ADVERTISEMENT

ಕಲಬುರ್ಗಿ: ಮಾರಾಟವಾಗದ ಕ್ರಿಕೆಟ್‌ ಬ್ಯಾಟ್‌

ಬ್ಯಾಟ್‌, ಸ್ಟಂಪ್ ಸಿದ್ಧಪಡಿಸುವವರ ಬದುಕಿಗೆ ಆವರಿಸಿದ ಸಂಕಷ್ಟ

ರಾಹುಲ ಬೆಳಗಲಿ
Published 9 ಮೇ 2020, 9:56 IST
Last Updated 9 ಮೇ 2020, 9:56 IST
ಕಲಬುರ್ಗಿಯ ಸೂಪರ್ ಮಾರ್ಕೆಟ್ ಆವರಣದಲ್ಲಿ ಬ್ಯಾಟು ಮತ್ತು ಸ್ಟಂಪ್‌ಗಳ ತಯಾರು ಮತ್ತು ಮಾರಾಟ ಸ್ಥಳ –ಚಿತ್ರ: ಪ್ರಶಾಂತ್ ಎಚ್.ಜಿ
ಕಲಬುರ್ಗಿಯ ಸೂಪರ್ ಮಾರ್ಕೆಟ್ ಆವರಣದಲ್ಲಿ ಬ್ಯಾಟು ಮತ್ತು ಸ್ಟಂಪ್‌ಗಳ ತಯಾರು ಮತ್ತು ಮಾರಾಟ ಸ್ಥಳ –ಚಿತ್ರ: ಪ್ರಶಾಂತ್ ಎಚ್.ಜಿ   

ಕಲಬುರ್ಗಿ: ‘ಬ್ಯಾಟ್‌, ಸ್ಟಂಪ್‌ಗಳನ್ನುಸಿದ್ಧಪಡಿಸಿ–ಮಾರುತ್ತ ಇಲ್ಲೇ ವಾಸವಿದ್ದೇವೆ. ಆದರೆ, ಯಾವತ್ತೂ ಕೂಡ ಈ ಪರಿ ನಷ್ಟ ಅನುಭವಿಸಿರಲಿಲ್ಲ. ಸಂಕಷ್ಟಕ್ಕೆ ಸಿಲುಕಿರಲಿಲ್ಲ. ಲಾಕ್‌ಡೌನ್‌ ನಮ್ಮ ಬದುಕನ್ನೇ ಹಿಡಿದಿಟ್ಟಿದೆ. ಒಂದರ್ಥದಲ್ಲಿ ಆಶಾಭಾವ ಕಳೆದುಕೊಳ್ಳುವಂತೆ ಮಾಡಿದೆ. ಆದರೆ, ನಾವು ದೃತಿಗೆಟ್ಟಿಲ್ಲ. ಜೀವನೋತ್ಸಾಹದಿಂದ ವಿಮುಖರಾಗಿಲ್ಲ’.

ಬ್ಯಾಟ್‌ವೊಂದನ್ನು ಸಿದ್ಧಪಡಿಸುತ್ತ ಹೀಗೆ ಬದುಕಿನ ಏರುಪೇರನ್ನು ಹೇಳಿಕೊಂಡವರು ಮಹಾರಾಷ್ಟ್ರದ ಧುಳೆ ಜಿಲ್ಲೆಯ ಸಿರಾಪುರ ಗ್ರಾಮದ ಬನ್ಸಿಲಾಲ್‌ ಮೋರೆ.

ನಗರದ ಸೂಪರ್ ಮಾರುಕಟ್ಟೆ ಆವರಣದಲ್ಲಿ 20 ವರ್ಷಗಳಿಂದ ಬ್ಯಾಟ್‌–ಸ್ಟಂಪ್‌ಗಳನ್ನು ಸಿದ್ದಪಡಿಸಿ, ಮಾರುವ ಕಾಯಕದಲ್ಲಿ ಅವರು ತೊಡಗಿಕೊಂಡಿದ್ದಾರೆ. ಅವರೊಂದಿಗೆ 40 ಮಂದಿ ಇದ್ದಾರೆ.

ADVERTISEMENT

ತಮ್ಮೂರಿಗೆ ಹೋಗಲಾಗದೇ, ಇತ್ತ ಆರ್ಥಿಕವಾಗಿ ಚೇತರಿಸಿಕೊಳ್ಳಲು ಆಗದೇ ದಿನ ದೂಡುತ್ತಿದ್ದಾರೆ.

