
ಸೈಬರ್ ವಂಚನೆ
ಕಲಬುರಗಿ: ತಮಗೆ ಬರಬೇಕಿದ್ದ ಸ್ಪೀಡ್‌ಪೋಸ್ಟ್ ಕುರಿತು ವೃದ್ಧರೊಬ್ಬರು ಅಂತರ್ಜಾಲದಲ್ಲಿ ಪರಿಶೀಲಿಸುವಾಗ ವಾಟ್ಸ್‌ಆ್ಯಪ್ ಕರೆ ಮಾಡಿದ ವಂಚಕರು ಲಿಂಕ್‌ವೊಂದನ್ನು ಕಳುಹಿಸಿ ಬರೋಬ್ಬರಿ ₹1.98 ಲಕ್ಷ ದೋಚಿದ್ದಾರೆ.
ನಿವೃತ್ತ ಉಪ ಅರಣ ಸಂರಕ್ಷಣಾಧಿಕಾರಿ ಲಕ್ಷ್ಮಣ ಭಾವಿಕಟ್ಟಿ ಹಣ ಕಳೆದುಕೊಂಡವರು.
‘ಬೆಂಗಳೂರಿನಿಂದ ನನಗೆ ಸ್ಪೀಡ್‌ಪೋಸ್ಟ್ ರೆಜಿಸ್ಟರ್ ಬರಬೇಕಿತ್ತು. ಆ ರೆಜಿಸ್ಟರ್ ಡಿಸೆಂಬರ್ 15ರಂದು ಬೆಂಗಳೂರಿನಿಂದ ರವಾನೆಯಾಗಿತ್ತು. ಅದರ ಬಗೆಗೆ ಡಿ.19ರಂದು ಸಂಜೆ ಅವರು 6.30ರ ಸುಮಾರಿಗೆ ಅಂತರ್ಜಾಲದಲ್ಲಿ ಪರಿಶೀಲಿಸುತ್ತಿದ್ದೆ. ಆಗ ವಾಟ್ಸ್‌ಆ್ಯಪ್ ಕರೆಯೊಂದು ಬಂತು. ‘ನಿಮಗೆ ಬರಬೇಕಿದ್ದ ಪಾರ್ಸಲ್ ವಿಳಾಸ ತಪ್ಪಾಗಿ ಬೇರೆಡೆ ಬಂದು ಬಿದ್ದಿದೆ. ನಾನೊಂದು ಲಿಂಕ್ ಕಳುಹಿಸುವೆ. ಅದರ ಮೇಲೆ ಕ್ಲಿಕ್ ಮಾಡಿದರೆ ಒಂದು ಗಂಟೆಯಲ್ಲಿ ಪಾರ್ಸಲ್ ನಿಮ್ಮ ಮನೆಗೆ ತಲುಪುತ್ತದೆ’ ಎಂದು ಹೇಳಿ ಕರೆ ಕಡಿತಗೊಳಿಸಲಾಯಿತು. ನಾನು ಲಿಂಕ್ ಕ್ಲಿಕ್ ಮಾಡಿದಾಗ ನನ್ನ ಮೊಬೈಲ್ ಫೋನ್ ಹ್ಯಾಕ್ ಆಗಿ ವಾಟ್ಸ್ಆ್ಯಪ್ ತೊಂದರೆಗೀಡಾಯಿತು’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಲಕ್ಷ್ಮಣ ಭಾವಿಕಟ್ಟಿ ತಿಳಿಸಿದ್ದಾರೆ.
‘ಬಳಿಕ ಈ ಕುರಿತು ಮಗಳಿಗೆ ವಿಚಾರಿಸಿದಾಗ ನಿಮ್ಮ ಫೋನ್ ಹ್ಯಾಕ್ ಆಗಿದ್ದು, ನಿಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುವಂತೆ ಹೇಳಿದಳು. ನಾನು ಪರಿಶೀಲಿಸಿದಾಗ ನನ್ನ ಎರಡು ಎಸ್‌ಬಿಐ ಬ್ಯಾಂಕ್ ಖಾತೆಗಳಿಂದ ಒಟ್ಟು ₹1.97 ಲಕ್ಷ ಹಣ ಕಡಿತವಾಗಿರುವುದು ಗಮನಕ್ಕೆ ಬಂದಿದೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಈ ಕುರಿತು ಕಲಬುರಗಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ಅಕ್ರಮ ಮಾರಾಟ
ಕಲಬುರಗಿ ತಾಲ್ಲೂಕಿನ ಮೇಳಕುಂದಾ (ಕೆ) ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಫರಹತಾಬಾದ್ ಪೊಲೀಸರು ಬಂಧಿಸಿದ್ದಾರೆ.
ಜಗದೀಶ ಜಮಾದಾರ ಬಂಧಿತ ವ್ಯಕ್ತಿ. ಆರೋಪಿ ಬಳಿಯಿಂದ ₹2,950 ಮೌಲ್ಯದ ವಿವಿಧ ಬಗೆಯ ಮದ್ಯದ ಪೌಚ್, ಬಾಟಲಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.