ADVERTISEMENT

ಅಪರಾಧಗಳ ತಡೆಗೆ ಸಮನ್ವಯ ಅಗತ್ಯ: ಕಮಿಷನರ್‌ ಶರಣಪ್ಪ ಎಸ್​.ಡಿ

‘ಗಡಿ ಅಪರಾಧಗಳ ಸಭೆ’ಯಲ್ಲಿ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 5:54 IST
Last Updated 29 ಡಿಸೆಂಬರ್ 2025, 5:54 IST
ಕಲಬುರಗಿಯ ನಗರ ಪೊಲೀಸ್‌ ಕಮಿಷನರೇಟ್‌ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯನ್ನು ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ ಉದ್ಘಾಟಿಸಿದರು
ಕಲಬುರಗಿಯ ನಗರ ಪೊಲೀಸ್‌ ಕಮಿಷನರೇಟ್‌ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯನ್ನು ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ ಉದ್ಘಾಟಿಸಿದರು   

ಕಲಬುರಗಿ: ‘ಪೊಲೀಸ್​ ಇಲಾಖೆ, ಪೊಲೀಸ್‌ ಠಾಣೆಗಳಿಗೆ ಗಡಿ ಇರಬಹುದು. ಆದರೆ, ಅಪರಾಧ, ಅಪರಾಧಿಗಳಿಗೆ ಯಾವುದೇ ಗಡಿ ಇರಲ್ಲ. ಪೊಲೀಸರು ಪರಸ್ಪರ ಸಮನ್ವಯ ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಗಡಿ ಮೀರಿದ ಅಪರಾಧ ಪ್ರಕರಣಗಳಿಗೆ ತಡೆಯೊಡ್ಡಬಹುದು’ ಎಂದು ನಗರ ಪೊಲೀಸ್ ಕಮಿಷನರ್‌ ಶರಣಪ್ಪ ಎಸ್​.ಡಿ ಹೇಳಿದರು.

ನಗರದ ಪೊಲೀಸ್ ಕಮಿಷನರೇಟ್‌ ಕಚೇರಿಯ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಬರ್ಬನ್‌ ಉಪವಿಭಾಗ ಮಟ್ಟದ ‘ಗಡಿ ಅಪರಾಧಗಳ ಸಭೆ’ಯಲ್ಲಿ ಅವರು ಮಾತನಾಡಿದರು.

‘ಅಪರಾಧಿಗಳು ಒಂದು ಕಡೆ  ದುಷ್ಕೃತ್ಯ ಎಸಗಿ, ಇನ್ನೊಂದು ರಾಜ್ಯ, ಜಿಲ್ಲೆಯಲ್ಲಿ ಆಶ್ರಯ ಪಡೆಯುತ್ತಾರೆ. ಇದನ್ನು ತಡೆಯಲು ಗಡಿ ಭಾಗದ ಅಧಿಕಾರಿಗಳ ನಡುವೆ ಸಮನ್ವಯ ಅಗತ್ಯ’ ಎಂದರು.

ADVERTISEMENT

‘ನಗರದಲ್ಲಿ ಈ ವರ್ಷ ಎಟಿಎಂ ಯಂತ್ರ ಒಡೆದು ಮಾಡಿದ ಕಳ್ಳತನ, ಸರಾಫ್‌ ಬಜಾರ್​ನಲ್ಲಿ ಹಗಲಿನಲ್ಲೇ ಚಿನ್ನದಂಗಡಿ ಲೂಟಿ ಮಾಡಿದ ಆರೋಪಿಗಳು ಹರಿಯಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದವರಿದ್ದರು. ಎಲ್ಲೋ ಅಪರಾಧ ಮಾಡಿ, ಬೇರೆ ಕಡೆ ಆಶ್ರಯ ಪಡೆಯುತ್ತಾರೆ. ಅಂಥವರ ಮೇಲೆ ಎಲ್ಲರೂ ನಿಗಾ ಇಟ್ಟರೆ ಪತ್ತೆ, ತನಿಖೆಗೆ ನೆರವಾಗುತ್ತದೆ’ ಎಂದರು.

‘ನಗರ ಹಾಗೂ ಜಿಲ್ಲಾ ಪೊಲೀಸ್​ ಇಲಾಖೆಯವರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಇನ್ನಷ್ಟು ಅಪರಾಧಗಳ ತಡೆ, ಪತ್ತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ನೆರವಾಗಲಿದೆ. ನಮ್ಮನ್ನು ಯಾರೂ ಹಿಡಿಯಲ್ಲ ಎಂಬ ನಿರ್ಭಯ ಆರೋಪಿಗಳಿಗೆ ಬರಬಾರದು. ಪರಸ್ಪರ ಪ್ರಕರಣ ಹಂಚಿಕೊಳ್ಳುವುದರಿಂದ ಅನುಕೂಲವಾಗಲಿದೆ’ ಎಂದರು.

ಸಬರ್ಬನ್​ ಎಸಿಪಿ ಬಸವರಾಜ ಹೀರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ, ಡಿವೈಎಸ್ಪಿಗಳಾದ ಶಂಕರಗೌಡ ಪಾಟೀಲ​, ತಮ್ಮರಾಯ ಪಾಟೀಲ​, ಎಸಿಪಿಗಳಾದ ಶರಣಬಸಪ್ಪ ಸುಬೇದಾರ, ಶಿವನಗೌಡ ಪಾಟೀಲ​ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.

ಮಾಹಿತಿ ಹಂಚಿಕೆ: ಸಭೆಯಲ್ಲಿ ನಗರ, ಜಿಲ್ಲಾ ವ್ಯಾಪ್ತಿಯಲ್ಲಿ ಪತ್ತೆಯಾಗದ ಪ್ರಕರಣಗಳು, ಕೊಲೆ ಪ್ರಕರಣಗಳು, ರೂಢಿಗತ ಅಪರಾಧಿಗಳು ಸೇರಿದಂತೆ  ಹಲವು ಪ್ರಕರಣಗಳ ಕುರಿತು ಪರಸ್ಪರ ಮಾಹಿತಿಯನ್ನು ಅಧಿಕಾರಿಗಳು ಹಂಚಿಕೊಂಡರು. ವಾರಂಟ್​ ಇರುವ ಅಪರಾಧಿಗಳ ಮಾಹಿತಿಯ ವಿನಿಮಯವೂ ನಡೆಯಿತು.

ಜೈಲಿನಿಂದ ಬಿಡುಗಡೆ ಆದವರು ಬೀದರ್​ ಆಂಧ್ರಪ್ರದೇಶದ ವಿಶಾಖಪಟ್ಟಣ ಸೇರಿ ವಿವಿಧೆಡೆಯಿಂದ ಬರುತ್ತಿರುವ ಗಾಂಜಾ ಮಾರಾಟಗಾರಾರರ ಮೇಲೆ ನಿಗಾ ಇರಿಸಬೇಕು
-ಶರಣಪ್ಪ ಎಸ್​.ಡಿ. ನಗರ ಪೊಲೀಸ್‌ ಕಮಿಷನರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.