ಕಲಬುರಗಿ: ‘ಜಿಲ್ಲೆಯಾದ್ಯಂತ ಬಾಲ್ಯವಿವಾಹದ ನಂತರ ಪ್ರಕರಣ ದಾಖಲಿಸುವುದಷ್ಟೆ ನಮ್ಮ ಕೆಲಸವಾಗಬಾರದು. ಬಾಲ್ಯ ವಿವಾಹ ತಡೆಯುವುದು ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು. ಬಾಲ ಗರ್ಭಿಣಿಯರ ಬಗ್ಗೆ ಆರೋಗ್ಯ ಇಲಾಖೆ ಎಚ್ಚರ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ನಿರ್ದೇಶನ ನೀಡಿದರು
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ಜಿಲ್ಲಾ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಮಹಿಳೆಯರ ಮತ್ತು ಹೆಣ್ಣು ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಅರಿವು ಮೂಡಿಸುವ ಮಿಷನ್ ಸುರಕ್ಷಾ ಅಭಿಯಾನ ಜಿಲ್ಲೆಯಾದ್ಯಂತ ತೀವ್ರಗೊಳಿಸಬೇಕು. ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಕಾವಲು ಸಮಿತಿ ರಚನೆಯಾಗಿದ್ದು, ಇದುವರೆಗೂ ಸಭೆ ನಡೆಸದವರು ತಿಂಗಳಲ್ಲಿ ಸಭೆ ನಡೆಸಬೇಕು’ ಎಂದು ಸೂಚಿಸಿದರು.
ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ‘ಅಂಗನವಾಡಿ ಕೇಂದ್ರದಲ್ಲಿ 6 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಮುಖ ಗುರುತಿಸುವಿಕೆ ಆಧಾರದ ಮೇಲೆ ಅನುದಾನ ಬಿಡುಗಡೆ ಆಗಬೇಕು. ಸಿಡಿಪಿಒಗಳು ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು’ ಎಂದರು.
‘ಮಹಿಳಾ ಸ್ತ್ರೀ ಶಕ್ತಿ ಗುಂಪುಗಳು ಆದಾಯೋತ್ಪನ್ನ ಚಟುವಟಿಕೆಯಲ್ಲಿ ಭಾಗವಹಿಸುವಂತಾಗಲು ಪ್ರೋತ್ಸಾಹ ನೀಡಬೇಕು. ಸಂಚಾರ ಕ್ಯಾಂಟೀನ್, ರೊಟ್ಟಿ ತಯಾರಿಕೆ, ಕೇಕ್ ತಯಾರಿಕೆ, ವಾಹನ ಚಾಲನೆ ತರಬೇತಿ ಕೊಟ್ಟು ವಾಹನದ ಮೂಲಕ ತಮ್ಮ ಉತ್ಪನ್ನಗಳ ಮಾರಾಟ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಆಲೋಚಿಸಬೇಕು’ ಎಂದು ಜಿಲ್ಲಾಧಿಕಾರಿ ಹೇಳಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಜಗದೇವಪ್ಪ, ಡಿಡಿಪಿಐ ಸೂರ್ಯಕಾಂತ ಮದಾನೆ, ಡಿಎಚ್‌ಒ ಡಾ.ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಪಾಟೀಲ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಆರ್‌ಸಿಎಚ್‌ಒ ಡಾ. ಸಿದ್ರಾಮ ಪಾಟೀಲ ಸೇರಿದಂತೆ ತಾಲ್ಲೂಕಿನ ಸಿಡಿಪಿಒಗಳು ಹಾಗೂ ಇತರೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
‘ಹಾಸ್ಟೆಲ್‌ಗಳಿಗೆ ಅನಿರೀಕ್ಷಿತ ಭೇಟಿ ಕೊಡಿ’
ಕಲಬುರಗಿ ನಗರದಲ್ಲಿ ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರತ ಮಹಿಳೆಯರ ಹಾಸ್ಟೆಲ್‌ನಲ್ಲಿ ಮಂಜೂರಾದ 125ರಲ್ಲಿ 35 ಜನ ಮತ್ತು ಗುಲಬರ್ಗಾ ವಿ.ವಿ. ಹಾಸ್ಟೆಲ್‌ನಲ್ಲಿ 196 ರಲ್ಲಿ 37 ಜನ ಮಾತ್ರ ತಂಗಿದ್ದಾರೆ. ಕಲಬುರಗಿ ನಗರ ದೊಡ್ಡದಿದೆ. ಬೇರೆ ಕಡೆಯಿಂದ ಇಲ್ಲಿಗೆ ಕೆಲಸಕ್ಕೆ ಇನ್ನಿತರ ಕಾರ್ಯಕ್ಕೆ ಮಹಿಳೆಯರು ಬರುತ್ತಾರೆ. ಇವರೆಲ್ಲರಿಗೂ ಅನುಕೂಲವಾಗಲೆಂದೇ ಈ ಹಾಸ್ಟೆಲ್ ಆರಂಭಿಸಲಾಗಿದೆ. ಇದಕ್ಕೆ ಹೆಚ್ಚಿನ ಪ್ರಚಾರ ನೀಡಬೇಕು. ಗುಲಬರ್ಗಾ ವಿ.ವಿ. ಹಾಸ್ಟೆಲ್ ಕುರಿತು ಅನೇಕ ದೂರು ಬರುತ್ತಿದ್ದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ವಸತಿ ನಿಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
‘ಲಿಂಗತ್ವ ಅಲ್ಪಸಂಖ್ಯಾತರ ಮುಖ್ಯವಾಹಿನಿಗೆ ತನ್ನಿ’
‘ಕಲಬುರಗಿ ನಗರ ಮತ್ತು ತಾಲ್ಲೂಕು ಕೇಂದ್ರದ ಪ್ರಮುಖ ವೃತ್ತಗಳಲ್ಲಿ ರಸ್ತೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸಾರ್ವಜನಿಕರಿಗೆ ಹಣ ಕೇಳುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಕಿರಿಕಿರಿಯಾಗುತ್ತಿದೆ. ಇದನ್ನು ತಪ್ಪಿಸಿ ಅವರನ್ನು ಮುಖ್ಯ ವಾಹಿನಿಗೆ ತರಬೇಕು. ದಮನಿತ ಮಹಿಳೆಯರು ಮಾಜಿ ದೇವಾದಾಸಿ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ವಿವಿಧ ವಸತಿ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೆ ಟ್ರಾನ್ಸ್‌ಜೆಂಡರ್ ಕಾರ್ಡ್ ನೀಡಿ ಅವರನ್ನು ಗುರುತಿಸಬೇಕು. ನಂತರ ಅವರಿಗೆ ಸ್ವಯಂ ಉದ್ಯೋಗ ತರಬೇತಿ ಕೊಡಬೇಕು. ನರೇಗಾ ಜಾಬ್ ಕಾರ್ಡ್ ನೀಡಿ ಉದ್ಯೋಗ ಕೊಡಿಸಬೇಕು’ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.