ADVERTISEMENT

ಕಲಬುರಗಿ: ಶರಣಬಸವೇಶ್ವರರ ದರ್ಶನಕ್ಕೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 6:36 IST
Last Updated 5 ಆಗಸ್ಟ್ 2025, 6:36 IST
ಶ್ರಾವಣ ಸೋಮವಾರದ ನಿಮಿತ್ತ ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು
ಚಿತ್ರ: ತಾಜುದ್ದೀನ್‌ ಆಜಾದ್‌
ಶ್ರಾವಣ ಸೋಮವಾರದ ನಿಮಿತ್ತ ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು ಚಿತ್ರ: ತಾಜುದ್ದೀನ್‌ ಆಜಾದ್‌   

ಕಲಬುರಗಿ: ನಗರದ ವಿವಿಧ ದೇವಸ್ಥಾನಗಳಲ್ಲಿ ಶ್ರಾವಣ ಮಾಸದ ಎರಡನೇ ಸೋಮವಾರವೂ ಶ್ರದ್ಧಾ ಭಕ್ತಿಯ ಪೂಜೆಗಳು ನಡೆದವು.

ಈ ಭಾಗದ ಆರಾಧ್ಯದೈವ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಆರತಿ, ನೈವೇದ್ಯ ಅರ್ಪಣೆ, ಮಹಾ ಮಂಗಳಾರತಿ ಜರುಗಿತು. ಮುಸ್ಸಂಜೆಯ ನಿಮಿಷಗಳಲ್ಲಿ ನಡೆದ ಪಲ್ಲಕ್ಕಿ ಉತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಭಕ್ತಿ ಅರ್ಪಿಸಿದರು.

ಬೆಳಿಗ್ಗೆ ಚುರುಕಾದ ಬಿಸಿಲಿನ ನಡುವೆಯೂ ಭಕ್ತರು ಮೂರು ಸಾಲುಗಳಲ್ಲಿ ನಿಂತು ಶರಣಬಸವೇಶ್ವರರ ಗದ್ದುಗೆ ದರ್ಶನ ಪಡೆದರು. ಬೆಳಿಗ್ಗೆಯಿಂದ ಶುರುವಾರ ಭಕ್ತರ ಬರುವಿಕೆ ರಾತ್ರಿ ತನಕ ನಿರಂತರವಾಗಿ ಸಾಗಿತ್ತು.

ADVERTISEMENT

ದೇವಸ್ಥಾನದ ಆವರಣದಲ್ಲಿ ತೆಂಗಿನಕಾಯಿ, ಬಿಲ್ವ ಪತ್ರೆ, ಹೂವುಗಳ ಮಾರಾಟ ಭರ್ಜರಿಯಾಗಿ ನಡೆಯಿತು. ಭಕ್ತರು ತಂಡೋಪ ತಂಡವಾಗಿ ದೇವಸ್ಥಾನಕ್ಕೆ ಬಂದು, ಕಾಯಿ–ಕರ್ಪೂರ, ಬಿಲ್ವಪತ್ರೆ, ಹೂವುಗಳನ್ನು ಕೊಂಡು ದೇವರಿಗೆ ಅರ್ಪಿಸಿ ಭಕ್ತಿ ಮೆರೆದರು. ಭಕ್ತರ ದಟ್ಟಣೆ ನಿರ್ವಹಿಸಲು ಪೊಲೀಸರೊಂದಿಗೆ ಶರಣ ಬಸವೇಶ್ವರ ಶಿಕ್ಷಣ ಸಂಸ್ಥೆಗಳ ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು.

ದಾಸೋಹ:

ದೇವಸ್ಥಾನಕ್ಕೆ ಬಂದ ಹಲವು ಭಕ್ತರು ದೇವರ ನೈವೇದ್ಯಕ್ಕೆ ತಂದ ವಿವಿಧ ಭಕ್ಷ್ಯಗಳನ್ನು ಭಕ್ತರಿಗೆ ಪ್ರಸಾದವಾಗಿ ಹಂಚಿದರು. ಕೆಲವರು ಚಪಾತಿ–ಪಲ್ಯ, ಶಿರಾ–ಉಪ್ಪಿಟ್ಟು, ಬಾಳೆಹಣ್ಣು, ಮಸಾಲೆ ಅನ್ನ ಹಂಚಿದರೆ, ಮತ್ತೆ ಕೆಲವರು ಗೋಧಿ ಹುಗ್ಗಿ, ಅನ್ನ–ಸಾರು ದಾಸೋಹಗೈದು ಭಕ್ತಿ ಮೆರೆದರು.

ಪ್ರತಿಬಾರಿಯಂತೆ ಶರಣ ಬಸವೇಶ್ವರ ದೇವಸ್ಥಾನಕ್ಕೆ ತೆರಳುವ ಮುಖ್ಯ ಮಾರ್ಗವಾದ ಗೋವಾ ಹೋಟೆಲ್ ಹತ್ತಿರದಿಂದ ಲಾಲಗೇರಿ ಕ್ರಾಸ್‌ ತನಕ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಎರಡು ಬದಿಯಲ್ಲಿ ಕಟ್ಟಿಗೆ, ಬ್ಯಾರಿಕೇಡ್‌ ಇಟ್ಟು ವಾಹನಗಳ ಸಂಚಾರ ತಡೆಯಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.