ADVERTISEMENT

ಅಂಬೇಡ್ಕರ್‌ ಜಯಂತಿ ಸಾಂಕೇತಿಕ ಆಚರಣೆಗೆ ಡಿ.ಸಿ ಸೂಚನೆ; ಪ್ರತಿಭಟನೆ

ಬಾಬು ಜಗಜೀವನರಾಂ ಹಾಗೂ ಡಾ.ಅಂಬೇಡ್ಕರ್‌ ಅವರ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 2:36 IST
Last Updated 2 ಏಪ್ರಿಲ್ 2021, 2:36 IST
ಡಾ.ಬಿ.ಆರ್. ಅಂಬೇಡ್ಕರ್‌ ಹಾಗೂ ಜಗಜೀವನರಾಂ ಅವರ ಜಯಂತಿ ಆಚರಣೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ, ಕಲಬುರ್ಗಿಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಡಿಸಿಪಿ ಕೊಶೋರ ಬಾಬು ಅವರನ್ನು ಸುತ್ತುವರಿದಿರುವುದು
ಡಾ.ಬಿ.ಆರ್. ಅಂಬೇಡ್ಕರ್‌ ಹಾಗೂ ಜಗಜೀವನರಾಂ ಅವರ ಜಯಂತಿ ಆಚರಣೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ, ಕಲಬುರ್ಗಿಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಡಿಸಿಪಿ ಕೊಶೋರ ಬಾಬು ಅವರನ್ನು ಸುತ್ತುವರಿದಿರುವುದು   

ಕಲಬುರ್ಗಿ: ಕೋವಿಡ್‌ ಹಾವಳಿ ಹೆಚ್ಚಿರುವ ಕಾರಣ ಅಂಬೇಡ್ಕರ್‌ ಜಯಂತಿಯನ್ನು ಸರಳವಾಗಿ ಆಚರಿಸಬೇಕು ಎಂಬ ಜಿಲ್ಲಾಧಿಕಾರಿ ಮನವಿಗೆ ವಿರೋಧ ವ್ಯಕ್ತಪಡಿಸಿದ ಕೆಲ ಸಂಘಟನೆಗಳವರು, ‘ಕೋವಿಡ್‌ ಬಂದು ಜೀವ ಹೋದರೂ ಚಿಂತೆಯಿಲ್ಲ. ಜಯಂತಿ ಆಚರಿಸದೇ ಬಿಡುವುದಿಲ್ಲ’ ಎಂದು ಪಟ್ಟು ಹಿಡಿದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಏ. 5ರಂದು ಡಾ.ಬಾಬು ಜಗಜೀವನರಾಂ ಜಯಂತಿ ಹಾಗೂ 14ರಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತ್ಯುತ್ಸವ ಸಂಬಂಧ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಗುರುವಾರ ಇಲ್ಲಿ ವಿವಿಧ ಸಂಘಟನೆಗಳ ಸಭೆ ಕರೆಯಲಾಗಿತ್ತು.

‘ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸಬೇಕಾಗಿದೆ. ಹಾಗಾಗಿ, ಜಯಂತಿಗಳನ್ನು ಸರಳವಾಗಿ ಆಚರಿಸಬೇಕು’ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮನವಿ ಮಾಡಿದರು.

ADVERTISEMENT

ಇದಕ್ಕೆ ತಕರಾರು ತೆಗೆದ ಮುಖಂಡರು, ‘ರಾಜಕೀಯ ಸಭೆ, ಚುನಾವಣಾ ಪ್ರಚಾರ ಮಾಡಲು ನಿಮಗೇನೂ ತೊಂದರೆ ಆಗುವುದಿಲ್ಲ. ಆದರೆ, ಅಂಬೇಡ್ಕರ್‌ ಜಯಂತಿಯನ್ನು ಉದ್ದೇಶಪೂರ್ವಕವಾಗಿ ತಡೆಯುತ್ತಿದ್ದೀರಿ. ಪ್ರತಿ ಬಾರಿ ಏಪ್ರಿಲ್‌, ಮೇ ತಿಂಗಳಲ್ಲಿ ಸರ್ಕಾರಗಳು ಈ ನಾಟಕ ಶುರು ಮಾಡುತ್ತಿವೆ’ ಎಂದು ಮುಖಂಡ ಪ್ರಕಾಶ ಮೂಲಭಾರತಿ ಆಕ್ರೋಶ ಹೊರಹಾಕಿದರು.

