ADVERTISEMENT

ಅಪರಾಧ ತಡೆಗೆ ಮಹತ್ತರ ಬದಲಾವಣೆ: ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್

ಬಿಎನ್‌ಎಸ್‌, ಬಿಎನ್‌ಎಸ್‌ಎಸ್ ಕುರಿತು ವಿಶೇಷ ಉಪನ್ಯಾಸ: ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 3:55 IST
Last Updated 17 ಜುಲೈ 2025, 3:55 IST
ಕಲಬುರಗಿಯಲ್ಲಿ ಬುಧವಾರ ಹಮ್ಮಿಕೊಂಡ ಬಿಎನ್‌ಎಸ್‌, ಬಿಎನ್‌ಎಸ್‌ಎಸ್ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕಿ ಕಲಬುರಗಿ ಹೈಕೋರ್ಟ್‌ ಪೀಠದ ಹಿರಿಯ ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್ ಅವರು ಉದ್ಘಾಟಿಸಿದರು. ನ್ಯಾಯಮೂರ್ತಿ ವಿ. ಶ್ರೀಶಾನಂದ, ನ್ಯಾಯಾಧೀಶ ಜಿ.ಎಲ್.ಲಕ್ಷ್ಮಿನಾರಾಯಣ ಉಪಸ್ಥಿತರಿದ್ದರು
ಕಲಬುರಗಿಯಲ್ಲಿ ಬುಧವಾರ ಹಮ್ಮಿಕೊಂಡ ಬಿಎನ್‌ಎಸ್‌, ಬಿಎನ್‌ಎಸ್‌ಎಸ್ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕಿ ಕಲಬುರಗಿ ಹೈಕೋರ್ಟ್‌ ಪೀಠದ ಹಿರಿಯ ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್ ಅವರು ಉದ್ಘಾಟಿಸಿದರು. ನ್ಯಾಯಮೂರ್ತಿ ವಿ. ಶ್ರೀಶಾನಂದ, ನ್ಯಾಯಾಧೀಶ ಜಿ.ಎಲ್.ಲಕ್ಷ್ಮಿನಾರಾಯಣ ಉಪಸ್ಥಿತರಿದ್ದರು   

ಕಲಬುರಗಿ: ‘ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ವರ್ತಮಾನದ ಅಪರಾಧ ತಡೆಗೆ ಮತ್ತು ನ್ಯಾಯಾಂಗದ ಪರಿಪಾಲನೆಗೆ ಮಹತ್ತರವಾದ ಬದಲಾವಣೆಯಾಗಿದೆ’ ಎಂದು ಕಲಬುರಗಿ ಹೈಕೋರ್ಟ್‌ ಪೀಠದ ಹಿರಿಯ ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್ ಹೇಳಿದರು.

ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿನ ವಕೀಲರ ಸಂಘದ ಹೊಸ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಗುಲಬರ್ಗಾ ನ್ಯಾಯವಾದಿಗಳ ಸಂಘ ಆಯೋಜಿಸಿದ್ದ ಭಾರತೀಯ ನ್ಯಾಯ ಸಂಹಿತೆ ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಾಯ್ದೆಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬ್ರಿಟಿಷರ ಕಾನೂನುಗಳನ್ನು ಪರಿಷ್ಕರಿಸಿ, ಬದಲಾದ ಭಾರತಕ್ಕೆ ಅನುಗುಣವಾಗಿ ತಿದ್ದುಪಡಿ ಮಾಡಿ ಭಾರತದ ನ್ಯಾಯ ಕಲ್ಪನೆಯಡಿ ಈ ಎರಡೂ ಸಂಹಿತೆಗಳನ್ನು ರೂಪಿಸಲಾಗಿದೆ. ಹೊಸದಾಗಿ ಜಾರಿಗೆ ಬಂದಿರುವ ಸಂಹಿತೆಗಳ ಅರಿವು ಎಲ್ಲರಿಗೂ ಅವಶ್ಯಕ. ಅದರಲ್ಲೂ ನ್ಯಾಯವಾದಿಗಳಿಗೆ ಅತಿ ಹೆಚ್ಚಿನ ಅರಿವಿನ ಅಗತ್ಯವಿದೆ’ ಎಂದರು.

