ಕಲಬುರಗಿ: ನಗರದ ಸಿಟಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು, ಆತನಿಂದ ₹2.92 ಲಕ್ಷ ಮೌಲ್ಯದ 3 ಕೆ.ಜಿ 650 ಗ್ರಾಂ ಗಾಂಜಾ ಹಾಗೂ ₹500 ಜಪ್ತಿ ಮಾಡಿಕೊಂಡಿದ್ದಾರೆ.
ಕಲಬುರಗಿಯ ಬಾಪುನಗರದ ಮಾಂಗರವಾಡಿ ಪ್ರದೇಶದ ನಿವಾಸಿ, ಆಟೊ ಚಾಲಕ ಚಕ್ರದಾರಿ ಚಂಪಾಲಾಲ ಪಾಟೀಲ(34) ಬಂಧಿತ ಆರೋಪಿ.
ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂಸೆಗೆ ತಿರುಗಿದ ವಾಗ್ವಾದ; ಯುವಕರ ಮೇಲೆ ಹಲ್ಲೆ
ಕಲಬುರಗಿ: ನಗರದ ರಿಂಗ್ ರಸ್ತೆಯಲ್ಲಿರುವ ರಾಮನಗರದ ಬಳಿ ಗೋವುಗಳನ್ನು ಸಾಗಿಸುತ್ತಿದ್ದ ಲಾರಿ ತಡೆದು ಪರಿಶೀಲಿಸಿದ ಹಿಂದೂ ಪರ ಕಾರ್ಯಕರ್ತರ ಮೇಲೆ ಹಿಗ್ಗಾ–ಮುಗ್ಗಾ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.
ಅಫಜಲಪುರದ ಕಡೆಯಿಂದ ನಗರದ ಮೂಲಕ ಆಳಂದದತ್ತ ಹೊರಟಿದ್ದ ಗೋವುಗಳಿದ್ದ ಲಾರಿಯನ್ನು ರೋಹಿತ್, ಅನಿಲ ಎಂಬುವರು ಬುಧವಾರ ಸಂಜೆ ತಡೆದಿದ್ದರು.
‘ದಾಖಲಾತಿ ಜೊತೆಗೆ ಅನುಮತಿ ಪಡೆದು ದನಗಳನ್ನು ಸಾಗಿಸುತ್ತಿದ್ದ ಗಾಡಿ ತಡೆಯುತ್ತೀರಾ?’ ಎಂದು ಗೋವುಗಳನ್ನು ಸಾಗಿಸುತ್ತಿದ್ದ ಯುವಕರು ರೇಗಾಡಿದ್ದರು. ವಾಗ್ವಾದದೊಂದಿಗೆ ಆರಂಭವಾದ ಜಗಳ ಹಿಂಸೆಗೆ ತಿರುಗಿತ್ತು. ಬಳಿಕ ಕಟ್ಟಿಗೆಯಿಂದಲೂ ಹೊಡೆದಾಡಿಕೊಂಡಿದ್ದರು. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಹಲ್ಲೆಗೊಳಗಾದ ಯುವಕರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಸ್ಥಳಕ್ಕೆ ಸಬರ್ಬನ್ ಠಾಣೆಯ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಮಟ್ಕಾ ಜೂಜಾಟ: ಇಬ್ಬರ ಬಂಧನ
ಕಲಬುರಗಿಯ ವಿವಿಧೆಡೆ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಇನ್‌ಸ್ಪೆಕ್ಟರ್ ಅರುಣಕುಮಾರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ನಗರದ ಶೇಖರೋಜಾ ದರ್ಗಾ ಪ್ರದೇಶದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಮಲ್ಲಿನಾಥ ಪೂಜಾರಿ(35) ಎಂಬಾತನನ್ನು ಬಂಧಿಸಿರುವ ಪೊಲೀಸರು, ಆರೋಪಿಯಿಂದ ₹15,350 ವಶಕ್ಕೆ ಪಡೆದಿದ್ದಾರೆ.
ಆರೋಪಿ ಮಲ್ಲಿನಾಥ ದೇವಿನಗರ ಹನುಮಾನ ಕಾಲೊನಿ ನಿವಾಸಿ. ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಕೇಂದ್ರ ಬಸ್ ನಿಲ್ದಾಣ ಸಮೀಪದ ಎಲ್‌ಐಸಿ ಕಚೇರಿ ಬಳಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ಶರಣಬಸಪ್ಪ ಕಾಳೆ (45) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹10,020 ವಶಕ್ಕೆ ಪಡೆದಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡಿತರ ಅಕ್ಕಿ ಜಪ್ತಿ
ಕಲಬುರಗಿ ತಾಲ್ಲೂಕಿನ ಪಟ್ಟಣ ಟೋಲ್ ನಾಕಾ ಹತ್ತಿರ ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿರುವ ಪೊಲೀಸರು, 23 ಕ್ವಿಂಟಲ್ ಅಕ್ಕಿ ಜಪ್ತಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಪ್ರಕರಣ: ಚಿನ್ನಾಭರಣ ಕಳವು
ಕಲಬುರಗಿಯ ಹೊಸ ಬಿದ್ದಾಪುರ ಕಾಲೊನಿಯ ಜೈ ಹನುಮಾನ ಶಾಲೆ ಸಮೀಪದ ಮನೆಯ ಕೀಲಿ ಮುರಿದ ಕಳ್ಳರು ಚಿನ್ನ–ಬೆಳ್ಳಿ ಆಭರಣ, ನಗದು ಕದ್ದು ಪರಾರಿಯಾಗಿದ್ದಾರೆ.
ಖಾಸಗಿ ಶಾಲೆ ಶಿಕ್ಷಕಿ ಗೀತಾ ಕ್ಷತ್ರಿ ನಗ–ನಾಣ್ಯ ಕಳೆದುಕೊಂಡ ಮಹಿಳೆ.
‘ಒಟ್ಟು 70 ಗ್ರಾಂ ಚಿನ್ನಾಭರಣ, 150 ಗ್ರಾಂ ಬೆಳ್ಳಿ ಆಭರಣಗಳು, ₹50 ಸಾವಿರ ನಗದು ಕಳುವಾಗಿದೆ’ ಎಂದು ಗೀತಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನಾಭರಣ ಕಳವು
ಕಲಬುರಗಿಯ ಸೇಡಂ ರಸ್ತೆಯ ಸಿದ್ಧೇಶ್ವರ ಕಾಲೊನಿಯಲ್ಲಿ ಮನೆಯೊಂದ ಕೀಲಿ ಮುರಿದ ಕಳ್ಳರು ಅಲ್ಮೇರಾದಲ್ಲಿದ್ದ 20 ಗ್ರಾಂ ಚಿನ್ನಾಭರಣ, ₹40 ಸಾವಿರ ನಗದು ಹಾಗೂ ಒಂದು ಮೊಬೈಲ್ ಕದ್ದು ಪರಾರಿಯಾಗಿದ್ದಾರೆ.
ಮಹಾದೇವಿ ವಿರಕ್ತಮಠ ಚಿನ್ನಾಭರಣ, ನಗದು ಕಳೆದುಕೊಂಡವರು. ಒಬ್ಬರೆ ನೆಲೆಸಿರುವ ಮಹಾದೇವಿ ಸಂಬಂಧಿಕರೊಂದಿಗೆ ತಾಂಡೂರಿಗೆ ಮದುವೆ ಹೋಗಿ ಬರುವಷ್ಟರಲ್ಲಿ ಕಳವು ನಡೆದಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.