‘ಬೇಸಿಗೆ ರಜೆಯಿದ್ದರೂ ಈ ಬಾರಿ ಮಕ್ಕಳು ಕ್ರಿಕೆಟ್‌ ಆಡಲು ಮೈದಾನಕ್ಕಿಳಿಯಲಿಲ್ಲ.‌ ಕ್ರಿಕೆಟ್‌ನ್ನೇ ನಂಬಿ ಭಾರಿ ಪ್ರಮಾಣದಲ್ಲಿ ಬ್ಯಾಟ್‌, ಸ್ಟಂಪ್‌ ನಾವು ಸಿದ್ಧಪಡಿಸಿದರೂ ಮಾರಾಟವಾಗಲಿಲ್ಲ. ಪ್ರತಿ ಬೇಸಿಗೆಯಲ್ಲಿ ದಿನಕ್ಕೆ ಕನಿಷ್ಠ 10 ಬ್ಯಾಟ್‌ ಮಾರಾಟವಾಗುತಿತ್ತು. ಈ ಬಾರಿ ದಿನಕ್ಕೆ ಒಂದೆರಡು ಮಾರಲು ಪ್ರಯಾಸಪಡಬೇಕಾಯಿತು’ ಎಂದು ಇರ್ಕಾ ತಿಳಿಸಿದರು.

‘ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮಳೆಗಾಲದ ದಿನಗಳನ್ನು ಹೊರತುಪಡಿಸಿದರೆ ವರ್ಷಪೂರ್ತಿ ಎಲ್ಲರೂ ಇಲ್ಲೇ ಇರುತ್ತೇವೆ. ಒಂದಷ್ಟು ಹಣ ಉಳಿತಾಯ ಮಾಡಿಕೊಂಡು, ಊರಿಗೆ ಹೋಗಿ ಅಕ್ಟೋಬರ್ ವೇಳೆಗೆ ಮರಳುತ್ತಿದ್ದೆವು’ ಎಂದರು.

5 ರಿಂದ 10 ಬ್ಯಾಟ್‌ಗಳನ್ನು ಸಿದ್ಧಪಡಿಸಲು ಕನಿಷ್ಠ ಮೂರು ದಿನ ಬೇಕು. ಅದಕ್ಕೆ ಬೇಕಾಗುವ ಕಟ್ಟಿಗೆಯನ್ನು ಅವರು ಮಹಾರಾಷ್ಟ್ರ ಮತ್ತು ಗುಜರಾತ್‌ನಿಂದ ತರಿಸುತ್ತಾರೆ. ಪ್ರತಿಷ್ಠಿತ ಕಂಪನಿಗಳು ತಯಾರಿಸುವ ಬ್ಯಾಟುಗಳಿಗೆ ಸರಿಸಮಾನವಾಗಿ ಕಾಣುವಂತೆ ಮಾಡಲು ಅವರು ಸ್ಟಿಕರ್‌ ಅಂಟಿಸಿ, ಅವುಗಳ ಅಂದ ಹೆಚ್ಚಿಸುತ್ತಾರೆ.

‘ಗುಜರಾತ್ ಮತ್ತು ಮಹಾರಾಷ್ಟ್ರದ ಗಡಿಬಾಗದಲ್ಲಿರುವ ನಮ್ಮ ಊರು 900 ಕಿ.ಮೀ.ದೂರದಲ್ಲಿದೆ. ಅಲ್ಲಿರುವ ಸಂಬಂಧಿಕರು ಮತ್ತು ನಾವು ಆಗಾಗ್ಗೆ ದೂರವಾಣಿ ಕರೆ ಮಾಡಿ, ಪರಸ್ಪರ ಆರೋಗ್ಯ ವಿಚಾರಿಸಿಕೊಳ್ಳುತ್ತೇವೆ. ಕೊರೊನಾ ಯಾರಿಗೂ ಬಾರದೇ, ಎಲ್ಲರೂ ನೆಮ್ಮದಿಯಿಂದ ಬದುಕಿದರೆ ಸಾಕು ಎಂಬ ಸ್ಥಿತಿಯಲ್ಲಿ ನಾವಿದ್ದೇವೆ’ ಎಂದು ಸುಶೀಲಾಬಾಯಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.