ADVERTISEMENT

‘ಹೊಸ ಕಾನೂನುಗಳು ಪರಿಣಾಮಕಾರಿಯಾಗಿ ಜಾರಿಗೆ ತರುವುದರಲ್ಲಿ ಪೊಲೀಸರ ಜವಾಬ್ದಾರಿ ಹೆಚ್ಚಿದೆ. ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರಿಗೆ ನಿರಂತರ ಓದು ಅವಶ್ಯಕವಾಗಿದೆ’ ಎಂದು ತಿಳಿಸಿದರು.

ನ್ಯಾಯಮೂರ್ತಿ ವಿ. ಶ್ರೀಶಾನಂದ ಮಾತನಾಡಿ, ‘ಅನಗತ್ಯ ಕಾನೂನುಗಳನ್ನು ತೆಗೆದು ಹಾಕಿ ಹೊಸ ಸಂಹಿತೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ. ಅಪರಾಧಗಳಲ್ಲಿ ಲಿಂಗ ಸಮಾನತೆ ಜೊತೆಗೆ ಲಿಂಗತ್ವ ಅಲ್ಪಸಂಖ್ಯಾತರನ್ನು ಸಹ ಪರಿಗಣಿಸಲಾಗಿದೆ’ ಎಂದರು.

‘ಎಲೆಕ್ಟ್ರಾನಿಕ್ ಉಪಕರಣಗಳ ಸಾಕ್ಷಿ, ನ್ಯಾಯಾಲಯಗಳ ಡಿಜಿಟಲೀಕರಣ ಸೇರಿದಂತೆ ತ್ವರಿತ ನ್ಯಾಯಕ್ಕೆ ಅವಶ್ಯವಿರುವ ಅಂಶಗಳನ್ನು ಒಳಗೊಂಡಿದೆ. ಈ ನೆಲದ ಜನರಿಗಾಗಿ ಈ ನೆಲದ ಜನರಿಂದ ರೂಪಗೊಂಡ ಹೊಸ ಕಾನೂನುಗಳ ಮೂಲಕ 2024ರಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಕಲಾಗಿದೆ’ ಎಂದು ಹೇಳಿದರು.

‍‘ಬ್ರಿಟಿಷರು ಬಿಟ್ಟು ಹೋದ ಗುಲಾಮಿ ಕಾನೂನುಗಳನ್ನು ಬದಲಾಯಿಸಿ, ಶಿಕ್ಷೆಗೆ ಬದಲಾಗಿ ನ್ಯಾಯ ಸಂಹಿತೆ ಪದ, ಭಾರತೀಯ ಪದ ಬಳಕೆ ಮಾಡಲಾಗಿದೆ. ಭಾರತೀಯ ನ್ಯಾಯ ಸಂಹಿತೆ ಪ್ರಕಾರ ಶಿಕ್ಷೆ ಒಂದೇ ಉದ್ದೇಶವಲ್ಲ. ಘಟನೆಯಿಂದ ನೊಂದ ವ್ಯಕ್ತಿಗೆ ಏನಾಗಬೇಕು ಎಂಬುದು ಸಹ ವಿವರಿಸುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಎಲ್.ಲಕ್ಷ್ಮಿನಾರಾಯಣ, ಕಲಬುರಗಿ ವಕೀಲರ ಸಂಘದ ಅಧ್ಯಕ್ಷ ಎಸ್‌.ವಿ. ಪಸಾರ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಸಿದ್ದರಾಮ ವಾಡಿ ಸ್ವಾಗತಿಸಿದರು.

ಬ್ರಿಟಿಷರ ಕಾಲದ ಕಾನೂನಿನಲ್ಲಿ ಶಿಕ್ಷೆಯೊಂದೆ ಮುಖ್ಯವಾಗಿತ್ತು. ಆದರೆ ಹೊಸ ಕಾನೂನುಗಳು ನೊಂದವರ ಹಕ್ಕುಗಳನ್ನು ರಕ್ಷಿಸುತ್ತದೆ
ವಿ. ಶ್ರೀಶಾನಂದ ಹೈಕೋರ್ಟ್‌ ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.