ADVERTISEMENT

ಕರ್ಫ್ಯೂ: ಎರಡನೇ ದಿನವೂ ಉತ್ತಮ ಸ್ಪಂದನೆ

ಅನಗತ್ಯವಾಗಿ ಹೊರಗೆ ಬಂದ ಯುವಕರಿಗೆ ಪೊಲೀಸರಿಂದ ಬಸ್ಕಿ ಶಿಕ್ಷೆ; 62 ವಾಹನ ಜಪ್ತಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 7:00 IST
Last Updated 26 ಏಪ್ರಿಲ್ 2021, 7:00 IST
ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಅನಗತ್ಯವಾಗಿ ಹೊರಗೆ ಬಂದ ಯುವಕರಿಗೆ ಸೂಪರ್‌ ಮಾರ್ಕೆಟ್‌ನ ಚೌಕ ಬಳಿ ಪೊಲೀಸರು ಬಸ್ಕಿ ಹೊಡೆಸಿದರು
ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಅನಗತ್ಯವಾಗಿ ಹೊರಗೆ ಬಂದ ಯುವಕರಿಗೆ ಸೂಪರ್‌ ಮಾರ್ಕೆಟ್‌ನ ಚೌಕ ಬಳಿ ಪೊಲೀಸರು ಬಸ್ಕಿ ಹೊಡೆಸಿದರು   

ಕಲಬುರ್ಗಿ: ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಘೋಷಿಸಿದ್ದ ವಾರಾಂತ್ಯದ ಕರ್ಫ್ಯೂನ ಎರಡನೇ ದಿನವಾದ ಭಾನುವಾರ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ದೊರಕಿತು. ಕಲಬುರ್ಗಿಯಲ್ಲಿ ಅನಗತ್ಯವಾಗಿ ಹೊರಗಡೆ ಬಂದಿದ್ದ ಯುವಕರನ್ನು ತಡೆದ ಪೊಲೀಸರು ಬಸ್ಕಿ ಹೊಡೆಯುವ ‘ಶಿಕ್ಷೆ’ ವಿಧಿಸಿದರು.

ಕರ್ಫ್ಯೂ ಹಾಗೂ ನಿಷೇಧಾಜ್ಞೆ ಮಧ್ಯೆಯೂ ಸೂಕ್ತ ಸಮಜಾಯಿಷಿ ಇಲ್ಲದೇ ಹೊರಗಡೆ ಬಂದವರ 63 ವಾಹನಗಳನ್ನು ಜಪ್ತಿ ಮಾಡಿದರು. ಬೆಳಿಗ್ಗೆ 10ರ ಬಳಿಕ ಕಿರಾಣಿ ಅಂಗಡಿ, ಹಾಲಿನ ಅಂಗಡಿಗಳೂ ಬಂದ್ ಆಗಿದ್ದರಿಂದ ಜನರು ರಸ್ತೆಗಳಲ್ಲಿ ಕಾಣಿಸಿಕೊಳ್ಳಲಿಲ್ಲ.

ಕೇಂದ್ರ ಬಸ್ ನಿಲ್ದಾಣ, ಜೇವರ್ಗಿ ಕ್ರಾಸ್, ಜಗತ್ ಸರ್ಕಲ್, ಸೂಪರ್ ಮಾರ್ಕೆಟ್, ನೆಹರೂ ಗಂಜ್, ಕಿರಾಣಾ ಬಜಾರ, ಸೇಡಂ ರಸ್ತೆ, ಹುಮನಾಬಾದ ರಿಂಗ್ ರಸ್ತೆ, ಗಂಜ್, ಎಂಎಸ್‌ಕೆ ಮಿಲ್, ಮುಸ್ಲಿಂ ಚೌಕ, ಖಾದ್ರಿ ಚೌಕ್, ಆಳಂದ ಚೆಕ್‍ ಪೋಸ್ಟ್, ರಾಮಮಂದಿರ ವೃತ್ತ ಹೀಗೆ ಪ್ರಮುಖ ಸ್ಥಳಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಎಲ್ಲ ಕಡೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತಲ್ಲದೇ ಅನೇಕ ಪೊಲೀಸ್ ವಾಹನಗಳಲ್ಲಿ ಅಧಿಕಾರಿಗಳು ನಗರದಲ್ಲಿ ತಿರುಗಿ ಜನರನ್ನು ಜಾಗೃತಿಗೊಳಿಸಿದರು.

ADVERTISEMENT

ಬಸ್‌ ನಿಲ್ದಾಣ ಹಾಗೂ ಸೂಪರ್ ಮಾರ್ಕೆಟ್‌ನಲ್ಲಿ ಅನಗತ್ಯವಾದ ಬೈಕ್‌ಗಳಲ್ಲಿ ಸಂಚರಿಸುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದರು. ಅನಗತ್ಯವಾಗಿ ತಿರುಗುವವರ ಮೇಲೆ ಹದ್ದಿನ ಕಣ್ಣು ಇಡಲಾಗಿತ್ತು. ಸಾರಿಗೆ ಸಂಸ್ಥೆ ಬಸ್‌ಗಳ ಓಡಾಟ ಇತ್ತು. ಆದರೆ, ವಿರಳ ಸಂಖ್ಯೆಯಲ್ಲಿ ಜನರು ಪ್ರಯಾಣ ಕೈಗೊಂಡರು. ಇದನ್ನು ಗಮನಿಸಿದ ಈಶಾನ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬಸ್‌ಗಳ ಸಂಖ್ಯೆಯನ್ನು ಕಡಿತಗೊಳಿಸಿದರು.

ಬೀದರ್, ರಾಯಚೂರು, ಯಾದಗಿರಿ, ವಿಜಯಪುರ, ಶಹಾಪುರ, ಹೈದರಾಬಾದ್‌ ಸೇರಿದಂತೆ ಹಲವು ಕಡೆ ಸಂಚರಿಸುವ ಬಸ್‌ಗಳ ಸಂಚಾರ ಮುಂದುವರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.