಮಾಡಲಾಗಿತ್ತು. ಹೋಟೆಲ್‌, ರೆಸ್ಟಾರೆಂಟ್‌ಗಳಿಂದ ಪಾರ್ಸೆಲ್‌ ನೀಡಲು ಅನುಮತಿ ಇತ್ತು. ಆದರೂ ಕೆಲವು ಹೋಟೆಲ್‌ಗಳಲ್ಲಿ ಜನರನ್ನು ಒಳಗೆ ಕೂಡಿಸಿಯೇ ಊಟ, ಉಪಾಹಾರ, ಚಹಾ ಸರಬರಾಜು ಮಾಡುತ್ತಿರುವುದು ಕಂಡುಬಂತು.

ಪೆಟ್ರೋಲ್‌ ಬಂಕ್‌, ಎಟಿಎಂ ಕೇಂದ್ರಗಳು ತೆರೆದಿದ್ದರೂ ಜನರಿಲ್ಲದೇ ಖಾಲಿಯಿದ್ದವು.

ಜಿಲ್ಲೆಯ ಆಳಂದ, ಅಫಜಲಪುರ, ಸೇಡಂ, ಚಿತ್ತಾಪುರ, ಚಿಂಚೋಳಿ, ಜೇವರ್ಗಿ, ಯಡ್ರಾಮಿ, ಕಮಲಾಪುರ, ಶಹಾಬಾದ್‌ ಸೇರಿದಂತೆ ಎಲ್ಲೆಡೆ ವಾರಾಂತ್ಯ ಕರ್ಫ್ಯೂ ಬಿಸಿ ತಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.