‘ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ 10 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದ್ದವು. ಅದು 100 ತಲುಪಲು ಮೂರು ತಿಂಗಳು ಹಿಡಿದಿತ್ತು. ಆದರೆ, ಈ ವರ್ಷ ಪ್ರತಿ ದಿನ 150ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈಗಾಗಲೇ 1,200ಕ್ಕೂ ಹೆಚ್ಚು ಜನರಿಗೆ ಒಂದೇ ತಿಂಗಳಲ್ಲಿ ಸೋಂಕು ಅಂಟಿಕೊಂಡಿದೆ. ಪತ್ತೆಯಾಗದೇ ಇರುವವರು ಇನ್ನೂ ಸಾವಿರ ಸಂಖ್ಯೆಯಲ್ಲಿದ್ದಾರೆ. ಪರಿಸ್ಥಿತಿ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಪ್ರತಿ ದಿನ ಒಬ್ಬರು, ಇಬ್ಬರು ಸಾಯುತ್ತಲೇ ಇದ್ದಾರೆ. ವೈರಾಣು ದಿನೇದಿನೇ ಹಬ್ಬುತ್ತಿದೆ. ನಾವು ನಮ್ಮ ಜನರನ್ನು ಕಳೆದುಕೊಳ್ಳಯತ್ತಿದ್ದೇವೆ. ಪ್ರಾಣ ಹಾನಿ ಮಾಡಿ ಜಯಂತಿ ಆಚರಿಸಿ ಎಂದು ಯಾವ ಮಹಾತ್ಮರೂ ಬಯಸುವುದಿಲ್ಲ’ ಎಂದು ಪರಿಪರಿಯಾಗಿ ಹೇಳಿದರು.

‘ಅಧಿಕಾರಿಗಳ ಈ ನಡೆ ಪರಿಶಿಷ್ಟ ಸಮುದಾಯಗಳಿಗೆ ನೋವು ಮಾಡುತ್ತದೆ. ಇದರ ಪರಿಣಾಮ ಗಂಭೀರವಾಗುತ್ತವೆ’ ಎಂದು ಮತ್ತೆ ಕೆಲ ಮುಖಂಡರು ಏರುದನಿಯಲ್ಲಿ ಮಾತನಾಡಿದರು.

ಇದರಿಂದ ಬೇಸರಗೊಂಡ ಜಿಲ್ಲಾಧಿಕಾರಿ, ‘ಸಮುದಾಯದ ಮುಖಂಡರಿಗೆ ಮನವರಿಕೆ ಮಾಡುವ ಉದ್ದೇಶದಿಂದಲೇ ಸಭೆ ಕರೆದಿದ್ದೇವೆ. ನೀವು ಸರಿಯಾಗಿ ಮಾತನಾಡಬೇಕು. ಅನಗತ್ಯ ಮಾತುಗಳನ್ನು ಬಳಸಬಾರದು. ಮಹಾತ್ಮರ ಜಯಂತಿ ಆಚರಿಸುವ ವೇಳೆ ಸೋಂಕು ವ್ಯಾಪಿಸಿದರೆ ಅವರ ಹೆಸರಿಗೆ ಕಳಂಕ ಬರುತ್ತದೆ. ಇಂಥ ಸಂದಿಗ್ದ ಸಂದರ್ಭದಲ್ಲಿ ಆ ಮಹಾತ್ಮರು ಇದ್ದಿದ್ದರೆ ಇದೇ ನಿರ್ಧಾರ ಕೈಗೊಳ್ಳುತ್ತಿದ್ದರು.ಸರ್ಕಾರದ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಲೇಬೇಕು. ಇದೇ ನಾವು ಮಹಾತ್ಮರಿಗೆ ನೀಡುವ ಗೌರವ. ಅದ್ಧೂರಿ ಜಯಂತಿ ಮಾಡಿ ಮಹಾತ್ಮರ ಹೆಸರಿಗೆ ಕಳಂಕ ಅಂಟಿಸುವ ಕೆಲಸವನ್ನು ಯಾರೂ ಮಾಡಕೂಡದು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಪ್‌ ಸಾಸಿ, ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾರಕ ಲೋಖಂಡೆ, ಡಿಸಿಪಿ ಕಿಶೋರಬಾಬು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ. ಅಲ್ಲಾಭಕಷ್‌, ಡಾ.ಬಿ.ಆರ್. ಅಂಬೇಡ್ಕರ್‌ ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷ ಪ್ರಕಾಶ ಔರಾದಕರ್, ಡಾ.ಬಾಬು ಜಗಜೀವನರಾಂ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರಾಜು ವಾಡೇಕರ, ಮುಖಂಡರಾದ ಬಂತೇಜಿ ಧಮ್ಮನಾಗ್, ಮುಖಂಡರಾದ ಸುರೇಶ ಹಾದಿಮನಿ, ಪ್ರಕಾಶ ಮೂಲಭಾರತಿ, ಸಾಗರ, ದಶರಥ ಕುಲಗರ್ತಿ, ಪರಮೇಶ್ವರ ಖಾನಾಪುರ ಹಲವರು ಇದ್ದರು.

