ADVERTISEMENT

ಅಂಬೇಡ್ಕರ್ ಮಾರ್ಗ ಇಂದಿನ ಅಗತ್ಯ: ಸುನೀಲಕುಮಾರ ವಂಟಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 8:25 IST
Last Updated 15 ಅಕ್ಟೋಬರ್ 2025, 8:25 IST
ಕಲಬುರಗಿಯ ಕನ್ನಡ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಬುದ್ಧ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮೇಯರ್‌ ವರ್ಷಾ ಜಾನೆ, ಉಪಮೇಯರ್‌ ತೃಪ್ತಿ ಲಾಖೆ, ಸಂಜೀವ ಮಾಲೆ, ಸುನೀಲಕುಮಾರ ವಂಟಿ ಸೇರಿ ಹಲವರಿದ್ದರು  ಪ್ರಜಾವಾಣಿ ಚಿತ್ರ
ಕಲಬುರಗಿಯ ಕನ್ನಡ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಬುದ್ಧ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮೇಯರ್‌ ವರ್ಷಾ ಜಾನೆ, ಉಪಮೇಯರ್‌ ತೃಪ್ತಿ ಲಾಖೆ, ಸಂಜೀವ ಮಾಲೆ, ಸುನೀಲಕುಮಾರ ವಂಟಿ ಸೇರಿ ಹಲವರಿದ್ದರು  ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಬುದ್ಧಿಯ ಆಧಾರದಲ್ಲಿ ನಿಂತಿರುವ ವಿಶ್ವದ ಏಕೈಕ ಧರ್ಮ ಬೌದ್ಧ ಧರ್ಮ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್‌ನ ಮಾಜಿ ಸದಸ್ಯ ಸುನೀಲಕುಮಾರ ವಂಟಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಕರ್ನಾಟಕ‌ ಸಮತಾ ಸೈನಿಕ‌ ದಳ ಕಲಬುರಗಿ ವಿಭಾಗ‌ ಹಾಗೂ ಜಿಲ್ಲಾ ಘಟಕದಿಂದ ಮಂಗಳವಾರ ಆಯೋಜಿಸಿದ್ದ 69ನೇ ಧಮ್ಮಚಕ್ರ‌ ಪ್ರವರ್ತನ‌ ದಿನಾಚರಣೆ‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಡಾ.ಅಂಬೇಡ್ಕರ್ ನೀಡಿದ ಸೌಲಭ್ಯ ಪಡೆಯುತ್ತಿರುವ ನಾವೆಲ್ಲ ಇಂದು ಅವರು ತೋರಿದ ಬೌದ್ಧ ಧರ್ಮದ ಮಾರ್ಗದಲ್ಲಿ ನಡೆಯುತ್ತಿಲ್ಲ. ಬಾಬಾಸಾಹೇಬರನ್ನು ಅನುಸರಿಸುತ್ತಿಲ್ಲ. ನಾವೆಲ್ಲ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಯಾವ ರೀತಿ ಬ್ರಿಟಿಷರು ಭಾರತೀಯರನ್ನು ಗುಲಾಮರಂತೆ ನಡೆಸಿಕೊಂಡಿದ್ದರೋ ಅದರಂತೆ ದಲಿತರು ದೇಶದ ಮೇಲ್ವರ್ಗದವರ ಗುಲಾಮರಾಗುವ ಗಂಡಾಂತರವಿದೆ. ಬಾಬಾಸಾಹೇಬರು ಯಾಕೆ ಹಿಂದೂ ಧರ್ಮ ತ್ಯಜಿಸಿದರು ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ’ ಎಂದರು.

ADVERTISEMENT

‘ಅಂಬೇಡ್ಕರ್‌ ಹೋರಾಟದ ಫಲವಾಗಿ ನಾವೆಲ್ಲ ಶಿಕ್ಷಣ, ಹಕ್ಕುಗಳು, ನೌಕರಿ ಎಲ್ಲವನ್ನೂ ಪಡೆದು ಸೌಲಭ್ಯಗಳಲ್ಲಿ ಮುಳುಗಿದ್ದೇವೆ. ಅವರು ತೋರಿದ ಮಾರ್ಗ, ಬುದ್ಧ, ಬೌದ್ಧಧರ್ಮಗಳತ್ತ ತಿರುಗಿಯೂ ನೋಡುತ್ತಿಲ್ಲ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಉಣ್ಣಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಕರ್ನಾಟಕ ಬೌದ್ಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಸುರೇಶ ಕಾನೇಕರ ಮಾತನಾಡಿ, ‘1956ರ ಅ.14ರಂದು ಬಾಬಾಸಾಹೇಬ್‌ ಅಂಬೇಡ್ಕರ್ ಅವರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಬಂದಾಗ ಸಂಸ್ಕಾರ ವಿಭಾಗ, ಮಹಿಳಾ ವಿಭಾಗ, ಪ್ರವಾಸ ಮತ್ತು ಪರ್ಯಟನ ವಿಭಾಗ ಹಾಗೂ ಸಮತಾ ಸೈನಿಕ ದಳ ಎಂಬ ನಾಲ್ಕು ಅಂಗಗಳನ್ನು ಸ್ಥಾಪಿಸಿದ್ದರು. ಅಂದಾಜು 70 ವರ್ಷಗಳೇ ಉರುಳಿದರೂ ಈತನಕ ಈ ನಾಲ್ಕು ಅಂಗಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಆರ್‌ಎಸ್‌ಎಸ್‌ ಪಥಸಂಚಲನದ ಬಗೆಗೆ ಚರ್ಚಿಸುವ ಬದಲು ಜಿಲ್ಲೆಯಲ್ಲಿ ಸಮತಾ ಸೈನಿಕ ದಳವನ್ನು ಬಲಪಡಿಸುವ ಅಗತ್ಯವಿದೆ. ತಳಮಟ್ಟದಿಂದ ಸಮತಾ ಸೈನಿಕ ದಳ ಕಟ್ಟಲು ಅ.19ರಿಂದ ಮೂರು ದಿನ ತರಬೇತಿ ಕಾರ್ಯಕ್ರಮ ಆಯೋಜಿಸಿ, ಪ್ರತಿ ತಾಲ್ಲೂಕಿಗೆ 10 ಸೈನಿಕರನ್ನು ಸಜ್ಜುಗೊಳಿಸಲು ಉದ್ದೇಶಿಸಲಾಗಿದೆ’ ಎಂದರು.

ಕಸಾಪ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್.ಧನ್ನಿ ಹಾಗೂ ಶಿಕ್ಷಕಿ ಗೀತಾ ಭರಣಿ, ಕಲಬುರಗಿ ವಿಭಾಗೀಯ ಅಧ್ಯಕ್ಷ ಸಂಜೀವ ಟಿ.ಮಾಲೆ ಮಾತನಾಡಿದರು.

ಮೇಯರ್‌ ವರ್ಷಾ‌ ಜಾನೆ ಉದ್ಘಾಟಿಸಿದರು. ಉಪಮೇಯರ್‌ ತೃಪ್ತಿ ಲಾಖೆ, ಮುಖಂಡರಾದ ಅಶೋಕ ಎಂ.ಕಾಳೆ, ಈರಣ್ಣ ಜಾನೆ, ಪೃಥ್ವಿರಾಜ ದೊಡ್ಡಮನಿ, ಜೆ.ಶಂಕರ ಕೊಪ್ಪಳ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.