ಜಿಲ್ಲಾಧಿಕಾರಿ ಸಭೆಯಿಂದ ಹೊರನಡೆದ ನಂತರ, ಮುಖಂಡರು ಪ್ರತಿಭಟನೆ ನಡೆಸಿದರು. ಕೆಲಕಾಲ ಸಭಾಂಗಣದಲ್ಲೇ ಕುಳಿತು ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮಾತುಕತೆ ನಡೆಸಿದರು.

ನೀವೇ ಹೊಣೆಗಾರರಾಗುತ್ತೀರಿ: ಎಚ್ಚರಿಕೆ

‘ಮಹಾತ್ಮರ ಜಯಂತಿಗಳನ್ನು ಜಿಲ್ಲಾಡಳಿತವೇ ಸಂಕ್ಷಿಪ್ತವಾಗಿ ಆಚರಿಸುತ್ತದೆ. ಇದಕ್ಕಾಗಿ ಇರುವ ಜಯಂತಿ ಉತ್ಸವ ಸಮಿತಿಯಲ್ಲಿ ಅಧಿಕಾರಿಗಳು, ಮುಖಂಡರು ಇದ್ದಾರೆ. ಅವರು ತೆಗೆದುಕೊಂಡ ನಿರ್ಣಯದಂತೆ ನಾವು ಕಾನೂನು ಪಾಲನೆ ಮಾಡಬೇಕಾಗುತ್ತದೆ. ತ‍ಪ್ಪು ತಿಳಿವಳಿಕೆಯಿಂದ ಅದ್ಧೂರಿ ಕಾರ್ಯಕ್ರಮ ಮಾಡಿ, ಸೋಂಕು ವ್ಯಾಪಿಸಿದರೆ ಅದಕ್ಕೆ ನೀವೇ ಕಾರಣರಾಗುತ್ತೀರಿ’ ಎಂದು ಡಿಸಿಪಿ ಕಿಶೋರ ಬಾಬು ಎಚ್ಚರಿಕೆ ನೀಡಿದರು.

‘ನಾವು ಯಾವುದೇ ಕಾನೂನು ಮುರಿಯುವುದಿಲ್ಲ. ಮಾಸ್ಕ್‌ ಹಾಕಿಕೊಂಡು, ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್‌ ಬಳಸಿಯೇ ಕಾರ್ಯಕ್ರಮ ಮಾಡುತ್ತೇವೆ. ಒಂದೊಂದು ಏರಿಯಾದರಿಂದ ಕನಿಷ್ಠ 100 ಜನ ಸೇರಲು ಅವಕಾಶ ಕೊಡಿ’ ಎಂದು ಮುಖಂಡರೊಬ್ಬರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.